ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಮ ಗಂಟು ರೋಗಕ್ಕೆ ಚಿಕಿತ್ಸೆಗೆ ಕ್ರಮ: ಬಸವರಾಜ ಬೊಮ್ಮಾಯಿ ಭರವಸೆ

Last Updated 22 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ಚರ್ಮ ಗಂಟು (ಲಂಪಿ ಸ್ಕಿನ್‌) ರೋಗದಿಂದ ಬಳಲುವ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಹಾಗೂ ಈ ಸೋಂಕಿನಿಂದ ಮೃತಪಡುವ ಜಾನುವಾರುಗಳ ಮಾಲೀಕರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ವಿಧಾನಸಭೆಯಲ್ಲಿ ಗುರುವಾರ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ವಿರೂಪಾಕ್ಷಪ್ಪ ಬಳ್ಳಾರಿ, ‘ರಾಜ್ಯದ ಹಲವು ಜಿಲ್ಲೆಗಳಲ್ಲಿ ಚರ್ಮ ಗಂಟು ರೋಗದಿಂದ ಜಾನುವಾರುಗಳು ಸಾಯುತ್ತಿವೆ. ಸರಿಯಾದ ಚಿಕಿತ್ಸೆ ಇಲ್ಲ. ಜಾನುವಾರುಗಳ ಮಾಲೀಕರಿಗೆ ಪರಿಹಾರವೂ ಸಿಗುತ್ತಿಲ್ಲ. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಚರ್ಮ ಗಂಟು ರೋಗದಿಂದ ಬಳಲುವ ಜಾನುವಾರುಗಳ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ರೋಗ ನಿಯಂತ್ರಣಕ್ಕೆ ಲಸಿಕೆಯನ್ನೂ ಹಾಕಲಾಗುತ್ತಿದೆ’ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಉತ್ತರಿಸಿದರು. ಪರಿಹಾರ ನೀಡುವ ಕುರಿತು ಪ್ರಕಟಿಸಿಲ್ಲ ಎಂದು ಅಸಮಾಧಾನಗೊಂಡ ವಿರೂಪಾಕ್ಷಪ್ಪ ಸಭಾಧ್ಯಕ್ಷರ ಪೀಠದ ಎದುರು ಧರಣಿಗೆ ಮುಂದಾದರು.

ಶಾಸಕರ ಮನವೊಲಿಸಿದ ಮುಖ್ಯಮಂತ್ರಿ, ‘ಚರ್ಮ ಗಂಟು ರೋಗಕ್ಕೆ ಚಿಕಿತ್ಸೆಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಮೃತ ಜಾನುವಾರುಗಳ ಮಾಲೀಕರಿಗೆ ಪರಿಹಾರವನ್ನೂ ನೀಡಲಾಗುವುದು’ ಎಂದರು.

‘ವಿದ್ಯುತ್‌ ಪರಿವರ್ತಕ: 7 ಲಕ್ಷ ಅರ್ಜಿ’
ಬೆಂಗಳೂರು:
ಕೃಷಿ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಪಡೆದಿರುವವರಿಗೆ ಅಕ್ರಮ– ಸಕ್ರಮ ಯೋಜನೆಯಡಿ ಪ್ರತ್ಯೇಕ ವಿದ್ಯುತ್‌ ಪರಿವರ್ತಕ ಅಳವಡಿಸುವಂತೆ ಕೋರಿ ಏಳು ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳನ್ನು ಹಂತ ಹಂತವಾಗಿ ವಿಲೇವಾರಿ ಮಾಡಲಾಗುವುದು ಎಂದು ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ತಿಳಿಸಿದರು.

ಅಕ್ರಮ–ಸಕ್ರಮ ಯೋಜನೆಯಡಿ ವಿದ್ಯುತ್‌ ಪರಿವರ್ತಕಗಳ ಅಳವಡಿಕೆ ವಿಳಂಬವಾಗುತ್ತಿರುವ ಕುರಿತು ಜೆಡಿಎಸ್‌ನ ಕೆ.ಎಂ. ಶಿವಲಿಂಗೇಗೌಡ ಶೂನ್ಯ ವೇಳೆಯಲ್ಲಿ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ‘ರಾಜ್ಯದ ಎಲ್ಲ ವಿದ್ಯುತ್‌ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಏಳು ಲಕ್ಷ ಅರ್ಜಿಗಳಿವೆ. ಅರಸೀಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 4,147 ಅರ್ಜಿಗಳು ಸಲ್ಲಿಕೆಯಾಗಿದ್ದು, 1,096 ಬಾಕಿ ಇವೆ. ಶೀಘ್ರದಲ್ಲಿ ಪರಿವರ್ತಕ ಅಳವಡಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT