ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರಸಂತೆ: ಹಸಿ ಮೆಣಸಿನಕಾಯಿ ದರ ಕುಸಿತ-ಕಂಗಾಲಾದ ರೈತರು

ಇಳುವರಿ ಹೆಚ್ಚಿದ್ದರೂ ಕೈ ಸೇರದ ಲಾಭ
Last Updated 2 ಮೇ 2022, 20:30 IST
ಅಕ್ಷರ ಗಾತ್ರ

ಶನಿವಾರಸಂತೆ: ಲಾಭದ ನಿರೀಕ್ಷೆಯಲ್ಲಿ ಬೆಳೆದಿದ್ದ ಹಸಿ ಮೆಣಸಿನಕಾಯಿಯ ಮಾರುಕಟ್ಟೆ ದರ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ.

ಚೈತ್ರ ಮಾಸ ಆಗಮಿಸುತ್ತಿದ್ದಂತೆ ಜಿಲ್ಲೆಯಲ್ಲಿ ಹಸಿರುಮೆಣಸಿನಕಾಯಿ ಘಾಟು ವ್ಯಾಪಿಸುತ್ತದೆ. ರೈತರು ಬೇಸಿಗೆಯಲ್ಲಿ ಭತ್ತ ಕಟಾವಿನ ನಂತರ ಗದ್ದೆಯಲ್ಲಿ ಹಸಿಮೆಣಸಿನಕಾಯಿ ವ್ಯವಸಾಯ ಆರಂಭಿಸುತ್ತಾರೆ. ಮಳೆಗಾಲದ ಜೀವನ ನಿರ್ವಹಣೆ, ಮಕ್ಕಳ ವಿದ್ಯಾಬ್ಯಾಸದ ಖರ್ಚಿಗಾಗಿಯೇ ಮೆಣಸಿನಕಾಯಿ ಕೃಷಿ ನಡೆಯುತ್ತದೆ.

ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು, ಕೂಜಗೇರಿ, ಮಾದ್ರೆ, ಬಿಳಾಹ ಗ್ರಾಮಗಳ ಬಹುತೇಕ ರೈತರು ಗದ್ದೆಯಲ್ಲಿ ಈ ವರ್ಷ ಅಧಿಕ ಇಳುವರಿ ಕೊಡುವ ‘ಬಂಗಾರಮ್ಮ’ ಹಸಿಮೆಣಸಿನಕಾಯಿ ಬೆಳೆದಿದ್ದಾರೆ. ಆದರೆ, ಇಳುವರಿ ಹೆಚ್ಚಾಗಿದ್ದರೂ ಉತ್ತಮ ದರ ಸಿಗದೆ ಹತಾಶರಾಗಿದ್ದಾರೆ. ಕೆಲ ರೈತರು ಮಾತ್ರ ಉಲ್ಕಾ ಮೆಣಸಿನಕಾಯಿ ಬೆಳೆದಿದ್ದು, ಬೆಳೆ ಕಟಾವಿಗೆ ಬಂದಿದೆ. 3 ವಾರಗಳಿಂದ ಮೆಣಸಿನಕಾಯಿ ಸಂತೆ ಆರಂಭವಾಗಿದ್ದು, ದರದಲ್ಲಿ ನಿರಂತರ ಏರಿಳಿತವಾಗುತ್ತಿದೆ.

ಶನಿವಾರಸಂತೆಯ ಮಾರುಕಟ್ಟೆಯಲ್ಲಿ ಪ್ರತಿ ಶನಿವಾರ ಬೆಳಿಗ್ಗೆ 4 ಗಂಟೆಗೆ ಆರಂಭವಾಗುವ ಮೆಣಸಿನಕಾಯಿ ಸಂತೆ 10 ಗಂಟೆಗೆ ಮುಗಿದುಹೋಗುತ್ತಿದೆ. ಸ್ಥಳೀಯ ವ್ಯಾಪಾರಿಗಳು ರೈತರ ಮನೆ ಬಾಗಿಲಿಗೆ ಬಂದು ಮೆಣಸಿನಕಾಯಿ ಖರೀದಿಸುತ್ತಿದ್ದಾರೆ. ಈ ವಾರ ಉಲ್ಕಾ ಮೆಣಸಿನಕಾಯಿ 1 ಕೆಜಿಗೆ ₹ 30 ಹಾಗೂ ಬಂಗಾರಮ್ಮ ಮೆಣಸಿನಕಾಯಿ 1 ಕೆಜಿಗೆ ₹ 20-25 ದರ ದೊರೆತಿದೆ.

ಸ್ಥಳೀಯ ವ್ಯಾಪಾರಿಗಳು ಖರೀದಿಸಿದ ಮೆಣಸಿನಕಾಯಿ ಹಾಸನ, ಮೈಸೂರು, ಬೆಂಗಳೂರು, ಮಂಗಳೂರು, ಶಿವಮೊಗ್ಗ, ಚಿತ್ರದುರ್ಗಕ್ಕೆ ರವಾನೆಯಾಗುತ್ತಿದೆ. ಅಲ್ಲಿನ ಮಂಡಿಗಳಲ್ಲಿ ಖರೀದಿಸುವ ವ್ಯಾಪಾರಿಗಳು ತಮಿಳುನಾಡು, ಕೇರಳ, ಅಹಮದಬಾದ್, ಮುಂಬಯಿ ಇತರ ಹೊರ ರಾಜ್ಯಕ್ಕೆ ರವಾನಿಸುತ್ತಿದ್ದಾರೆ. ಕಡಿಮೆ ಬೆಲೆ ಖರೀದಿ ನಡೆಯುತ್ತಿರುವುದರಿಂದ ಲಾಭ ಸಿಗುತ್ತಿಲ್ಲ.

‘ಮಳೆಯಾಗದ ಕಾರಣ ಕೆರೆ, ಹೊಳೆಯಿಂದ ನೀರು ಹಾಯಿಸಿ ಮೆಣಸಿನಕಾಯಿ ಬೆಳೆದಿದ್ದೇವೆ. ಉತ್ತಮ ದರ ದೊರೆಯದೆ ಅಸಹಾಯಕರಾಗಿದ್ದೇವೆ’ ಎಂದು ರೈತ ಕಾಜೂರು ಚಂದ್ರಣ್ಣ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT