ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಲ ಶಂಕಿಸಿ ಪತ್ನಿ ಕೊಲೆ: ಶವ ಹೂತಿಟ್ಟಿದ್ದ ಪತಿ

Last Updated 21 ನವೆಂಬರ್ 2022, 15:18 IST
ಅಕ್ಷರ ಗಾತ್ರ

ಚನ್ನಗಿರಿ: ತಾಲ್ಲೂಕಿನ ಉಬ್ರಾಣಿ ಹೋಬಳಿಯ ಗಂಗಗೊಂಡನಹಳ್ಳಿ ಗ್ರಾಮದಲ್ಲಿ ಶೀಲ ಶಂಕಿಸಿ ಪತ್ನಿಯನ್ನು ಕೊಲೆ ಮಾಡಿದ್ದ ಪತಿಯು, ಆಕೆಯ ಶವವನ್ನು ಕಾಡಿನಲ್ಲಿ ಹೂತಿಟ್ಟಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ದಾವಣಗೆರೆ ತಾಲ್ಲೂಕಿನ ಐಗೂರು ಗ್ರಾಮದ ಲೋಕೇಶಪ್ಪ ಹಾಗೂ ರತ್ನಮ್ಮ ದಂಪತಿಯ ಪುತ್ರಿ ಚಂದ್ರಕಲಾ ಅಲಿಯಾಸ್ ರಶ್ಮಿ (21) ಕೊಲೆಯಾದವರು. ಗಂಗಗೊಂಡನಹಳ್ಳಿ ಗ್ರಾಮದ ಮೋಹನ್ ಕುಮಾರ್ (25) ಪತ್ನಿಯನ್ನು ಕೊಲೆ ಮಾಡಿದ ಆರೋಪಿ. ಒಂದೂವರೆ ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ಏಳು ತಿಂಗಳ ಹಿಂದೆ ಮೋಹನ್ ಕುಮಾರ್‌ ಜೊತೆ ಚಂದ್ರಕಲಾ ಅವರ ಮದುವೆಯಾಗಿತ್ತು. ಕೆಲ ದಿನಗಳ ನಂತರ ಇವರ ದಾಂಪತ್ಯದಲ್ಲಿ ಬಿರುಕು ಉಂಟಾಗಿತ್ತು. ಪತ್ನಿಯ ಶೀಲ ಶಂಕಿಸಿ ಮೋಹನ್ ಕುಮಾರ್ ಆಗಾಗ ಜಗಳವಾಡುತ್ತಿದ್ದ. ಜೊತೆಗೆ ವರದಕ್ಷಿಣೆ ತರುವಂತೆ ಪತ್ನಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ.

ಈ ಬಗ್ಗೆ ಚಂದ್ರಕಲಾ ಹಲವು ಬಾರಿ ಪಾಲಕರ ಗಮನಕ್ಕೂ ತಂದಿದ್ದರು. ರಾಜಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನು ಪೋಷಕರೂ ಮಾಡಿದ್ದರು. ಆದರೆ, ಒಂದೂವರೆ ತಿಂಗಳ ಹಿಂದೆ ದಂಪತಿಯ ನಡುವೆ ಜಗಳ ವಿಕೋಪಕ್ಕೆ ತಿರುಗಿದೆ. ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಪತಿಯು, ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಹುಣಸಘಟ್ಟ ಕಾಡಿನಲ್ಲಿ ಗುಂಡಿ ತೆಗೆದು ಶವವನ್ನು ಹೂತ್ತಿಟ್ಟಿದ್ದಾನೆ. ಆ ಬಳಿಕ ‘ನಿಮ್ಮ ಮಗಳು ಕಾಣೆಯಾಗಿದ್ದಾಳೆ’ ಎಂದು ಚಂದ್ರಕಲಾ ಪೋಷಕರಿಗೆ ತಿಳಿಸಿದ್ದೂ ಅಲ್ಲದೇ, ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪತ್ನಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾನೆ.

ಚಂದ್ರಕಲಾ ಪೋಷಕರಿಗೆ ಮೋಹನ್ ಮೇಲೆ ಅನುಮಾನವಿದ್ದ ಕಾರಣ ಆತನ ವಿರುದ್ಧ ದೂರು ದಾಖಲಿಸಿದ್ದರು. ಡಿವೈಎಸ್‌ಪಿ ಡಾ.ಸಂತೋಷ್ ಮಾರ್ಗದರ್ಶನದಲ್ಲಿ ಸಿಪಿಐ ಕೆ.ಬಿ.ಮಧು, ಪಿಎಸ್ಐ ಕೆ.ಎನ್.ಚಂದ್ರಶೇಖರ್ ಅವರು ಎರಡು ದಿನಗಳ ಹಿಂದೆ ಆರೋಪಿಯನ್ನು ಕರೆತಂದು ವಿಚಾರಣೆ ನಡೆಸಿದಾಗ, ಪತ್ನಿಯನ್ನು ಕೊಲೆ ಮಾಡಿರುವ ವಿಚಾರವನ್ನು ಆತ ಒಪ್ಪಿಕೊಂಡಿದ್ದಾನೆ.

ಆರೋಪಿ ನೀಡಿದ ಮಾಹಿತಿ ಆಧರಿಸಿ ಶವ ಹೂತಿಟ್ಟಿದ್ದ ಸ್ಥಳಕ್ಕೆ ಸೋಮವಾರ ತೆರಳಿದ ಚನ್ನಗಿರಿ ಪೊಲೀಸರು, ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT