ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಡಿ ಮತ್ತಷ್ಟು ಕಗ್ಗಂಟು: ನ್ಯಾಯಾಧೀಶರ ಎದುರು ಯುವತಿ ಇಂದು ಹಾಜರು ಸಾಧ್ಯತೆ

Last Updated 29 ಮಾರ್ಚ್ 2021, 19:42 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿಗೆ ಸಂಬಂಧಿಸಿದ್ದು ಎನ್ನಲಾಗುತ್ತಿರುವ ಸಿ.ಡಿ. ಪ್ರಕರಣ ಸೋಮವಾರ ಮತ್ತಷ್ಟು ತಿರುವುಗಳನ್ನು ಪಡೆದಿದ್ದು, ಸಂತ್ರಸ್ತೆ ಎನ್ನಲಾಗುತ್ತಿರುವ ಯುವತಿ ನ್ಯಾಯಾಧೀಶರ ಎದುರು ಮಂಗಳ
ವಾರ ಹಾಜರಾಗುವ ಸಾಧ್ಯತೆ ಇದೆ.

ಯುವತಿ ತನ್ನ ವಕೀಲರ ಮೂಲಕ ನೀಡಿರುವ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಂಡಿರುವ ಕಬ್ಬನ್‌ಪಾರ್ಕ್‌ ಠಾಣೆ ಪೊಲೀಸರು ರಮೇಶ ಜಾರಕಿಹೊಳಿ ಅವರನ್ನು ನಾಲ್ಕು ಗಂಟೆ ವಿಚಾರಣೆಗೆ ಗುರಿಪಡಿಸಿದ್ದಾರೆ. ‘ಯುವತಿ ಯಾರೆಂಬುದೇ ನನಗೆ ಗೊತ್ತಿಲ್ಲ. ನಿಮ್ಮ ಪ್ರಶ್ನೆಗಳಿಗೆಲ್ಲಾ ವಕೀಲರನ್ನು ಕೇಳಿ ಉತ್ತರಿಸುವೆ, ಸ್ವಲ್ಪ ಕಾಲಾವಕಾಶ ಬೇಕು’ ಎಂದು ತನಿಖಾಧಿಕಾರಿ ಮುಂದೆ ರಮೇಶ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ, ಏಪ್ರಿಲ್ 2ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ ಪೊಲೀಸರು ಅವರನ್ನು ವಾಪಸ್ ಕಳಿಸಿದ್ದಾರೆ.

ಅನುಮತಿ ಕೊಟ್ಟರೆ ನ್ಯಾಯಾಧೀಶರ ಮುಂದೆ ಸೋಮವಾರ ಹಾಜರಾಗಿ ಹೇಳಿಕೆ ನೀಡುವೆ ಎಂಬ ಸಂದೇಶ ಕಳುಹಿಸಿದ್ದ ಯುವತಿ, ‘ವಿಚಾರಣೆ ಮೇಲುಸ್ತುವಾರಿ ವಹಿಸಬೇಕು ಹಾಗೂ ರಕ್ಷಣೆ ಕೊಡಲು ಸರ್ಕಾರಕ್ಕೆ ಸೂಚಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಇ–ಮೇಲ್‌ ಮೂಲಕ ಪತ್ರ ಕಳುಹಿಸಿರುವುದಾಗಿ ಮತ್ತೊಂದು ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.

ಏತನ್ಮಧ್ಯೆ, ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಯುವತಿ ಪರ ವಕೀಲ ಕೆ.ಎನ್. ಜಗದೀಶ್‌ ಕುಮಾರ್, ನ್ಯಾಯ ಮತ್ತು ರಕ್ಷಣೆ ಕೋರಿ ಹೇಳಿಕೆ ನೀಡಲು ಅನುಮತಿ ನೀಡುವಂತೆ ಕೋರಿದ್ದಾರೆ. ಈ ಅರ್ಜಿ ಸ್ವೀಕೃತವಾಗಿದ್ದು, ಹಾಜರಾಗಲು ಅವಕಾಶ ಸಿಗಲಿದೆಯೇ ಎಂಬುದು ಮಂಗಳವಾರವಷ್ಟೇ ಗೊತ್ತಾಗಲಿದೆ.

‘ಡಿಕೆಶಿ ಹಿಡಿದು ಒಳಗೆ ಹಾಕಲಿ’

ಬೆಳಗಾವಿ: ‘ಡಿ.ಕೆ. ಶಿವಕುಮಾರ್ ಹಿಡಿದು ಒಳಗೆ ಹಾಕಿದರೆ ಎಲ್ಲವೂ ಗೊತ್ತಾಗುತ್ತದೆ. ಎಲ್ಲ ಗೇಮ್ ಆಡುತ್ತಿರುವವರು ಅವರೇ’ ಎಂದು ಸಂತ್ರಸ್ತೆ ಎನ್ನಲಾಗುತ್ತಿರುವ ಯುವತಿಯ ತಮ್ಮ ಹೇಳಿದ್ದಾರೆ.

ತನ್ನ ತಂದೆ, ತಾಯಿ ಜತೆ ಸುದ್ದಿಗಾರರೊಂದಿಗೆ ಮಾತನಾಡಿದ ಆತ, ‘ವಿಜಾಪುರದವರು ಬೆಳಗಾವಿಗೆ ಬಂದು ಕೇಸ್ ಕೊಟ್ಟರೇಕೆ ಎಂದು ಪುಣ್ಯಾತ್ಮ ಡಿ.ಕೆ. ಶಿವಕುಮಾರ್‌ ಕೇಳಿದ್ದಾರೆ. 12 ವರ್ಷ ಇಲ್ಲಿದ್ದೇವೆ. ಇಲ್ಲಿ ಅಲ್ಲದೇ ಮತ್ತೇನ್ ಹೋಗಿ ಕನಕಪುರದಲ್ಲಿ ಕೊಡಬೇಕಿತ್ತಾ?ನಮ್ಮನ್ನೂ ಅಪಹರಿಸಿ ನಮ್ಮಿಂದಲೂ ಹೇಳಿಕೆ ಕೊಡಿಸಬೇಕು ಎಂದುಕೊಂಡಿರಬೇಕು’ ಎಂದು ಹೇಳಿದರು.

ಶಿವಕುಮಾರ್‌ ಭೇಟಿಯಾಗೇ ಇಲ್ಲವೆಂದರೂ ನಮ್ಮಕ್ಕ ಅವರ ಹೆಸರನ್ನು ಹೇಗೆ ಹೇಳಿದರು? ಹಣ ಕೊಟ್ಟು ಗೋವಾಕ್ಕೆ ಕಳುಹಿಸಿರೋದೆ ಅವರು. ಈಗೇಕೆ ಸುಳ್ಳು ಹೇಳುತ್ತಿದ್ದಾರೆ. ಈ ರೀತಿ ಮಾಡುವುದರಿಂದ ಶಿವಕುಮಾರ್‌ಗೆ ಏನು ಸಿಗುತ್ತಿದೆಯೋ ಗೊತ್ತಿಲ್ಲ. ಆದರೆ, ನಮ್ಮಕ್ಕ ತುಂಬಾ ನೋವಲ್ಲಿದ್ದಾಳೆ’ ಎಂದರು.

‘ಮಗಳು ಇಲ್ಲಿಗೆ ಬಂದು ನನ್ನೊಂದಿಗೆ ಎಲ್ಲವನ್ನೂ ಹೇಳಿಕೊಳ್ಳಲಿ. ನಾನು ಆಕೆಯ ಜೊತೆ ನಿಲ್ಲುತ್ತೇನೆ’ ಎಂದು ಯುವತಿಯ ತಂದೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT