ಶುಕ್ರವಾರ, ಡಿಸೆಂಬರ್ 3, 2021
26 °C

371 (ಜೆ) ಕೋಶ ಕಲಬುರಗಿಗೆ ಸ್ಥಳಾಂತರಕ್ಕೆ ಆದೇಶ: ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಹಾಗೂ ಹುದ್ದೆಗಳ ನೇಮಕಾತಿಯ ಮೇಲ್ವಿಚಾರಣೆ ನಡೆಸುವ 371 (ಜೆ) ಕೋಶವನ್ನು ಕಲಬುರಗಿಗೆ ಸ್ಥಳಾಂತರಿಸಲು ಆದೇಶ ಹೊರಡಿಸಲಾಗಿದೆ. ಶೀಘ್ರ ಕೋಶ ಕಲಬುರಗಿಯಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಉಪ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳಲು ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಲಮೇಲಕ್ಕೆ ತೆರಳುವುದಕ್ಕಾಗಿ ಬೆಂಗಳೂರಿನಿಂದ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಸದನದಲ್ಲಿ ಭರವಸೆ ನೀಡಿದಂತೆ ಕಲ್ಯಾಣ ಕರ್ನಾಟಕ ‍ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ಪೂರ್ಣ ಪ್ರಮಾಣದ ಕಾರ್ಯದರ್ಶಿಯನ್ನು ನೇಮಕ ಮಾಡಲಾಗಿದೆ. ಈ ಭಾಗದ ಜನರ ಬೇಡಿಕೆಯಾಗಿದ್ದ 371 (ಜೆ) ಕೋಶ ಸ್ಥಳಾಂತರವೂ ಶೀಘ್ರವೇ ಆಗಲಿದೆ. ಈ ಭಾಗದಲ್ಲಿ ಖಾಲಿ ಹುದ್ದೆಗಳ ನೇಮಕಾತಿಯ ಬಗ್ಗೆ  ಉಪ ಚುನಾವಣೆ ಮುಗಿದ ಬಳಿಕ ಹೇಳಿಕೆ ನೀಡುತ್ತೇನೆ’ ಎಂದರು.

₹ 1500 ಕೋಟಿ ಡಿಪಿಆರ್‌ಗೆ ಸೂಚನೆ: ಕೆಕೆಆರ್‌ಡಿಬಿಗೆ ಈಗ ನೀಡಲಾಗುತ್ತಿರುವ ₹ 1500 ಕೋಟಿಯ ಜೊತೆಗೆ ಹೆಚ್ಚುವರಿ ₹ 1500 ಕೋಟಿ ನೀಡಲು ಸರ್ಕಾರ ಉತ್ಸುಕವಾಗಿದೆ. ಅದಕ್ಕೂ ಮೊದಲೇ ಮಂಡಳಿಗೆ ಬಿಡುಗಡೆಯಾಗುವ ಹಣವನ್ನು ಖರ್ಚು ಮಾಡಲೇಬೇಕಿದೆ. ಆ ಬಳಿಕ ನೀಡುವ ಹೆಚ್ಚುವರಿ ಹಣಕ್ಕೆ ಸಮಗ್ರ ಯೋಜನಾ ವರದಿ (ಡಿಪಿಆರ್‌) ತಯಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.

ತಜ್ಞರ ವರದಿ ಆಧರಿಸಿ ಶೆಡ್ ನಿರ್ಮಾಣ: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವಾರ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪನ ಆದ ಬಗ್ಗೆ ಪರಿಶೀಲಿಸಲು ಕಂದಾಯ ಸಚಿವ ಆರ್. ಅಶೋಕ ಭೇಟಿ ನೀಡಿ ತಜ್ಞರು, ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ. ಭೂಕಂಪನ ತಜ್ಞರು ವರದಿ ನೀಡಿದ ಬಳಿಕ ಗ್ರಾಮಸ್ಥರಿಗೆ ವೈಯಕ್ತಿಕ ಶೆಡ್ ನಿರ್ಮಿಸುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ’ ಎಂದರು.

‘ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ’ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.

ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ಬಸವರಾಜ ಮತ್ತಿಮೂಡ, ಸುನೀಲ ವಲ್ಯಾಪುರೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು