ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮದು ಅಂತಃಕರಣದ ಸರ್ಕಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

‘ಜನ ಫಲಾನುಭವಿಯಾದರೆ ಸಾಲದು, ಆಡಳಿತದ ಪಾಲುದಾರರಾಗಬೇಕು’
Last Updated 28 ಜನವರಿ 2022, 20:24 IST
ಅಕ್ಷರ ಗಾತ್ರ

ಬೆಂಗಳೂರು:‘ನಮ್ಮದು ಅಂತಃಕರಣ ಮತ್ತು ಮಾನವೀಯ ನೆಲೆಗಟ್ಟಿನಲ್ಲಿ ಕೆಲಸ‌ ಮಾಡುವ ಸರ್ಕಾರ. ರಾಜ್ಯದ ಜನರ ಸಮಸ್ಯೆ ಮತ್ತು ಸವಾಲುಗಳ ಅರಿವಿನ ಜತೆಗೆ ಅಂತಃಕರಣವೂ ಸರ್ಕಾರಕ್ಕಿದೆ. ಆರ್ಥಿಕ ಸಂಕಷ್ಟಗಳ ಮಧ್ಯೆಯೂ ಎಲ್ಲ ಜನರಿಗೂ ನೆರವು ನೀಡುವಂತಹ ಕೆಲಸಗಳನ್ನು ಸತತವಾಗಿ ಮಾಡುತ್ತಿದ್ದೇವೆ’ ಎಂದುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನೂತನ ಸರ್ಕಾರ ಆರು ತಿಂಗಳು ಪೂರೈಸುತ್ತಿರುವ ಪ್ರಯುಕ್ತ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಆರು ತಿಂಗಳ ಸಾಧನೆಯ ಚಿತ್ರಣ ನೀಡುವ ಕಿರುಹೊತ್ತಿಗೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯ ದುಪ್ಪಟ್ಟು ಮೊತ್ತವನ್ನು ಪರಿಹಾರ ರೂಪದಲ್ಲಿ ನೀಡಿರುವುದೇ ನಮ್ಮ ಸರ್ಕಾರ ಸರ್ವಸ್ಪರ್ಶಿ, ಸಂವೇದನಾಶೀಲ ಎಂಬುದಕ್ಕೆ ಸಾಕ್ಷಿ’ ಎಂದರು.

ಆಡಳಿತದಲ್ಲಿ ಜನರು ಕೇವಲ ಫಲಾನುಭವಿಗಳಾಗಿ ಉಳಿಯಬಾರದು. ಪಾಲುದಾರರೂ ಆಗಬೇಕುಎಂಬುದು ಸರ್ಕಾರದ ಆಶಯ ಎಂದು ಹೇಳಿದರು.

ಆ ದಿಸೆಯಲ್ಲಿ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ. ಸಾಮಾಜಿಕ ನ್ಯಾಯ, ಸಮಾನತೆ ಎಂಬುದು ಮಾತಿನಲ್ಲೇ ಉಳಿಯಬಾರದು. ಎಲ್ಲ ಹಂತಗಳಲ್ಲೂ ಅವುಗಳನ್ನು ಕಾರ್ಯರೂಪಕ್ಕೆ ತರುವುದು ಈ ಸರ್ಕಾರದ ಗುರಿ ಎಂದರು.

ತಮ್ಮ ಸರ್ಕಾರ ಆರು ತಿಂಗಳ ಅವಧಿಯಲ್ಲಿ ಅನೇಕ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ, ರಾಜ್ಯದ ಅಭಿವೃದ್ಧಿಗೆ ಪೂರಕವಾದ ಭದ್ರ ಬುನಾದಿ ಹಾಕಿದೆ. ಮುಂದೆ ಬರುವ ಎಲ್ಲ ಸವಾಲುಗಳನ್ನೂ ಎದುರಿಸುವ ಆತ್ಮವಿಶ್ವಾಸ ಸರ್ಕಾರಕ್ಕೆ ಇದೆ ಎಂದು ಬೊಮ್ಮಾಯಿ ಪ್ರತಿಪಾದಿಸಿದರು.

‘ರಾಜ್ಯವು ಈಗ ವಿಚಿತ್ರವಾದ ಸನ್ನಿವೇಶ ಎದುರಿಸುತ್ತಿದೆ. ಕೋವಿಡ್‌ ನಿಂದ ಆರೋಗ್ಯ ತುರ್ತು ಪರಿಸ್ಥಿತಿ ಇರುವ ಜತೆಯಲ್ಲೇ ಪ್ರವಾಹದಿಂದ ಸಂಕಷ್ಟಕ್ಕೀಡಾದ ಜನರಿಗೆ ನೆರವಾ ಗಬೇಕಾದ ಸವಾಲು ಕೂಡ ಸರ್ಕಾ ರದ ಮುಂದಿತ್ತು. ಎರಡನ್ನೂ ಸಮರ್ಥವಾಗಿ ಎದುರಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಕೋವಿಡ್‌ ಅವಧಿಯಲ್ಲೇ ಅಭಿವೃದ್ಧಿ ಯೋಜನೆಗಳಿಗೆ ₹ 24,000 ಕೋಟಿ ವೆಚ್ಚ ಮಾಡಿದ್ದರೆ, ಪ್ರವಾಹದಿಂದ ಸಂಕಷ್ಟಕ್ಕೀಡಾದ 14 ಲಕ್ಷ ರೈತರಿಗೆ ಪರಿಹಾರ ವಿತರಿಸಲಾಗಿದೆ’ ಎಂದರು.

‘ದೇಶದಲ್ಲೇ ಅತ್ಯಧಿಕ ಪ್ರಮಾಣದ ವಿದೇಶಿ‌ ನೇರ ಬಂಡವಾಳ ರಾಜ್ಯಕ್ಕೆ ಹರಿದುಬರುತ್ತಿದೆ. ರಾಜ್ಯದ ಸಮಗ್ರ ಅಭಿವೃದ್ಧಿಯ ದೂರದೃಷ್ಟಿಯಿಂದ ಈ ಸರ್ಕಾರ ಕೆಲಸ ಮಾಡುತ್ತಿರುವುದರಿಂದ ಹೂಡಿಕೆದಾರರು ವಿಶ್ವಾಸ ಇರಿಸಿದ್ದಾರೆ. ‘ದುಡಿಮೆಯೇ ದೊಡ್ಡಪ್ಪ’ ಎಂಬ ಮಾತಿನಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ’ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದೆ. ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ 6.5 ಲಕ್ಷ ಮನೆಗಳನ್ನೂ ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ಪ್ರಧಾನಿಯವರ ಆಶಯದಂತೆ ರೈತರ ಆದಾಯ ಹೆಚ್ಚಿಸುವುದಕ್ಕಾಗಿ ರಾಜ್ಯದಲ್ಲಿ ‘ಸೆಕೆಂಡರಿ ಕೃಷಿ ನಿರ್ದೇಶನಾಲಯ’ ಸ್ಥಾಪಿಸಲಾಗಿದೆ ಎಂದರು.

ಸಂಪುಟದ ಬಹುತೇಕ ಸದಸ್ಯರು ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಸಮಾರಂಭದಲ್ಲಿ ಉಪಸ್ಥಿತರಿದ್ದರು.

‘ಆಕ್ರಮಣಕಾರಿ ಆಟವೂ ಗೊತ್ತು’

‘ನಮ್ಮದು ಒಂದು ಒಳ್ಳೆಯ ತಂಡ. ಆತ್ಮರಕ್ಷಣೆ, ಸಮಾಧಾನದಿಂದ ಆಡಲು ತಿಳಿದಿದೆ. ಅಗತ್ಯ ಇರುವಾಗ ಆಕ್ರಮಣಕಾರಿ ಆಟವನ್ನೂ ಆಡಲು ಗೊತ್ತು’ ಎಂದು ಬೊಮ್ಮಾಯಿ ಹೇಳಿದರು.‘ಆಡಳಿತ ನಡೆಸುವುದು ಫುಟ್‌ಬಾಲ್‌ ಆಟವಿದ್ದಂತೆ. ಯಾರೂ ಹೆಚ್ಚು ಕಾಲ ಚೆಂಡನ್ನು ತಮ್ಮ ಬಳಿ ಇರಿಸಿಕೊಳ್ಳುವಂತಿಲ್ಲ. ಒಬ್ಬರಿಂದ ಒಬ್ಬರಿಗೆ ದಾಟಿಸಲೇಬೇಕು. ಅಂತಿಮವಾಗಿ ಗೋಲ್‌ ಹೊಡೆಯುವುದೊಂದೇ ಗುರಿ’ ಎಂದರು.

ಆಮೂಲಾಗ್ರ ಬದಲಾವಣೆಗೆ ಚಿಂತನೆ

‘ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕೆಲವು ಇಲಾಖೆಗಳಲ್ಲಿ ಹಲವು ಬದಲಾವಣೆಗಳನ್ನು ತರಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಇಲಾಖೆಗಳು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಲ್ಲಿ ಆಮೂಲಾಗ್ರ ಬದಲಾವಣೆ ತರುವ ಚಿಂತನೆ ನಡೆದಿದೆ’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

‘ನಾವು ಸಮಾಜದ ಕಟ್ಟ ಕಡೆಯಲ್ಲಿ ಕುಳಿತಿರುವ ವ್ಯಕ್ತಿಯ ಕುರಿತು ಯೋಚಿಸುತ್ತೇವೆ. ಸರ್ಕಾರ ಸರ್ವ ಸ್ಪರ್ಶಿಯಾಗಿರಬೇಕು. ಅದಕ್ಕೆ ಪೂರಕವಾಗಿ ವಿವಿಧ ಇಲಾಖೆ ಮತ್ತು ಸಂಸ್ಥೆಗಳಲ್ಲಿ ಆಮೂಲಾಗ್ರ ಬದಲಾವಣೆ ತರುವ ಕ್ರಮಗಳನ್ನುಈ ವರ್ಷದ ಬಜೆಟ್‌ನಲ್ಲಿ ಪ್ರಕಟಿಸಲಾಗುವುದು’ ಎಂದು ತಿಳಿಸಿದರು.

ಅಧ್ಯಯನ ವರದಿ ಬಿಡುಗಡೆ

ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕದ ಆರು ತಿಂಗಳ ಅವಧಿಯಲ್ಲಿ ಕೈಗೊಂಡಿರುವ ನಿರ್ಧಾರಗಳ ಕುರಿತು ಭಾರತೀಯ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ (ಐಸೆಕ್‌) ಅಧ್ಯಯನದ ನಡೆಸಿ, ಸಿದ್ಧಪಡಿಸಿರುವ ವರದಿಯನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.

ಸರ್ಕಾರದ ನಿರ್ಣಯಗಳ ದೂರಗಾಮಿ ಪರಿಣಾಮಗಳು ಮತ್ತು ಅನುಕೂಲಗಳ ಕುರಿತು ವರದಿಯಲ್ಲಿ ವಿಶ್ಲೇಷಣೆ ಇದೆ ಎಂದು ಐಸೆಕ್‌ ನಿರ್ದೇಶಕ ಪ್ರೊ. ಡಿ. ರಾಜಶೇಖರ್‌ ತಿಳಿಸಿದರು.

‘ಐಸೆಕ್‌ ಅಧ್ಯಯನವನ್ನು ಮುಂದುವರಿಸಬೇಕು. ಕಾಲಕಾಲಕ್ಕೆ ನಮಗೆ ಸಲಹೆಯನ್ನೂ ನೀಡಬೇಕು. ಅಗತ್ಯವಿರುವ ಎಲ್ಲ ಸುಧಾರಣೆಗಳನ್ನು ತರಲು ನಾವು ಸಿದ್ಧರಿದ್ದೇವೆ’ ಎಂದು ಮುಖ್ಯಮಂತ್ರಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT