ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತವರಿನಿಂದ ಅಧಿಕಾರಿಗಳ ವರ್ಗ: ರಾಜ್ಯ ಸರ್ಕಾರಕ್ಕೆ ಕೇಂದ್ರ ಚುನಾವಣಾ ಆಯೋಗ ನಿರ್ದೇಶನ

Last Updated 9 ಡಿಸೆಂಬರ್ 2022, 21:14 IST
ಅಕ್ಷರ ಗಾತ್ರ

ನವದೆಹಲಿ: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಕರ್ತವ್ಯದಲ್ಲಿ ಭಾಗಿಯಾಗುವ ಅಧಿಕಾರಿಗಳನ್ನು ತವರು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.

ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಅವರಿಗೆ ಗುರುವಾರ ಪತ್ರ ಬರೆದಿರುವ ಆಯೋಗದ ಹಿರಿಯ ಪ್ರಧಾನ ಕಾರ್ಯದರ್ಶಿ ನರೇಂದ್ರ ಎನ್‌.ಬುಟೋಲಿಯಾ, ಅಧಿಕಾರಿಗಳ ವರ್ಗಾವಣೆ ಹಾಗೂ ನಿಯೋಜನೆ ಸಂಬಂಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ಸಂಬಂಧ ಕೈಗೊಂಡ ಕ್ರಮಗಳ ಅನುಪಾಲನಾ ವರದಿಯನ್ನು 2023ರ ಜನವರಿ 31ರೊಳಗೆ ಆಯೋಗಕ್ಕೆ ಮುಖ್ಯ ಕಾರ್ಯದರ್ಶಿ ಹಾಗೂಡಿಜಿಪಿ–ಐಜಿಪಿ ಸಲ್ಲಿಸಬೇಕು ಎಂದೂ ತಿಳಿಸಿದ್ದಾರೆ.

ಪ್ರಸ್ತುತ ವಿಧಾನಸಭೆಯ ಅವಧಿ 2023ರ ಮೇ 24ಕ್ಕೆ ಕೊನೆಗೊಳ್ಳಲಿದೆ. ವಿಧಾನಸಭಾ ಚುನಾವಣೆಯು ಏಪ್ರಿಲ್‌– ಮೇ ಮೊದಲನೇ ವಾರದಲ್ಲಿ ನಡೆಯುವ ಸಾಧ್ಯತೆ ಇದೆ. ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆಗಳ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ, ಕರ್ನಾಟಕ ವಿಧಾನಸಭಾ ಚುನಾವಣೆಗೆ ಆಯೋಗ ತಯಾರಿ ಆರಂಭಿಸಿದೆ.

‘ಚುನಾವಣೆಯೊಂದಿಗೆ ನೇರ ಸಂಪರ್ಕ ಹೊಂದಿರುವ ಯಾವುದೇ ಅಧಿಕಾರಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯಲ್ಲಿ ಮುಂದುವರಿಯುವಂತಿಲ್ಲ. ಒಂದೇ ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಸಹ ವರ್ಗಾವಣೆ ಮಾಡಬೇಕು‍’ ಎಂದು ಆಯೋಗ ತಿಳಿಸಿದೆ. ಮೂರು ವರ್ಷಗಳ ಅವಧಿಯನ್ನು ಲೆಕ್ಕಾಚಾರ ಮಾಡುವಾಗ, ಜಿಲ್ಲೆಯೊಳಗಿನ ಒಂದು ಬಡ್ತಿಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದೂ ತಿಳಿಸಿದೆ.

ಜಿಲ್ಲಾ ಚುನಾವಣಾ ಅಧಿಕಾರಿ, ಉಪ ಜಿಲ್ಲಾ ಚುನಾವಣಾ ಅಧಿಕಾರಿ, ರಿಟರ್ನಿಂಗ್ ಅಧಿಕಾರಿಗಳು, ಸಹಾಯಕ ರಿಟರ್ನಿಂಗ್‌ ಅಧಿಕಾರಿಗಳು, ನೋಡಲ್‌ ಅಧಿಕಾರಿಗಳು, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್‌, ಬ್ಲಾಕ್‌ ಡೆವಲಪ್‌ಮೆಂಟ್‌ ಆಫೀಸರ್ ಅಥವಾ ಸಮಾನ ಶ್ರೇಣಿಯ ಅಧಿಕಾರಿಗಳಿಗೆ ಈ ಸೂಚನೆ ಅನ್ವಯವಾಗುತ್ತದೆ. ಪೊಲೀಸ್‌ ಇಲಾಖೆಯಲ್ಲಿ ಸಬ್‌ ಇನ್‌ಸ್ಪೆಕ್ಟರ್‌ಗಿಂತ ಮೇಲಿನ ದರ್ಜೆಯ ಅಧಿಕಾರಿಗಳಿಗೂ ಇದು ಅನ್ವಯವಾಗುತ್ತದೆ. ಆದರೆ, ಕಂಪ್ಯೂಟರೀಕರಣ, ವಿಶೇಷ ಶಾಖೆ, ತರಬೇತಿ ಮತ್ತಿತರ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳಿಗೆ ಈ ಸೂಚನೆ ಅನ್ವಯ ಆಗುವುದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.

ಇಲಾಖೆಗಳ ಕೇಂದ್ರ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಗಳಿಗೆ ಈ ವರ್ಗಾವಣೆ ನೀತಿ ಅನ್ವಯವಾಗುವುದಿಲ್ಲ. ವೈದ್ಯರು, ಎಂಜಿನಿಯರ್‌ಗಳು, ಶಿಕ್ಷಕರು, ಪ್ರಾಂಶುಪಾಲರು ಸಹ ಇದರ ವ್ಯಾಪ್ತಿಗೆ ಬರುವುದಿಲ್ಲ. ಒಂದು ವೇಳೆ, ಈ ಅಧಿಕಾರಿಗಳು ಪೂರ್ವಗ್ರಹದಿಂದ ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂದರೆ ಅವರನ್ನು ವರ್ಗಾವಣೆ ಮಾಡಬೇಕು ಹಾಗೂ ಅವರ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT