ಶನಿವಾರ, ಅಕ್ಟೋಬರ್ 24, 2020
27 °C
ಐದು ಕೊಂಬು, ನಾಡ ಬಂದೂಕು ಜಪ್ತಿ

ಬಿಳಿಕಲ್ಲು ಬೆಟ್ಟದ ಜಿಂಕೆ ಹಂತಕ ಬೆಂಗಳೂರಿನಲ್ಲಿ ಸಿಕ್ಕಿಬಿದ್ದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಮನಗರ ಜಿಲ್ಲೆಯ ಬಿಳಿಕಲ್ಲು ಬೆಟ್ಟದಲ್ಲಿ ಮೂರು ಜಿಂಕೆಗಳನ್ನು ಕೊಂದು ಅವುಗಳ ಕೊಂಬು ಮಾರಾಟ ಮಾಡಲು ಬೆಂಗಳೂರಿಗೆ ಬಂದಿದ್ದ ಆರೋಪಿ ಮಲ್ಲೇಶ್ (50) ಎಂಬಾತನನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ.

‘ಕನಕಪುರ ತಾಲ್ಲೂಕಿನ ಕೋಣಾಳದೊಡ್ಡಿಯ ಮಲ್ಲೇಶ್, ಇದೇ 3ರಂದು ಬನಶಂಕರಿ 3ನೇ ಹಂತದ ಬಸ್ ನಿಲ್ದಾಣ ಬಳಿ ನಿಂತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆತನನ್ನು ಬಂಧಿಸಲಾಯಿತು. ಜಿಂಕೆಯ ಐದು ಕೊಂಬುಗಳು, ಆನೆಯ ದಂತ ಹಾಗೂ ನಾಡ ಬಂದೂಕು ಜಪ್ತಿ ಮಾಡಲಾಗಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದರು.

‘ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ’ ಎಂದೂ ಹೇಳಿದರು.

ವಾರಕ್ಕೊಮ್ಮೆ ಕಾಡಿನಲ್ಲಿ ಬೇಟೆ; ‘ತಂದೆಯು ಮನೆಯಲ್ಲಿಟ್ಟಿದ್ದ ನಾಡ ಬಂದೂಕನ್ನು ಆರೋಪಿ ಮಲ್ಲೇಶ್ ಬಳಸುತ್ತಿದ್ದ. ವಾರಕ್ಕೊಮ್ಮೆ ಕಾಡಿಗೆ ಹೋಗಿ ಪ‍್ರಾಣಿಗಳನ್ನು ಬೇಟೆಯಾಡುತ್ತಿದ್ದ’ ಎಂದು ಡಿಸಿಪಿ ಹರೀಶ್ ತಿಳಿಸಿದರು.

‘ಜಿಂಕೆ ಕೊಂದು ಚರ್ಮ, ಮಾಂಸ ಹಾಗೂ ಕೊಂಬು ಮಾರಿದರೆ ಹೆಚ್ಚು ಹಣ ಗಳಿಸಬಹುದೆಂದು ಆರೋಪಿ ಯೋಚಿಸಿದ್ದ. ನಂತರವೇ ಬೆಟ್ಟಕ್ಕೆ ಹೋಗಿ 5 ಜಿಂಕೆಗಳನ್ನು ಬೇಟೆಯಾಡಿ ಕೊಂದಿದ್ದ. ಅದರ ಮಾಂಸ, ಚರ್ಮ ಹಾಗೂ ಒಂದು ಕೊಂಬನ್ನು ತಮಿಳುನಾಡಿನ ಜನರಿಗೆ ಮಾರಾಟ ಮಾಡಿದ್ದ. ಐದು ಕೊಂಬುಗಳನ್ನು ಮನೆಯಲ್ಲೇ ಇಟ್ಟುಕೊಂಡಿದ್ದ. ಬೇಟೆಗೆ ಹೋದಾಗ ಆತನಿಗೆ ಆನೆ ದಂತವೊಂದು ಸಿಕ್ಕಿತ್ತು’ ಎಂದೂ ಹೇಳಿದರು.

‘ಲಾಕ್‌ಡೌನ್‌ನಿಂದಾಗಿ ಆರೋಪಿಗೆ ಆರ್ಥಿಕ ತೊಂದರೆ ಉಂಟಾಗಿತ್ತು. ಕೊಂಬು ಹಾಗೂ ಆನೆದಂತವನ್ನು ಮಾರಾಟ ಮಾಡಲು ಗ್ರಾಹಕರಿಗಾಗಿ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ’ ಎಂದೂ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು