ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕವನ್ನು ದೇಶದಲ್ಲೇ ನಂ.1 ಮಾಡ್ತೇವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕೋಟಿ ಕಂಠ ಗಾಯನ ಕಾರ್ಯಕ್ರಮ
Last Updated 28 ಅಕ್ಟೋಬರ್ 2022, 11:38 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದಲ್ಲಿ ನೆಲೆಸಿರುವ ಪ್ರತಿಯೊಬ್ಬರಿಗೂ ಬದುಕು ಕಟ್ಟಿಕೊಳ್ಳಲು, ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ನೀಡುವ ಮೂಲಕ ಭಾರತದಲ್ಲೇ ನಂಬರ್‌ 1 ರಾಜ್ಯ ಮಾಡುವ ಛಲವನ್ನು ತೊಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕೋಟಿ ಕಂಠ ಗಾಯನ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಅವರು, ಕರ್ನಾಟಕ ಇನ್ನಷ್ಟು ಶಕ್ತಿಶಾಲಿಯಾಗಿ ಹೊರ ಹೊಮ್ಮಲು ಎಲ್ಲ ಕನ್ನಡಿಗರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ಕನ್ನಡನಾಡು ಶ್ರೇಷ್ಠವಾದ ನಾಡು ಮತ್ತು ನಿಸರ್ಗಭರಿತ ನಾಡು. ಕಾಡು, ನದಿ ಮೂಲ, ಹಲವು ರೀತಿಯ ಕೃಷಿ ವಲಯಗಳಿಂದ ಕೂಡಿರುವ ರಾಜ್ಯ. ಅತ್ಯುತ್ತಮ ಮಾನವ ಸಂಪನ್ಮೂಲವನ್ನು ಹೊಂದಿರುವ ಪ್ರಗತಿಪರ ಮತ್ತು ಅಗ್ರ ಶ್ರೇಣಿಯ ರಾಜ್ಯವಾಗಿದೆ ಎಂದು ಬೊಮ್ಮಾಯಿ ಹೇಳಿದರು.

ಎಲ್ಲ ಕನ್ನಡಿಗರನ್ನೂ ಒಂದುಗೂಡಿಸುವ ಶ್ರೇಷ್ಠವಾದ ಕಾರ್ಯಕ್ರಮ ಕೋಟಿ ಕಂಠ ಗಾಯನ. ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ ಕುಮಾರ್ ಅವರ ಅತ್ಯುತ್ತಮ ಪರಿಕಲ್ಪನೆಯ ಕಾರ್ಯಕ್ರಮವಾಗಿದೆ. ಇದರಿಂದ ಕನ್ನಡಿಗರಲ್ಲಿ ಒಗ್ಗಟ್ಟು ಮೂಡುವುದಕ್ಕೆ ಸಹಾಯಕವಾಗಲಿದೆ. ಕರ್ನಾಟಕ ಅತ್ಯುನ್ನತ ಸ್ಥಾನಕ್ಕೆ ಏರಬೇಕು ಎಂಬ ಹಿರಿಯರ ಕನಸು ನನಸಾಗುವ ಸಂಕ್ರಮಣ ಕಾಲದಲ್ಲಿದ್ದೇವೆ. ಈ ಬಾರಿ ಕೋಟಿ ಕಂಠ ಗಾಯನ ವಿಶ್ವ ದಾಖಲೆಯನ್ನು ಸೃಷ್ಟಿಸಿದೆ ಎಂದು ಬೊಮ್ಮಾಯಿ ಹೇಳಿದರು.

ಪುನೀತ್‌ಗೆ ಕರ್ನಾಟಕ ರತ್ನ:ಪುನೀತ್‌ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ನ.1 ರಂದು ಸಂಜೆ 4 ಗಂಟೆಗೆ ವಿಧಾನಸೌಧದ ಮುಂಭಾಗ ಪ್ರದಾನ ಮಾಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ಕೋಟಿ ಕಂಠ ಗಾಯನ ಕಾರ್ಯಕ್ರಮ
ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ಕೋಟಿ ಕಂಠ ಗಾಯನ ಕಾರ್ಯಕ್ರಮ

1.50 ಕೋಟಿ ಜನರಿಂದ ಗಾಯನ:ಕೋಟಿ ಕಂಠ ಗಾಯನದಲ್ಲಿ ಸುಮಾರು 1.50 ಕೋಟಿ ಜನರು ಭಾಗವಹಿಸಿ ಕನ್ನಡದ ಹಾಡುಗಳನ್ನು ಹಾಡಿದ್ದಾರೆ. 50 ದೇಶಗಳು, 29 ರಾಜ್ಯಗಳೂ ಸೇರಿ ವಿಶ್ವದ ಉದ್ದಗಲ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ಕಂಠೀರವ ಕ್ರೀಡಾಂಗಣದಲ್ಲಿ ಸುಮಾರು 50 ಸಾವಿರ ನಾಗರಿಕರು, ವಿದ್ಯಾರ್ಥಿಗಳು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡ ಸಂಸ್ಕೃತಿ ಸಚಿವ ಸುನಿಲ್‌ ಕುಮಾರ್‌, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ, ಕಂದಾಯ ಸಚಿವ ಆರ್‌.ಅಶೋಕ, ಸಂಸದ ಡಿ.ವಿ.ಸದಾನಂದಗೌಡ ಸೇರಿ ಹಲವರು ಭಾಗವಹಿಸಿದ್ದರು.

ನೆಲ, ಜಲ, ಆಗಸದಲ್ಲೂ(ವಿಮಾನ) ಗೀತೆಗಳ ಗಾಯನ ನಡೆದಿದ್ದು, ಬೆಂಗಳೂರಿನಿಂದ ಗ್ವಾಲಿಯರ್‌ಗೆ ತೆರಳುವ ಸ್ಪೈಸ್‌ ಜೆಟ್‌ ವಿಮಾನದಲ್ಲಿ, ಮಲ್ಪೆ ಬೀಚ್‌, ಕೇಂದ್ರ ಕಾರಾಗೃಹಗಳು, ಮೈಸೂರು ಅರಮನೆ ಮುಂಭಾಗ ಸೇರಿ ಹತ್ತು ಸಾವಿರ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು. 30 ಸಾವಿರಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಭಾಗಿಯಾಗಿದ್ದವು.

ಕಾರ್ಯಕ್ರಮದಲ್ಲ ರಾಷ್ಟ್ರಕವಿ ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ, ಹುಯಿಲಗೋಳ ನಾರಾಯಣರಾವ್‌ ವಿರಚಿತ ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು, ಚನ್ನವೀರ ಕಣವಿಯವರ ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ, ಕುವೆಂಪು ಅವರ ಬಾರಿಸುವ ಕನ್ನಡ ಡಿಂಡಿಮವಾ, ಡಾ.ಡಿ.ಎಸ್‌.ಕರ್ಕಿಯವರ ಹಚ್ಚೇವು ಕನ್ನಡದ ದೀಪ, ಹಂಸಲೇಖ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳನ್ನು ಹಾಡಲಾಯಿತು.

ಕಾರ್ಯಕ್ರಮದ ಕುರಿತು ಮಾತನಾಡಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ಕುಮಾರ್‌, ಕನ್ನಡದ ಈ ಗೀತ ಗಾಯನಕ್ಕೆ ನಿರೀಕ್ಷೆ ಮೀರಿದ ಸ್ಪಂದನೆ ವ್ಯಕ್ತವಾಗಿದೆ. ಒಂದೂವರೆ ಕೋಟಿ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ಹೇಳಿದ್ದಾರೆ.

ದೂರ ಉಳಿದ ಚಿತ್ರರಂಗ:ವಿಶ್ವ ವ್ಯಾಪಿ ನಡೆದ ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗ ಭಾಗವಹಿಸಿರಲಿಲ್ಲ. ತಮ್ಮ ಚಿತ್ರಗಳ ಪ್ರಚಾರದ ಸಲುವಾಗಿ ಕನ್ನಡ ಭಾಷೆಯ ಬಗ್ಗೆ ಮಾತನಾಡುವ ಚಿತ್ರರಂಗದ ಯಾವುದೇ ವ್ಯಕ್ತಿ ಭಾಗವಹಿಸಿರಲಿಲ್ಲ. ಆದರೆ ಜನ ಸಾಮಾನ್ಯರು, ಕನ್ನಡ ಪ್ರೇಮಿಗಳು ಸ್ವಯಂ ಪ್ರೇರಣೆಯಿಂದ ಬಂದು ಭಾಗವಹಿಸಿದ್ದರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT