ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇನ್ನಷ್ಟು ಸೌಲಭ್ಯ: ಯಡಿಯೂರಪ್ಪ

ಸಚಿವರು, ಅಧಿಕಾರಿಗಳ ಜೊತೆ ಚರ್ಚೆ
Last Updated 24 ಡಿಸೆಂಬರ್ 2020, 7:35 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್ ಕಾರಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 24x7 ಸೇವೆಯನ್ನು ಒದಗಿಸಲು ಅಗತ್ಯವಾದ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಉತ್ತಮ ಮೂಲಸೌಕರ್ಯ ಒದಗಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಆರೋಗ್ಯ ಇಲಾಖೆಯ ವತಿಯಿಂದ ಆಯೋಜಿಸಿದ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾತ್ಯಕ್ಷಿಕೆ ವೀಕ್ಷಿಸಿ,‌ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆಯ ವೇಳೆ ಮಾತನಾಡಿದ ಅವರು, ‘ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸುವ ಜೊತೆಗೆ, ಈ ಕೇಂದ್ರಗಳಿಗೂ ಎಲ್ಲ ಸೇವೆಯನ್ನು ವಿಸ್ತರಿಸಲು ಉದ್ದೇಶಿಸಲಾಗಿದೆ’ ಎಂದರು.

‘ಆರೋಗ್ಯ ಉಪ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳು ಸುಸಜ್ಜಿತವಾಗಿದ್ದು, ಅಗತ್ಯ ಸೌಕರ್ಯಗಳು ದೊರಕುವಂತಿದ್ದರೆ ಜಿಲ್ಲಾ ಆಸ್ಪತ್ರೆಗಳಿಗೆ ಹೆಚ್ಚಿನ ಸೇವೆಗಳಿಗೆ ಅಲೆದಾಡುವುದು ತಪ್ಪಿದಂತಾಗುತ್ತದೆ. ಈ ದೃಷ್ಠಿಯಿಂದ ಉತ್ತಮ ಆರೋಗ್ಯ ಸೇವೆಗಳು ಎಲ್ಲ ಹಂತಗಳ ಆರೋಗ್ಯ ಕೇಂದ್ರಗಳಲ್ಲಿ ದೊರಕುವಂತಾಗಬೇಕು’ ಎಂದರು.

‘ಕೋವಿಡ್ ಕಾರಣ ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ಹಾಗೂ ಕೋವಿಡ್ ಚಿಕಿತ್ಸೆಗೆ ಪೂರಕ ಸಲಕರಣೆ ಹಾಗೂ ಔಷಧಿಗಳ ಪೂರೈಕೆ ಆಗಬೇಕು. ಕೋವಿಡ್‍ನ ಎರಡನೇ ಅಲೆ ಹೊಸ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದರ ನಿಯಂತ್ರಣಕ್ಕೆ ಆಸ್ಪತ್ರೆಗಳು ಸಜ್ಜಾಗಬೇಕಿದೆ. ಇದಕ್ಕೆ ಪೂರಕವಾಗಿ ಎಲ್ಲ ರೀತಿಯ ಸಹಕಾರವನ್ನು ಸರ್ಕಾರ ನೀಡಲಿದೆ’ ಎಂದೂ ಮುಖ್ಯಮಂತ್ರಿ ಹೇಳಿದರು.

‘ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ರಕ್ಷಣೆ ಸೇವೆಗಳನ್ನು ತಲುಪಿಸುವ ಮತ್ತು ಗುಣಮಟ್ಟದ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸುವ ಮೂಲಕ ಸಾರ್ವಜನಿಕರಿಗೆ ಹೆಚ್ಚು ಅನುಕೂಲ ಉಂಟು ಮಾಡುವುದು ಸರ್ಕಾರದ ಧ್ಯೇಯವಾಗಿದೆ’ ಎಂದರು.

ರಾಜ್ಯದಲ್ಲಿ ಪ್ರಸ್ತುತ 15 ಜಿಲ್ಲಾ ಆಸ್ಪತ್ರೆಗಳು, 18 ಇತರೆ ಆಸ್ಪತ್ರೆಗಳು, 207 ಸಮುದಾಯ ಆರೋಗ್ಯ ಕೇಂದ್ರಗಳು, 2,359 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 8,871 ಉಪಕೇಂದ್ರಗಳು ಮತ್ತು 146 ತಾಲ್ಲೂಕು ಆಸ್ಪತ್ರೆಗಳಿವೆ.

ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಮಾತನಾಡಿ, ‘ಮಖ್ಯಮಂತ್ರಿಯವರ ನಿರ್ದೇಶನದಂತೆ ಆರೋಗ್ಯ ಇಲಾಖೆಯ ಸುಧಾರಣೆ ಮತ್ತು ಉಚಿತ ಗುಣಮಟ್ಟದ ಚಿಕಿತ್ಸೆ ಸಿಗಬೇಕು ಎಂದು ಆರೋಗ್ಯ ಇಲಾಖೆಯ ಸಭೆ ಮಾಡಿದ್ದೇವೆ. ಸಮಿತಿ ಮೂಲಕ ಪ್ರಾತ್ಯಕ್ಷಿಕೆ ನೀಡಿದ್ದೇವೆ. ಕೇರಳ, ತಮಿಳುನಾಡಿನಲ್ಲಿ ಆರೋಗ್ಯ ವ್ಯವಸ್ಥೆ ಉತ್ತಮವಾಗಿದೆ. ನಮ್ಮ ರಾಜ್ಯದಲ್ಲಿ ಕೂಡಾ ದೇಶಕ್ಕೆ ಮಾದರಿಯಾಗುವ ಆರೋಗ್ಯ ವ್ಯವಸ್ಥೆ ಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ. ಹೆಚ್ಚುವರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ, ಮೇಲ್ದರ್ಜೆಗೆ‌ ಏರಿಸುವಿಕೆ, ಒಂದು ಕೇಂದ್ರಕ್ಕೆ ಮೂವರು ವೈದ್ಯರ ನೇಮಕ ಮಾಡಲು ಉದ್ದೇಶಿಸಲಾಗಿದೆ’ ಎಂದರು.

‘ಗ್ರಾಮೀಣ ಪ್ರದೇಶಗಳಲ್ಲಿ ವಸತಿ ವ್ಯವಸ್ಥೆ ಇಲ್ಲದ ಕಾರಣ ವೈದ್ಯರು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ವೈದ್ಯರು, ಸಿಬ್ಬಂದಿಗೆ ವಸತಿ ವ್ಯವಸ್ಥೆ ಕೂಡಾ ಒದಗಿಸಬೇಕಿದೆ. ಮಾದರಿ ಆರೋಗ್ಯ ಕೇಂದ್ರಗಳು ಸ್ಥಾಪನೆಗೆ ₹ 6 ಕೋಟಿಯಿಂದ ₹ 8 ಕೋಟಿ ವೆಚ್ಚ ತಗಲಲಿದೆ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಆಂಬ್ಯುಲೆನ್ಸ್‌ ನೀಡಲು ತೀರ್ಮಾನಿಸಲಾಗಿದೆ’ ಎಂದೂ ಹೇಳಿದರು.

ಅದಕ್ಕೂ ಮೊದಲು ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಸುಧಾಕರ್‌, ‘ಕೋವಿಡ್ ವಿಚಾರದಲ್ಲಿ ವಿರೋಧ ಪಕ್ಷಗಳಿಂದ ಯಾವುದೇ ಸಹಕಾರ ಸಿಕ್ಕಿಲ್ಲ. ಅವರಿಂದ ಸಹಕಾರ ಸಿಗುತ್ತದೆ ಎಂಬ ನಿರೀಕ್ಷೆಯೂ ನಮಗಿಲ್ಲ’ ಎಂದರು.

ಶಾಲಾ ಕಾಲೇಜುಗಳ ಆರಂಭ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈವರೆಗೂ ಜನವರಿ 1 ರಿಂದ ಆರಂಭ ಎಂಬುದರಲ್ಲಿ ಬದಲಾವಣೆ ಇಲ್ಲ. ಒಂದು ವೇಳೆ ರೂಪಾಂತರ ಕೊರೊನಾ ಕಂಡು ಬಂದರೆ ಮಾತ್ರ ನಿರ್ಧಾರ ಪುನರ್ ಪರಿಶೀಲನೆ ಮಾಡುತ್ತೇವೆ. ಇದೇ 28 ಹಾಗೂ 29ರಂದು ಈ ಬಗ್ಗೆ ಸಭೆ ನಡೆಸಿ ತೀರ್ಮಾನಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT