ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಮ್ಮಾಯಿ ನಾಯಕತ್ವ ಅಬಾಧಿತ: ನಾಲ್ವರಿಗೆ ಉ‍ಪಮುಖ್ಯಮಂತ್ರಿ ಪಟ್ಟ?

ಸಂಪುಟ ಪುನರ್‌ರಚನೆ ಖಚಿತ
Last Updated 3 ಮೇ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೇ ಮುಂದಿಟ್ಟುಕೊಂಡು ವಿಧಾನಸಭೆ ಚುನಾವಣೆ ಎದುರಿಸಲು ಸಜ್ಜಾಗಿರುವ ಬಿಜೆಪಿ ವರಿಷ್ಠರು, ರಾಜ್ಯ ಸಚಿವ ಸಂಪುಟಕ್ಕೆ ಹೊಸ ಖದರು ಕೊಡಲು ನಿಶ್ಚಯಿಸಿದ್ದಾರೆ.

ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ ಊಹಾಪೋಹಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತೆರೆ ಎಳೆದಿದ್ದಾರೆ. ಬೊಮ್ಮಾಯಿ ಜತೆ ನಡೆಸಿದ ಖಾಸಗಿ ಮಾತುಕತೆ ವೇಳೆ, ‘ಉತ್ತಮ ಕಾರ್ಯಕ್ರಮಗಳನ್ನು ನೀಡಿ ಸರ್ಕಾರವನ್ನು ಮುನ್ನಡೆಸುತ್ತಿದ್ದೀರಿ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಅಭಿವೃದ್ಧಿಗೆ ವೇಗ ನೀಡಿ. ನಿಮ್ಮ ಜತೆ ನಾವು ನಿಲ್ಲುತ್ತೇವೆ’ ಎಂದು ಶಾ ಭರವಸೆ ನೀಡಿದ್ದಾರೆ. ಹೀಗಾಗಿ, ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಖಚಿತ’ ಎಂದು ಮೂಲಗಳು ಹೇಳಿವೆ.

ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ಸಂಪುಟ ಪುನರ್‌ರಚನೆ ಯತ್ತ ಬಿಜೆಪಿ ವರಿಷ್ಟರು ಚಿತ್ತ ಹರಿಸಿದ್ದಾರೆ.ಹೀಗಾಗಿ, 4 ರಿಂದ 5 ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವುದು ಖಚಿತ. ಪುನರ್‌ ರಚನೆ ವೇಳೆ ಮೂರರಿಂದ ನಾಲ್ಕು ಮಂದಿಗೆ ಉಪಮುಖ್ಯಮಂತ್ರಿ ಸ್ಥಾನ ದಕ್ಕುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಬೊಮ್ಮಾಯಿ, ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್‌. ಸಂತೋಷ್‌ ಮತ್ತು ಇತರ ನಾಯಕರ ಜತೆ ಈ ಸಂಬಂಧಭಾನುವಾರ ರಾತ್ರಿ ಎರಡೂವರೆಯಿಂದ ಮೂರು ತಾಸು ಚರ್ಚೆ ನಡೆದಿದೆ. ಸೋಮವಾರ ರಾತ್ರಿ ಬೆಂಗಳೂರಿಗೆ ಬಂದಿಳಿದ ಅಮಿತ್ಶಾ ಅವರು, ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಬಿ.ಎಸ್‌. ಯಡಿಯೂರಪ್ಪ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಅವರ ಜತೆ ತಡರಾತ್ರಿವರೆಗೂ ಸಮಾಲೋಚನೆ ನಡೆಸಿದ್ದಾರೆ. ಈ ವೇಳೆ ಸಂಪುಟ ಪುನರ್‌ರಚನೆಯ ಬಗ್ಗೆ ಗಂಭೀರ ಚರ್ಚೆ ನಡೆದಿದೆ ಎಂದು ಗೊತ್ತಾಗಿದೆ.

ಏತನ್ಮಧ್ಯೆ, ಸಂಪುಟಕ್ಕೆ ಸೇರ್ಪಡೆಗೊಳ್ಳುವವರ ಪಟ್ಟಿಯೊಂದನ್ನು ಸಂತೋಷ್‌ ದೆಹಲಿಗೆ ಒಯ್ದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಯುರೋಪ್‌ ಪ್ರವಾಸ ಮುಗಿಸಿ ಬಂದ ಬಳಿಕ ಅವರ ಜತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಬಹುತೇಕ ಮೇ 10ರೊಳಗೆ ಪುನರ್‌ ರಚನೆ ಕಸರತ್ತು ಮುಗಿಯಲಿದೆಎಂದು ಮೂಲಗಳು ತಿಳಿಸಿವೆ.

ಈಗಾಗಲೇ 5 ಸಚಿವ ಸ್ಥಾನಗಳು ಖಾಲಿ ಇವೆ. 4 ರಿಂದ 5 ಮಂದಿಯನ್ನು ಕೈಬಿಟ್ಟು ಒಟ್ಟು 9 ರಿಂದ 10 ಮಂದಿ ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡಲಾಗುವುದು. ಇದೇ ವೇಳೆ ಹಲವು ಸಚಿವರ ಖಾತೆಗಳೂ ಬದಲಾಗಲಿವೆ. ಕೆಲವು ಸಚಿವರ ಕಾರ್ಯವೈಖರಿಯ ಬಗ್ಗೆ ವರಿಷ್ಠರಿಗೆ ತೃಪ್ತಿ ಇಲ್ಲ. ಸರ್ಕಾರ ವರ್ಚಸ್ಸು ಹೆಚ್ಚಿಸುವ ಕೆಲಸವನ್ನೂ ಮಾಡುತ್ತಿಲ್ಲ. ಪಕ್ಷದ ಸಂಘಟನೆಯಲ್ಲೂ ತೊಡಗಿಸಿಕೊಂಡಿಲ್ಲ. ಅಂತಹವರ ಪಟ್ಟಿಯೊಂದನ್ನು ಸಿದ್ಧ ಮಾಡಿದ್ದು, ಅವರನ್ನು ಕೈಬಿಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಅಧ್ಯಕ್ಷ ಸ್ಥಾನವೂ ಬದಲು:ವಿಧಾನಸಭಾ ಚುನಾವಣೆಯ ಹೊತ್ತಿಗೆ ಹೆಚ್ಚು ಆಕ್ರಮಣಕಾರಿಯಾಗಿ ಪಕ್ಷವನ್ನು ಮುನ್ನಡೆಸಲು ಮತ್ತು ಸಂಘಟನೆಯನ್ನು ಬಲಪಡಿಸಲು ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಯುವ ನಾಯಕರ ಹುಡುಕಾಟದಲ್ಲಿ ಬಿಜೆಪಿ ವರಿಷ್ಠರು ತೊಡಗಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಇಂಧನ ಸಚಿವ ವಿ.ಸುನಿಲ್‌ಕುಮಾರ್‌, ಶಾಸಕ ಅರವಿಂದ ಲಿಂಬಾವಳಿ ಅವರ ಹೆಸರು ಪರಿಶೀಲನೆಯಲ್ಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

‘ಮುಖ್ಯಮಂತ್ರಿ ಬದಲಾವಣೆ ಇಲ್ಲ’

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ. ಅವರು ಕಾಮನ್ ಮ್ಯಾನ್ ಸಿಎಂ’ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬದಲಾವಣೆ ಚರ್ಚೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತೆರೆ ಎಳೆದಿದ್ದಾರೆ.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯಾಗಿಅವರೇ ಮುಂದುವರಿಯಬೇಕು ಎಂದು ರಾಜ್ಯದ ಜನರೂ ಬಯಸಿದ್ದಾರೆ’ ಎಂದರು.

ಮುಂಬರುವ ವಿಧಾನಸಭಾ ಚುನಾವಣೆಯನ್ನು ಅವರ ನೇತೃತ್ವದಲ್ಲಿ ಎದುರಿಸಲಾಗುವುದು ಮತ್ತು ಮುಂದಿನ ಮುಖ್ಯಮಂತ್ರಿ ಅವರೇ ಆಗಲಿದ್ದಾರೆ ಎಂದರು.

ಇದಕ್ಕೆ ಧ್ವನಿಗೂಡಿಸಿರುವ ಕಂದಾಯ ಸಚಿವ ಆರ್.ಅಶೋಕ, ಯಾವುದೇ ಕಾರಣಕ್ಕೂ ಬೊಮ್ಮಾಯಿ ಬದಲಾವಣೆ ಇಲ್ಲ. ನಾಯಕತ್ವ ಬದಲಾವಣೆ ಎಂಬುದು ಊಹಾಪೋಹಗಳು. ಆದ್ದರಿಂದ ಯಾರೂ ಮುಖ್ಯಮಂತ್ರಿ ಬದಲಾವಣೆ ಕನಸು ಕಾಣುವ ಅಗತ್ಯವಿಲ್ಲ. ಬೊಮ್ಮಾಯಿ ಅವರಿಗೆ ಕೇಂದ್ರ ನಾಯಕರ ಆಶೀರ್ವಾದ ಇದೆ ಎಂದರು.

‘ಚುನಾವಣೆಗೆ ಬೊಮ್ಮಾಯಿ ನೇತೃತ್ವ’

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವ ಮತ್ತು ಹಿರಿಯ ಶಾಸಕ ಬಿ.ಎಸ್‌.ಯಡಿಯೂರಪ್ಪ ಮಾರ್ಗದರ್ಶನದಲ್ಲೇ ಎದುರಿಸಿ, 150 ಸ್ಥಾನಗಳನ್ನು ಗೆಲ್ಲುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ತಿಳಿಸಿದರು. ‘ನಮ್ಮ ಪಕ್ಷದೊಳಗೆ ಅಥವಾ ಸರ್ಕಾರದಲ್ಲಿ ನಾಯಕತ್ವದ ಗೊಂದಲ ಇಲ್ಲ. ನಾಯಕ
ತ್ವದ ಬದಲಾವಣೆ ಕುರಿತು ಯಾರಿಗಾದರೂ ಭ್ರಮೆ ಇದ್ದರೆ, ಆ ಭ್ರಮೆಯಲ್ಲಿ ತೇಲಾಡುತ್ತಿದ್ದರೆ, ಅದನ್ನು ಬಿಟ್ಟುಬಿಡುವುದು ಒಳ್ಳೆಯದು’ ಎಂದರು. ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ ಕುರಿತು ಪ್ರಶ್ನಿಸಿದಾಗ, ‘ನಿಮಗೆ ಭಾರೀ ಆತುರ ಇದ್ದರೆ ತೆಗೆದುಬಿಡಿ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT