ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಬಂಧ ಮುಗೀತು, ರಾಜೀನಾಮೆ ಕೊಡ್ತೇನೆ’: ಸಿ.ಎಂ ಇಬ್ರಾಹಿಂ ಕಿಡಿ

Last Updated 27 ಜನವರಿ 2022, 20:38 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕನ ಸ್ಥಾನದ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ ಸದಸ್ಯ ಸಿ.ಎಂ. ಇಬ್ರಾಹಿ, ಇದೀಗ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ‘ಕಾಂಗ್ರೆಸ್ಸಿಗೂ ನನಗೂ ಮುಗಿದ ಅಧ್ಯಾಯ. ಮೂರು ವರ್ಷದ ವಿಧಾನ ಪರಿಷತ್ ಸ್ಥಾನಕ್ಕೆ ಶೀಘ್ರ ರಾಜೀನಾಮೆಕೊಡುತ್ತೇನೆ‘ ಎಂದಿದ್ದಾರೆ.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ನನಗೆ ಸ್ಥಾನ ತಪ್ಪಿದರ ಬಗ್ಗೆ ಸಿದ್ದರಾಮಯ್ಯ ಉತ್ತರ ಕೊಡಬೇಕು. ದೆಹಲಿಯವರು ಏನು ಹೇಳಿದರು ಎನ್ನುವುದಕ್ಕೆ ಎಲ್ಲ ದಾಖಲೆಗಳಿವೆ’ ಎಂದರು.

‘ತಬ್ಬಲಿಯೂ ನೀನಾದೆಯಾ ಎಂಬಂತಾಗಿದೆ ನನ್ನ ಸ್ಥಿತಿ. ಸಿದ್ದರಾಮಯ್ಯ ಅವರಿಗಾಗಿ ದೇವೇಗೌಡರಂಥ ಮಹಾ ನಾಯಕನನ್ನು ಬಿಟ್ಟು ಬಂದೆ. ಇವತ್ತು ಗುರುವಾರ ಉಪವಾಸ ಇದ್ದೇನೆ. ಇದಕ್ಕೆ ಕರ್ನಾಟಕದ ರಾಜ್ಯದ ಜನ ಉತ್ತರ ಕೊಡುತ್ತಾರೆ’ ಎಂದೂ ಆಕ್ರೋಶ ವ್ಯಕ್ತಪಡಿಸಿದರು.

‘ಎಐಸಿಸಿ ತೀರ್ಮಾನ ನೋಡಿ ಮನಸ್ಸಿಗೆ ಸಂತೋಷ ಆಯಿತು. ಬಿ.ಕೆ. ಹರಿಪ್ರಸಾದ್, ಡಿ.ಕೆ. ಶಿವಕುಮಾರ್ ಒಳ್ಳೆಯ ತಂಡ. ವಿಚಾರಧಾರೆಗಳು ಒಂದೇ ಆಗಿರುವುದರಿಂದ ಹರಿಪ್ರಸಾದ್ ಅವರನ್ನು ನೇಮಕ ಮಾಡಿದ್ದಾರೆ. ನನ್ನ ಹಿತೈಷಿಗಳ ಸಭೆ ಕರೆದು, ಆದಷ್ಟು ಬೇಗೆ ನನ್ನ ಮುಂದಿನ ನಡೆಯ ಬಗ್ಗೆ ತೀರ್ಮಾನಿಸುತ್ತೇನೆ’ ಎಂದರು.

‘ಸಿದ್ದರಾಮಯ್ಯ ಅವರನ್ನು ಬಾದಾಮಿಗೆ ಕರೆದುಕೊಂಡು ಹೋಗಿ ನಾಮಪತ್ರ ಹಾಕಿಸಿದ್ದೆ ನಾನು. ಸಿದ್ದರಾಮಯ್ಯ ಅವರಿಗೆ ಹೊಸ ರಾಜಕೀಯ ಜೀವನ ಕೊಟ್ಟಿದ್ದಕ್ಕೆ ಅವರು ಒಳ್ಳೆಯ ಉತ್ತರ ಕೊಟ್ಟಿದ್ದಾರೆ. ಇವತ್ತಿನಿಂದ ಜೋಳಿಗೆ ಧರಿಸಿ, ಜನರ ಬಳಿ ಹೋಗುತ್ತೇನೆ’ ಎಂದೂ ಹೇಳಿದರು.

‘ರಾತ್ರಿಯಿಂದ ನನಗೆ ಸಾಕಷ್ಟು ದೂರವಾಣಿ ಕರೆಗಳು ಬರುತ್ತಿವೆ. ಪಶ್ಚಿಮ ಬಂಗಾಳ, ಬಿಹಾರದಿಂದಲೂ ಕರೆ ಬಂದಿದೆ. ಕುಮಾರಸ್ವಾಮಿ ಬೆಳಿಗ್ಗೆ ಕರೆ ಮಾಡಿದ್ದರು. ಕಾಂಗ್ರೆಸ್‌ನವರೂ ಕರೆ ಮಾಡಿದ್ದರು. ನಾನು ಅವರ ಬಗ್ಗೆ ಹೇಳಿದರೆ ತೊಂದರೆ ಆಗಲಿದೆ. ರಾಜ್ಯ ಕಾಂಗ್ರೆಸ್ ನಾಯಕರಿಗೆ ದೇವರು ಒಳ್ಳೆಯದು ಮಾಡಲಿ. ಕಾಂಗ್ರೆಸ್‌ ಸೀಟು 120ರಿಂದ 80 ಬಂತು. 80ರಿಂದ ಎಷ್ಟು ಬರಲಿದೆ ನೋಡಿ’ ಎಂದೂ ವಾಗ್ದಾಳಿ ನಡೆಸಿದರು.

‘ನಾನು ಹೇಳಿದಂತೆ ರಾಜ್ಯದಲ್ಲಿ ಆಗುತ್ತಾ ಬಂದಿದೆ. ಉತ್ತರ ಪ್ರದೇಶ ಚುನಾವಣೆಯ ಬಳಿಕ ಸಾರ್ವತ್ರಿಕ ಚುನಾವಣೆ, ಇಲ್ಲವೇ ರಾಷ್ಟ್ರಪತಿ ಆಡಳಿತ. ನಾನು ಕೊಡುವ ಡೋಸ್‌ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆ ನೋಡೋಣ. ಮಾಧ್ಯಮದವರೇ ನನಗೆ ರಕ್ಷಾ ಕವಚ. ಹಣ ಬಲ, ತೋಳ್ಬಲ, ಹೋಳಿಗೆ ಊಟ ಹಾಕಿಸುವ ಸಾಮರ್ಥ್ಯ ನನಗಿಲ್ಲ. ಸಾಮಾಜಿಕ ನ್ಯಾಯ ಕೇಳಿದರೆ ಹೀಗೆ ಮಾಡಿದ್ದಾರೆ’ ಎಂದೂ ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಸೇರುತ್ತೀರಾ ಎಂದು ಕೇಳಿದ ಪ್ರಶ್ನೆಗೆ, ‘ಅದು ಕೇಶವ ಕೃಪಾ, ನಾನು ಬಸವಕೃಪಾ ಹೇಗೆ ಒಂದಾಗಲು ಸಾಧ್ಯ?’ ಎಂದು ತಮ್ಮದೇ ಧಾಟಿಯಲ್ಲಿ ಪ್ರತಿಕ್ರಿಯಿಸಿದರು.

***

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಹೈಕಮಾಂಡ್‌ ಈಗಾಗಲೇ ನೇಮಕ ಮಾಡಿದೆ. ಈಗ ಏನೂ ಮಾಡಲಾಗದು. ಎಲ್ಲರೂ ಒಪ್ಪಬೇಕಾಗುತ್ತದೆ

- ಸತೀಶ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ

***

ಇಬ್ರಾಹಿಂ ಹಿರಿಯ ನಾಯಕರು. ಸತತ ಎರಡು ಬಾರಿ ಮೇಲ್ಮನೆ ಸದಸ್ಯರಾಗಿ ಮಾಡಲಾಗಿದೆ. ಅಸಮಾಧಾನದಿಂದ ಮಾತನಾಡಿದ್ದಾರೆ. ಅವರ ಜತೆ ಮಾತನಾಡುತ್ತೇನೆ

- ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

***
‘ಜೆಡಿಎಸ್‌ಗೆ ಬಂದರೆ ಸೂಕ್ತ ಸ್ಥಾನ’

‘ಇಬ್ರಾಹಿಂ ಅವರಿಗೆ ದೇವೇಗೌಡರು ಹಾಗೂ ಜೆಡಿ‌ಎಸ್ ಬಗ್ಗೆ ಇನ್ನೂ ವ್ಯಾಮೋಹ ಇದೆ.‌ ಗುರುವಾರ ಕರೆ ಮಾಡಿ ಮಾತಾಡಿದ್ದೇನೆ. ಅವರು ನಮ್ಮ ಪಕ್ಷಕ್ಕೆ ಬಂದರೆ ಸೂಕ್ತ ಸ್ಥಾನಮಾನ ಕೊಡುತ್ತೇವೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

‘ನಾವು ಕದ್ದುಮುಚ್ಚಿ ಯಾವುದನ್ನೂ ಮಾಡಿಲ್ಲ. ಹಿರಿಯರಾದ ಇಬ್ರಾಹಿಂ ಅವರು ಪಕ್ಷ ಹಾಗೂ ದೇವೇಗೌಡರ ಏಳು ಬೀಳುಗಳಲ್ಲಿ ಜತೆಯಾದವರು.‌ ಪರಿಷತ್ತಿನ ವಿರೋಧಪಕ್ಷದ ನಾಯಕರ ಸ್ಥಾನಕ್ಕೆ ಅವರ ಹೆಸರು ಪ್ರಸ್ತಾಪವಾಗಿತ್ತು. ಸಿಕ್ಕಿದರೆ ಉಪಯೋಗ ಮಾಡಿಕೊಳ್ಳಿ ಎಂದೂ ಹೇಳಿದ್ದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT