ಶನಿವಾರ, ಅಕ್ಟೋಬರ್ 1, 2022
25 °C

ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಕಾವೇರಿ ನದಿ: ಹಾರಂಗಿ ಕೆಳಸೇತುವೆ‌ ಮುಳುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಶಾಲನಗರ: ಕಾವೇರಿ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹಾರಂಗಿಯ ಕೆಳಸೇತುವೆ ಮುಳುಗಡೆಯಾಗಿದೆ. ಹಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.

ಹಾರಂಗಿ ಜಲಾಶಯದಿಂದ 22 ಸಾವಿರಕ್ಕೂ ಅಧಿಕ ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದ ನೀರಿನ ಮಟ್ಟದಲ್ಲಿ ಹೆಚ್ಚಳ ಕಂಡುಬಂದಿದ್ದು, ಗದ್ದೆಗಳು ನೀರಿನಿಂದ ಜಲಾವೃತ್ತಗೊಂಡಿವೆ. ಅಣೆಕಟ್ಟೆ ಮುಂಭಾಗದ ಕಿರು ಸೇತುವೆ ಮುಳುಗಡೆಯಾಗಿದೆ‌. ಸೇತುವೆ ಮುಳುಗಡೆ ಕಾರಣ ಗುಡ್ಡೆಹೊಸೂರು-ಅತ್ತೂರು-ಸೋಮವಾರಪೇಟೆಗೆ ತೆರಳುವ ರಸ್ತೆ ಸಂಚಾರ ಬಂದ್ ಆಗಿದೆ. ಇದರಿಂದ ಹಲವು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ಹುದುಗೂರು, ಯಡವನಾಡು ಸುತ್ತಮುತ್ತಲಿನ ಗ್ರಾಮಗಳ ಜನರು ಇದೀಗ ಕೂಡಿಗೆ ಮಾರ್ಗದ ಮೂಲಕ ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದಾರೆ.

ನದಿ ಪಾತ್ರದಲ್ಲಿರುವ ಸಾಯಿ ಹಾಗೂ ಕುವೆಂಪು ಬಡಾವಣೆಗಳಿಗೆ ನೀರು ನುಗ್ಗುತ್ತಿದ್ದು, ಇದರಿಂದ ಬಡಾವಣೆಯ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ನಿವಾಸಿಗಳು ತಮ್ಮ ಮನೆಯ ಸಾಮಗ್ರಿಗಳನ್ನು ಖಾಲಿ ಮಾಡಿಕೊಂಡು ಸುರಕ್ಷಿತ ಪ್ರದೇಶಗಳತ್ತ ತೆರಳುತ್ತಿದ್ದಾರೆ.

‘ನದಿ ಪಾತ್ರದ ಜನತೆ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಮೀನುಗಾರರು ಎಚ್ಚರಿಕೆಯಿಂದ ಇರಬೇಕು’ ಎಂದು ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ ಸೂಚನೆ ನೀಡಿದ್ದಾರೆ.

ಕಣಿವೆ ಬಳಿಯ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದ್ದು, ಹೆಚ್ಚುವರಿ ನೀರು ಪಕ್ಕದ ಹಳೆ ಕೂಡಿಗೆ ವಾಟರ್ ಗೇಜ್ ಬಳಿಯ ಕುಮಾರ್ ಎಂಬುವವರ ಗದ್ದೆಗೆ ನೀರು ನುಗ್ಗಿ ಸಂಪೂರ್ಣ ಜಲಾವೃತಗೊಂಡಿದೆ. ಕುಶಾಲನಗರ ಬಳಿಯ ಗಂಧದಕೋಟೆ ತೊಡು ಜಲಾವೃತ್ತಗೊಂಡಿದೆ. ಕುಶಾಲನಗರ, ಸುಂಟಿಕೊಪ್ಪ, ನಂಜರಾಯಪಟ್ಟಣ, ವಾಲ್ನೂರು, ಶಿರಂಗಾಲ, ಹೆಬ್ಬಾಲೆ, ಸಿದ್ದಲಿಂಗಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನಿರಂತರವಾಗಿ ಸುರಿಯುತ್ತಿದೆ.

ಕುಶಾಲನಗರ ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿಯ ಸೋಪಾನಕಟ್ಟೆ ಮುಳುಗಡೆಯಾಗಿದೆ. ಇದರಿಂದ ಮಹಿಳೆಯರು ತೊಟ್ಟೆ ತೊಳೆಯಲು ಹೋಗದಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು