ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷತ್ರಿಯ ಸಮಾಜದ ಬೇಡಿಕೆ‌ ಈಡೇರಿಸಲು ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ

Last Updated 29 ಜನವರಿ 2023, 8:37 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಕ್ಷತ್ರಿಯ ಒಕ್ಕೂಟದ ಭಾಗವಾಗಿರುವ 38 ಸಮುದಾಯಗಳು ಒಗ್ಗೂಡಿ ಸಲ್ಲಿಸಿರುವ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಕರ್ನಾಟಕ ಕ್ಷತ್ರಿಯ ಒಕ್ಕೂಟದ ನೇತೃತ್ವದಲ್ಲಿ ನಗರದ ಅರಮನೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಕ್ಷತ್ರಿಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

'ಮುಂಬರುವ ಬಜೆಟ್‌ನಲ್ಲಿ ಕ್ಷತ್ರಿಯ ಸಮಾಜಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣಕ್ಕೆ ಪೂರಕವಾದ ಯೋಜನೆಗಳನ್ನು ಪ್ರಕಟಿಸಲಾಗುವುದು. ಈ ಸಮುದಾಯಗಳ ಕುಲ ಕಸುಬುಗಳನ್ನು ಅಭಿವೃದ್ಧಿಪಡಿಸಲು ವಿಶೇಷ ನೆರವು ನೀಡಲಾಗುವುದು' ಎಂದರು.

ರಾಜ್ಯದ ವಿವಿಧೆಡೆ ಕ್ಷತ್ರಿಯ ಸಮಾಜದ ಸಭಾಭವನಗಳ ನಿರ್ಮಾಣಕ್ಕೆ ಜಮೀನು ಮತ್ತು ಅನುದಾನ ಒದಗಿಸಬೇಕೆಂಬ ಬೇಡಿಕೆ ಇದೆ. ಅದನ್ನೂ ಈಡೇರಿಸಲಾಗುವುದು. ವಿವಿಧ ಸಮುದಾಯಗಳ ಸಂಘ ಸಂಸ್ಥೆಗಳಿಗೆ ಬೆಂಗಳೂರಿನಲ್ಲಿ 65 ಎಕರೆ ಜಮೀನು ಹಂಚಿಕೆ ಮಾಡಲಾಗಿತ್ತು. ಅದಕ್ಕೆ ಕಾನೂನು ತೊಡಕು ಎದುರಾಗಿದೆ. ಶೀಘ್ರದಲ್ಲಿ ಸಮಸ್ಯೆ ಪರಿಹರಿಸಿ ಕ್ಷತ್ರಿಯ ಸಮಾಜ ಸೇರಿದಂತೆ ಎಲ್ಲ ಸಮುದಾಯಗಳಿಗೆ ಜಮೀನು ಹಸ್ತಾಂತರ ಮಾಡಲಾಗುವುದು ಎಂದು ಹೇಳಿದರು.

ಕ್ಷತ್ರಿಯರು ದೇಶಪ್ರೇಮಕ್ಕೆ ಹೆಸರಾದವರು. ಶ್ರೀರಾಮ, ಕೃಷ್ಣ ಎಲ್ಲರೂ ಕ್ಷತ್ರಿಯ ವಂಶಕ್ಕೆ ಸೇರಿದವರು. ಸ್ವಾಮಿ ವಿವೇಕಾನಂದ ಕೂಡ ಕ್ಷತ್ರಿಯರು. ಖಡ್ಗ ಮತ್ತು ಜ್ಞಾನದ‌ ಖಡ್ಗ ಎರಡನ್ನೂ ಈ ಸಮಾಜ ಹಿಡಿಯಬಲ್ಲದು ಎಂಬುದಕ್ಕೆ ಇದು ಉದಾಹರಣೆ ಎಂದು ಬೊಮ್ಮಾಯಿ ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ರಾಜ್ಯ ಉಸ್ತುವಾರಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮಾತನಾಡಿ, 'ದೇಶಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧರಾಗಿರುವವರೇ ಕ್ಷತ್ರಿಯರು. ಈ ಸಮಾಜದ ತ್ಯಾಗದ ಫಲವಾಗಿ ದೇಶ ಸುಭದ್ರವಾಗಿದೆ' ಎಂದರು.

ಶ್ರೀರಾಮ ಕ್ಷತ್ರಿಯ ಕುಲದ ಆದರ್ಶ. 2014ರವರೆಗೂ ದೇಶದಲ್ಲಿ ಭಾರತೀಯ ಸಂಸ್ಕೃತಿಯ ಆದರ್ಶ ಪುರುಷನ ಬಗ್ಗೆ ಅವಗಣನೆ ಇತ್ತು. ಆದರೆ, 2014ರ ನಂತರ ಪರಿಸ್ಥಿತಿ ಬದಲಾಗಿದೆ. ಅಯೋಧ್ಯೆ ರಾಮ ಜನ್ಮಭೂಮಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ತ್ವರಿತವಾಗಿ ಪೂರ್ಣಗೊಂಡು ತೀರ್ಪು ಪ್ರಕಟವಾಯಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರಾಮ ಮಂದಿರ ನಿರ್ಮಾಣದ ಕೆಲಸವೂ ನಡೆಯುತ್ತಿದೆ ಎಂದು ಹೇಳಿದರು.

'ಕ್ಷತ್ರಿಯರ ಹಿತ ಕಾಯಲು ನಾವು ಬದ್ಧ. ಯಾವುದೇ ಸಮಯಕ್ಕೆ ನಿಮ್ಮೊಂದಿಗೆ ಬರಲು ಸಿದ್ಧ' ಎಂದರು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಶಾಸಕರಾದ ಬಂಡೆಪ್ಪ ಕಾಶೆಂಪೂರ, ಸಂಸದ ಪಿ.ಸಿ. ಮೋಹನ್, ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ರಾವ್ ಮುಳೆ, ಕ್ಷತ್ರಿಯ ಒಕ್ಕೂಟದ ಅಧ್ಯಕ್ಷ ಉದಯ್ ಸಿಂಗ್, ಕ್ಷತ್ರಿಯ ಸಮುದಾಯಗಳ ಮಠಾಧೀಶರು ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT