ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯ ಆರೋಗ್ಯ ಸೇವೆಗೆ ಪ್ರತ್ಯೇಕ ಸಿಬ್ಬಂದಿ ಅಗತ್ಯ: ಸಿಎಂ ಬೊಮ್ಮಾಯಿ

Last Updated 12 ಸೆಪ್ಟೆಂಬರ್ 2021, 7:06 IST
ಅಕ್ಷರ ಗಾತ್ರ

ಬೆಂಗಳೂರು: ಸಮುದಾಯ ಆರೋಗ್ಯ ಸೇವೆಗೆ ಪ್ರತ್ಯೇಕವಾದ ಸಿಬ್ಬಂದಿ ಅಗತ್ಯವಿದೆ. ಇದಕ್ಕಾಗಿ ಆರೋಗ್ಯ ಇಲಾಖೆಯಲ್ಲಿ ಪ್ರತ್ಯೇಕ ವೃಂದ ರಚಿಸಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸೌಧದ ಆವರಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಸಮಾರಂಭದಲ್ಲಿ ಅತ್ಯಾಧುನಿಕ ಜೀವ ರಕ್ಷಣಾ ವ್ಯವಸ್ಥೆ ಹೊಂದಿರುವ 120 ಆಂಬುಲೆನ್ಸ್‌ಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸೇವೆಗೆ ಒಪ್ಪಿಸಿ ಅವರು ಮಾತನಾಡಿದರು.

ಅಪೌಷ್ಟಿಕತೆಯಿಂದ ಮಕ್ಕಳಲ್ಲಿ ಅಂಧತ್ವ ಸಮಸ್ಯೆ ಕಾಣಿಸಿಕೊಳ್ಳುತ್ತಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ಇಂತಹ ಸಮಸ್ಯೆಗಳನ್ನು ನೋಡಿದಾಗ ಕರುಳು ಕಿತ್ತು ಬಂದಷ್ಟು ವೇದನೆಯಾಗುತ್ತಿದೆ. ಈ ರೀತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸಮುದಾಯ ಆರೋಗ್ಯ ಸೇವೆಗೆ ಅಗತ್ಯ ಸಿಬ್ಬಂದಿ ಒದಗಿಸಬೇಕು. ಇದಕ್ಕಾಗಿಯೇ ಸಮುದಾಯ ಆರೋಗ್ಯ ಸೇವೆಯ ಡಿಪ್ಲೊಮಾ ಕೋರ್ಸ್‌ ಆರಂಭಿಸುವ ಅಗತ್ಯವಿದೆ ಎಂದರು.

ಒಂದೇ ಪ್ರಾಧಿಕಾರ ಅಗತ್ಯ: ‘ಬೆಂಗಳೂರಿನಲ್ಲಿ ಒಂದೇ ಪ್ರಾಧಿಕಾರದ ಅಡಿಯಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸಬೇಕಿದೆ. ನಗರದಲಿ ಜನಸಾಂದ್ರತೆ ಹೆಚ್ಚಿರುವ ಕಾರಣದಿಂದ ಸೂಕ್ತವಾದ ವ್ಯವಸ್ಥೆ ಮಾಡಬೇಕಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಗಮನಹರಿಸಲಾಗುವುದುʼ ಎಂದು ಬೊಮ್ಮಾಯಿ ತಿಳಿಸಿದರು.

ಬಹಳ ಹಿಂದಿನಿಂದಲೂ ಆಂಬುಲೆನ್ಸ್‌ ವ್ಯವಸ್ಥೆ ಇತ್ತು. ಆದರೆ, ಹಿಂದೆ ರೋಗಿಗಳ ಸಾಗಣೆಗೆ ಮಾತ್ರ ಬಳಕೆಯಾಗುತ್ತಿತ್ತು. ಈಗ ಆಂಬುಲೆನ್ಸ್‌ನಲ್ಲೇ ಚಿಕಿತ್ಸೆ ನೀಡುವ ವ್ಯವಸ್ಥೆಯೂ ಇದೆ. ಈ ಸೇವೆ ಮತ್ತಷ್ಟು ಸದೃಢವಾಗಿ ಬೆಳೆಯಬೇಕು. ಆಲಸ್ಯ, ಬೇಜವಾಬ್ದಾರಿತನ ಇಲ್ಲದೆ ಜನರಿಗೆ ಸೇವೆ ನೀಡುವುದನ್ನು ಆಂಬುಲೆನ್ಸ್‌ ಸಿಬ್ಬಂದಿ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೋವಿಡ್‌ ನಿರ್ವಹಣೆಯಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಮತ್ತು ಹಿಂದಿನ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ, ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದು ಮುಖ್ಯಮಂತ್ರಿ ಶ್ಲಾಘಿಸಿದರು.

ಜಿಪಿಎಸ್‌ ಅಳವಡಿಕೆ: ಡಾ.ಕೆ. ಸುಧಾಕರ್‌ ಮಾತನಾಡಿ, ‘ಆರೋಗ್ಯ ಇಲಾಖೆಯಲ್ಲಿ 710 ಆಂಬುಲೆನ್ಸ್‌ಗಳು ಜನರಿಗೆ ಸೇವೆ ನೀಡುತ್ತಿದ್ದವು. ಈಗ ಅತ್ಯಾಧುನಿಕ ಜೀವ ರಕ್ಷಣಾ ವ್ಯವಸ್ಥೆ ಇರುವ 120 ಆಂಬುಲೆನ್ಸ್‌ಗಳು ಸೇವೆಗೆ ಲಭ್ಯವಾಗುತ್ತಿವೆʼ ಎಂದರು.

ಎಲ್ಲ ಆಂಬುಲೆನ್ಸ್‌ಗಳಿಗೂ ಜಿಪಿಎಸ್‌ ಅಳವಡಿಸಲಾಗುವುದು. ಈಗ ಪ್ರತಿ ಲಕ್ಷ ಜನರಿಗೆ ಒಂದು ಆಂಬುಲೆನ್ಸ್‌ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ 40,000ದಿಂದ 50,000 ಜನರಿಗೆ ಒಂದು ಆಂಬುಲೆನ್ಸ್‌ ಒದಗಿಸುವ ಗುರಿ ಇದೆ ಎಂದು ಹೇಳಿದರು.

ಸಚಿವರಾದ ಬಿ. ಶ್ರೀರಾಮುಲು, ಎಸ್‌.ಟಿ. ಸೋಮಶೇಖರ್‌, ಬೈರತಿ ಬಸವರಾಜ, ಮುನಿರತ್ನ, ಸಂಸದ ಪಿ.ಸಿ. ಮೋಹನ್‌, ಯಲಹಂಕ ಶಾಸಕ ಎಸ್‌.ಆರ್‌. ವಿಶ್ವನಾಥ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT