ಶನಿವಾರ, ಅಕ್ಟೋಬರ್ 16, 2021
29 °C
ಪೊಲೀಸ್‌ ಬಡ್ತಿಗೆ ಕಡ್ಡಾಯ ಸೇವೆ 4 ವರ್ಷಕ್ಕೆ ಇಳಿಕೆ

ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ತೀರ್ಪು ಜಾರಿ: ಸಂಪುಟ ಉಪಸಮಿತಿ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆ ಬಾಬಾಬುಡನ್‌ಗಿರಿಯಲ್ಲಿರುವ ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿರುವ ತೀರ್ಪಿನ ಅನುಷ್ಠಾನಕ್ಕಿರುವ ಸಾಧಕ– ಬಾಧಕಗಳ ಬಗ್ಗೆ ಚರ್ಚಿಸಿ ವರದಿ ಪಡೆಯಲು ಸಂಪುಟ ಉಪಸಮಿತಿ ರಚಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಈ ಸಮಿತಿಯಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಕಂದಾಯ ಸಚಿವ ಆರ್‌. ಅಶೋಕ, ಕನ್ನಡ ಮತ್ತು ಸಂಸ್ಕೃತಿ, ಇಂಧನ ಸಚಿವ ವಿ.ಸುನಿಲ್‌ಕುಮಾರ್‌ ಮತ್ತು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಸದಸ್ಯರಾಗಿದ್ದಾರೆ.

ಮಂಗಳವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕಕ್ಕೆ ಸಂಬಂಧಿಸಿದಂತೆ ಸಮಿತಿಯೊಂದನ್ನು ರಚಿಸುವಂತೆ ಹೈಕೋರ್ಟ್‌ ನೀಡಿರುವ ತೀರ್ಪು ನೀಡಿತ್ತು. ‘ಮುಜರಾಯಿ ಇಲಾಖೆಯೇ ಸಮಿತಿಯನ್ನು ರಚನೆ ಮಾಡಿ ಅದರ ಅಭಿಪ್ರಾಯದ ಪ್ರಕಾರ ಅರ್ಚಕರನ್ನು ನೇಮಕ ಮಾಡಬೇಕು’ ಎಂಬ ಒತ್ತಾಯ ಸಂಘ ಪರಿವಾರದಿಂದ ಕೇಳಿ ಬಂದಿತ್ತು.

ಮಂಡ್ಯದ ಮೈಶುಗರ್‌ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರು ನಡೆಸಬೇಕೇ ಅಥವಾ ಸರ್ಕಾರ ನಡೆಸಬೇಕೆ ಎಂಬ ಬಗ್ಗೆ ವರದಿ ಪಡೆಯಲು ಸಂಪುಟ ಉಪಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಆದಷ್ಟು ಬೇಗ ವರದಿ ಪಡೆದು ಅದರ ಆಧಾರದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಈ ಸಮಿತಿಯಲ್ಲಿ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮತ್ತು ಕಂದಾಯ ಸಚಿವ ಆರ್‌. ಅಶೋಕ ಸದಸ್ಯರಾಗಿರುತ್ತಾರೆ ಎಂದು ಮಾಧುಸ್ವಾಮಿ ಹೇಳಿದರು.

ಇತರ ಪ್ರಮುಖ ತೀರ್ಮಾನಗಳು

* ಪೊಲೀಸ್‌ ಲಿಪಿಕ ಸೇವೆ ನೇಮಕ ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದೆ. ಇದರ ಅನ್ವಯ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಯಿಂದ ಹಿಡಿದು ಸಬ್‌ ಇನ್ಸ್‌ಪೆಕ್ಟರ್‌ವರೆಗೆ ಬಡ್ತಿ ಪಡೆಯಲು ಎಂಟು ವರ್ಷ ಕಡ್ಡಾಯ ಸೇವೆಯನ್ನು ನಾಲ್ಕು ವರ್ಷಕ್ಕೆ ಇಳಿಸಲಾಗಿದೆ. ಈ ಹಿಂದೆ ಐದು ವರ್ಷ ಇತ್ತು. ಅದನ್ನು ಈಗ ನಾಲ್ಕು ವರ್ಷಕ್ಕೆ ಇಳಿಸಲಾಗಿದೆ. ಬಡ್ತಿಗೆ ಅರ್ಹ ಅಭ್ಯರ್ಥಿಗಳು ಇಲ್ಲದಾಗ ಈ ರೀತಿಯ ವರ್ಗಾವಣೆಗೆ ಅವಕಾಶ ನೀಡಲಾಗಿದೆ. 

* ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ನದಿಗಳು ಸಮುದ್ರ ಸೇರುವ ಜಾಗದಲ್ಲಿ ತಡೆಗೋಡೆ ನಿರ್ಮಿಸುವ ಕಾರ್ಲಾಂಡ್‌ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಸಮುದ್ರದ ನೀರು ನದಿಗೆ ನುಗ್ಗಿ ಉಪ್ಪಾಗುವುದನ್ನು ತಡೆಯುವುದು ಮತ್ತು ಸಿಹಿ ನೀರನ್ನು ಕೃಷಿ, ಸಿಗಡಿ ಸಾಕಾಣಿಕೆ ಮತ್ತು ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಲು ಉದ್ದೇಶಿಸಲಾಗಿದೆ. ಈ ಯೋಜನೆಗೆ ₹300 ಕೋಟಿ ನೀಡಲು ಒಪ್ಪಿಗೆ ನೀಡಲಾಗಿದೆ. ಇದು ಯಶಸ್ವಿಯಾದರೆ, ₹1,500 ಕೋಟಿ ವೆಚ್ಚದಲ್ಲಿ ಉತ್ತರಕನ್ನಡ ಮತ್ತು ಉಡುಪಿಯಲ್ಲಿ ಸಮಗ್ರವಾಗಿ ಕೈಗೆತ್ತಿಕೊಳ್ಳಲಾಗುವುದು.

*ಉಡುಪಿ –ಖಾನಾಪುರ ಹೆದ್ದಾರಿಯಲ್ಲಿ  5 ಕಿ.ಮೀ ದ್ವಿಪಥ ನಿರ್ಮಿಸಲು ₹15 ಕೋಟಿ ಅನುದಾನಕ್ಕೆ ಒಪ್ಪಿಗೆ.

*ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ 32 ಎಕರೆ ಪ್ರದೇಶವನ್ನು ಪವನ ವಿದ್ಯುತ್‌ ಘಟಕ ಸ್ಥಾಪಿಸಲು ರೋಹನ್ ಸೋಲಾರ್‌ ಕಂಪನಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಅನುಮೋದನೆ.

*ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಒಂದು ಹೋಬಳಿಯನ್ನು ಸೃಷ್ಟಿಸಲು ಒಪ್ಪಿಗೆ.

* ಸಂಧ್ಯಾ ಸುರಕ್ಷಾ ಯೋಜನೆಯಡಿ 60 ವರ್ಷದವರಿಗೆ ನೀಡುತ್ತಿರುವ ₹600 ಮಾಸಾಶನವನ್ನು ₹800 ಕ್ಕೂ 65 ವರ್ಷ ಮೇಲ್ಪಟ್ಟವರಿಗೆ ನೀಡುವ ₹1,000 ಮಾಸಾಶನವನ್ನು ₹1,200 ಕ್ಕೆ ಹೆಚ್ಚಿಸುವ ಸರ್ಕಾರಿ ಆದೇಶ ಹೊರಡಿಸಲು ಅನುಮತಿ. 36 ಲಕ್ಷ ಜನರಿಗೆ ಇದರಿಂದ ಅನುಕೂಲವಾಗಲಿದ್ದು, ಸರ್ಕಾರಕ್ಕೆ ₹207 ಕೋಟಿ ಹೊರೆಯಾಗಲಿದೆ.

*ಮೈಸೂರು ಸೋಪ್ಸ್‌ ಅಂಡ್‌ ಡಿಟರ್ಜೆಂಟ್ಸ್‌ ವತಿಯಿಂದ ಶಾಲಾ ವಿದ್ಯಾರ್ಥಿನಿಯರಿಗೆ ಶುಚಿ ಕಿಟ್‌ ಪೂರೈಕೆಗೆ ನಿರ್ಧಾರ.

* ಹಿಪ್ಪರಗಿ ಬ್ಯಾರೇಜ್‌ ರಕ್ಷಣೆಗೆ ತಡೆಗೋಡೆ ನಿರ್ಮಿಸಲು ₹28.2 ಕೋಟಿ ಅನುದಾನಕ್ಕೆ ಒಪ್ಪಿಗೆ.

*ಪೊಲೀಸ್‌ ಆಧುನೀಕರಣ ಯೋಜನೆ ಅಡಿ ಡಿಜಿಟಲ್‌ ಯುಎಚ್‌ಎಫ್‌ಗೆ ಅನುದಾನ ನೀಡಲು ಸಮ್ಮತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು