ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀನು ಮಾರಾಟ ಪ್ರಕರಣ: ಮುರುಘಾ ಶರಣರಿಗೆ ಬಾಡಿ ವಾರೆಂಟ್‌

Last Updated 6 ಜನವರಿ 2023, 15:23 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಗೇರಿ ಹೋಬಳಿಯ ಸೂಲಿಕೆರೆ ಗ್ರಾಮದಲ್ಲಿ ಚಿತ್ರದುರ್ಗ ಮುರುಘಾ ಮಠಕ್ಕೆ ಸೇರಿದ 7 ಎಕರೆ 18 ಗುಂಟೆ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿದ ಕ್ರಿಮಿನಲ್‌ ಆರೋಪಕ್ಕೆ ಸಂಬಂಧಿಸಿದಂತೆ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ನಗರದ 4ನೇ ಹೆಚ್ಚುವರಿ 4ನೇ ಹೆಚ್ಚುವರಿ ಮುಖ್ಯ ಮಹಾನಗರ ದಂಡಾಧಿಕಾರಿಯವರ (ಎಸಿಎಂಎಂ) ನ್ಯಾಯಾಲಯ ಬಾಡಿ ವಾರೆಂಟ್‌ ಹೊರಡಿಸಿದೆ.

ಸದ್ಯ ಚಿತ್ರದುರ್ಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಯನ್ನು, ಚಿತ್ರದುರ್ಗ ಜಿಲ್ಲಾ ಸೂಪರಿಂಟೆಂಡೆಂಟ್‌ ಆಫ್‌ ಪೊಲೀಸ್‌, ಫೆಬ್ರುವರಿ 9ರಂದು ಕೋರ್ಟ್‌ಗೆ ಹಾಜರುಪಡಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ಪ್ರಕರಣವೇನು?: ಬೆಂಗಳೂರಿನ ಹೃದಯಭಾಗದ ಗಾಂಧಿನಗರದಲ್ಲಿ ಚಿತ್ರದುರ್ಗ ಮರುಘರಾಜೇಂದ್ರ ಬೃಹನ್ಮಠಕ್ಕೆ ಸೇರಿದ ‘ತಿಪ್ಪಶೆಟ್ಟಿ’ ಹೆಸರಿನ ಶಾಖಾಮಠ ಇದೆ. ಈ ಮಠಕ್ಕೆ ಬೆಂಗಳೂರು ದಕ್ಷಿಣ ಕೆಂಗೇರಿ ಹೋಬಳಿಯ ಸೂಲಿಕರೆ ಗ್ರಾಮದಲ್ಲಿ ಸರ್ವೇ ನಂಬರ್ 34ರಲ್ಲಿ 7 ಎಕರೆ 18 ಗುಂಟೆ ಜಮೀನಿದೆ. ಮಠದ ಈ ಬಲೆಬಾಳುವ ಸ್ವತ್ತು ಮಠಕ್ಕೆ ಶಿವಮೂರ್ತಿ ಮುರುಘಾ ಶರಣರು ಅಧ್ಯಕ್ಷ.

‘ಈ ಜಮೀನನ್ನು ಶರಣರು ಆನಂದಕುಮಾರ್ ಎಂಬುವರಿಗೆ ಅಕ್ರಮವಾಗಿ ಮಾರಾಟ ಮಾಡಿದ್ದಾರೆ’ ಎಂದು ಆರೋಪಿಸಿ ತುಮಕೂರಿನ ಪಿ.ಎಸ್.ಪ್ರಕಾಶ್‌ ಬಿನ್‌ ಸಂಗಪ್ಪ ಎಂಬುವರು 2013ರಲ್ಲಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಶರಣರು ಮೊದಲ ಆರೋಪಿ ಮತ್ತು ಆನಂದಕುಮಾರ್ ಎರಡನೇ ಆರೋಪಿ.

ಕಡಿಮೆ ದರಕ್ಕೆ ಮಾರಾಟ: ‘ಆರೋಪಿಗಳಾದ ಶರಣರು ಮತ್ತು ಆನಂದಕುಮಾರ್ 7 ಎಕರೆ 18 ಗುಂಟೆ ಜಮೀನನ್ನು ಅಕ್ರಮವಾಗಿ ಸಬ್‌ ರಿಜಿಸ್ಟ್ರಾರ್‌ (ಉಪ ನೋಂದಣಾಧಿಕಾರಿ) ಕಚೇರಿಯಲ್ಲಿ ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಕ್ರಯ ಮಾಡಿಸಿಕೊಂಡಿರುತ್ತಾರೆ. ಈ ಜಮೀನನ್ನು ಮಾರಾಟ ಮಾಡುವ ಮುನ್ನ ಈ ವಿಷಯವನ್ನು ಶರಣರು ಭಕ್ತರ ಗಮನಕ್ಕೆ ತಂದಿರುವುದಿಲ್ಲ. ಅಂತೆಯೇ ಯಾವುದೇ ಸಾರ್ವಜನಿಕ ಪ್ರಕಟಣೆಯನ್ನೂ ನೀಡಿರುವುದಿಲ್ಲ‘ ಎಂದು ಪ್ರಕಾಶ್‌ ದೂರಿನಲ್ಲಿ ಆರೋಪಿಸಿದ್ದಾರೆ.

‘ಈ ಜಮೀನಿನ ಬೆಲೆ 2008ರಲ್ಲಿ 1 ಎಕರೆಗೆ ₹ 50 ಲಕ್ಷ ಮೌಲ್ಯ ಹೊಂದಿದ್ದು, 7 ಎಕರೆಗೆ ಸುಮಾರು ₹ 3.72 ಕೋಟಿ ಆಗಿರುತ್ತದೆ. ಸಬ್‌ ರಿಜಿಸ್ಟ್ರಾರ್ ಕಚೇರಿಗೆ ನೋಂದಣಿ ಶುಲ್ಕವನ್ನೇ 30 ಲಕ್ಷ ಕಟ್ಟಬೇಕಾಗಿರುತ್ತದೆ. ಆದರೆ, ಇಷ್ಟೂ ಜಮೀನನ್ನು ಕೇವಲ ₹ 49 ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ಈ ಜಮೀನಿನ ಬೆಲೆ ಪ್ರಸ್ತುತ ₹ 1 ಕೋಟಿ ಇದೆ. ಇದರಿಂದ ಮಠಕ್ಕೆ ಸುಮಾರು ₹ 7 ಕೋಟಿ ನಷ್ಟವುಂಟಾಗಿರುತ್ತದೆ’ ಎಂದು ದೂರಿನಲ್ಲಿ ಆಪಾದಿಸಲಾಗಿದೆ.

ಭಕ್ತರಿಗೆ ದ್ರೋಹ: ‘ಶರಣರು ಮಠದ ಹೆಸರಿನಲ್ಲಿ ನೋಂದಣಿ ಆಗದ ಏಕೈಕ (ಸೋಲ್‌) ಟ್ರಸ್ಟ್‌ ಡೀಡ್‌ ಇಟ್ಟುಕೊಂಡು ಭಕ್ತರಿಗೆ ನಂಬಿಕೆ ದ್ರೋಹ ಮಾಡುತ್ತಿದ್ದಾರೆ. ಮಠಕ್ಕೆ ಸೇರಿದ ನೂರಾರು ಕೋಟಿ ರೂಪಾಯಿಗಳ ಬೃಹತ್‌ ಮೊತ್ತದ ಸ್ಥಿರಾಸ್ತಿಗಳನ್ನು ಮಾರಾಟ ಮಾಡಿರುತ್ತಾರೆ. 1995ರಲ್ಲಿ ಹಾವೇರಿಯಲ್ಲಿ ಕೋರ್ಟ್‌ ಪರವಾನಗಿ ಪಡೆದು ಜಮೀನು ಮಾರಾಟ ಮಾಡಿರುತ್ತಾರೆ’ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಬಾಡಿ ವಾರೆಂಟ್‌ ಎಂದರೇನು?: ಒಂದು ಕೇಸಿನಲ್ಲಿ ಈಗಾಗಲೇ ಬಂಧನದಲ್ಲಿರುವ ವ್ಯಕ್ತಿಯನ್ನು ಮತ್ತೊಂದು ಕೇಸಿನಲ್ಲಿ ಕೋರ್ಟ್‌ಗೆ ಹಾಜರುಪಡಿಸಲು ಬೇಕಾಗಿರುವಾಗ ಆ ವ್ಯಕ್ತಿಯನ್ನು ಖುದ್ದಾಗಿ ಅರ್ಥಾತ್‌ ದೈಹಿಕವಾಗಿ ಹಾಜರುಪಡಿಸಲು ಸಿಆರ್‌ಪಿಸಿ ಕಲಂ 267ರ ಅನ್ವಯ ಹೊರಡಿಸುವ ಆದೇಶವೇ ಬಾಡಿ ವಾರೆಂಟ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT