ಶುಕ್ರವಾರ, ಫೆಬ್ರವರಿ 26, 2021
20 °C
ಕಟ್ಟುನಿಟ್ಟಿನ ಕ್ರಮ: ಪೊಲೀಸ್ ಆಯುಕ್ತರ ಎಚ್ಚರಿಕೆ

ಶಿವಾಜಿ ಮಹಾರಾಜರ ಅವಹೇಳನ ವಿರೋಧಿಸಿ ಮರಾಠಿ ಭಾಷಿಕರಿಂದ ಬೆಳಗಾವಿಯಲ್ಲಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಛತ್ರಪತಿ ಶಿವಾಜಿ ಮಹಾರಾಜರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಮರಾಠಿ ಭಾಷಿಕರು ಇಲ್ಲಿನ ಸಿಇಎನ್‌ (ಸೈಬರ್, ಎಕನಾಮಿಕ್ಸ್‌ ಆ್ಯಂಡ್ ನಾರ್ಕೋಟಿಕ್) ಪೊಲೀಸ್‌ ಠಾಣೆ ಎದುರು ಭಾನುವಾರ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.

ಬಳಿಕ ಅಲ್ಲಿಂದ ನಗರ ಪೊಲೀಸ್ ಆಯುಕ್ತರ ಕಚೇರಿವರೆಗೆ ಮೆರವಣಿಗೆ ನಡೆಸಿದರು.

‘ಶಿವಾಜಿ ಅಪ್ಪಟ ದೇಶಪ್ರೇಮಿ. ದೇಶಕ್ಕೆ ಅವರ ಕೊಡುಗೆ ಅಪಾರ. ಅಂತಹ ಶೌರ್ಯವಂತನನ್ನು ಅಪಮಾನಿಸಿ ಪೋಸ್ಟ್‌ ಹಾಕಲಾಗಿದೆ. ಇದರಿಂದಾಗಿ ಅಭಿಮಾನಿಗಳ ಮನಸ್ಸಿಗೆ ಬಹಳ ನೋವಾಗಿದೆ. ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ನೇತೃತ್ವ ವಹಿಸಿದ್ದ ಮುಖಂಡರು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್‌, ‘‍ಪೋಸ್ಟ್ ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಪೊಲೀಸ್ ಆಯುಕ್ತರ ಎಚ್ಚರಿಕೆ:

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ಮಹಾರಾಜರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹೇಳಿಕೆ, ಪೋಸ್ಟ್‌ ಹಾಕಿರುವ ಮತ್ತು ಹಾಕುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸ್ ಆಯುಕ್ತ ತ್ಯಾಗರಾಜನ್‌ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಪೀರನವಾಡಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಆಗಿದ್ದು, ಈ ವಿಷಯದಲ್ಲಿರುವ ಎಲ್ಲ ಗೊಂದಲಗಳನ್ನು ಈಗಾಗಲೇ ಅಲ್ಲಿನ ಹಿರಿಯರು ಮತ್ತು ಜಿಲ್ಲಾಡಳಿತದ ಸಮ್ಮುಖದಲ್ಲೇ ಬಗೆಹರಿಸಲಾಗಿದೆ. ಆದಾಗ್ಯೂ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ರಾಯಣ್ಣ ಮತ್ತು ಶಿವಾಜಿ ಕುರಿತು ಇಲ್ಲಸಲ್ಲದ ಹೇಳಿಕೆ, ಅವಹೇಳನಕಾರಿ ಪೋಸ್ಟ್‌ ಮತ್ತು ವಿಡಿಯೊಗಳನ್ನು ಹಾಕುತ್ತಿದ್ದಾರೆ. ಅವುಗಳನ್ನು ಬೆಂಬಲಿಸಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸುತ್ತಿದ್ದಾರೆ. ಇದು ಬೆಳಗಾವಿ ಮರಾಠಿ ಮತ್ತು ಕನ್ನಡಿಗರ ಭಾಷಾ ವೈಷಮ್ಯಕ್ಕೆ ಪ್ರಚೋದನೆ ನೀಡುವಂಥದ್ದಾಗಿದೆ ಹಾಗೂ ಅವರ ನಡುವೆ ಶಾಂತಿ ಕದಡಲು ಪ್ರಯತ್ನಿಸುತ್ತಿರುವುದಾಗಿದೆ. ಇದು ಸರಿಯಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂಹಹ ಇಂತಹ ಕೃತ್ಯಗಳನ್ನು ಮಾಡಬಾರದು’ ಎಂದಿದ್ದಾರೆ.

‘ಈ ವಿಷಯಗಳ ಬಗ್ಗೆ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌, ಹೇಳಿಕೆ, ವಿಡಿಯೊಗಳನ್ನು ಹಾಕುವುದು ಕಂಡುಬಂದಲ್ಲಿ ಅಂತಹ ವ್ಯಕ್ತಿ ಹಾಗೂ ಗ್ರೂಪ್‌ಗಳ ಅಡ್ಮಿನ್‌ಗಳು ಮತ್ತು ಅದನ್ನು ಬೆಂಬಲಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದ್ದಾರೆ.

‘ಸಾಮಾಜಿಕ ಜಾಲತಾಣಗಳಲ್ಲಿ ಬರುವ ಊಹಾಪೋಹೆಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಅವಹೇಳನ ಮಾಡಿದ್ದು ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಶಾಂತಿ ಕಾಪಾಡಲು ಸಹಕರಿಸಬೇಕು’ ಎಂದು ಕೋರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.