ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಮಾಳ ಭೂಮಿ: ಪರಭಾರೆ ಮಾಡದಿರಲು ಆಗ್ರಹ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ವೃಕ್ಷ ಲಕ್ಷ ಆಂದೋಲನ ಕರ್ನಾಟಕ ಮನವಿ
Last Updated 10 ಮಾರ್ಚ್ 2022, 16:49 IST
ಅಕ್ಷರ ಗಾತ್ರ

ಬೆಂಗಳೂರು:‘ರಾಜ್ಯದ ಗೋಮಾಳ ಭೂಮಿ, ಬೆಟ್ಟ ಪ್ರದೇಶಗಳನ್ನು ಉದ್ಯಮಿಗಳು ಮತ್ತು ಸಂಘ–ಸಂಸ್ಥೆಗಳಿಗೆ ಪರಭಾರೆ ಮಾಡಬಾರದು’ಎಂದು ವೃಕ್ಷ ಲಕ್ಷ ಆಂದೋಲನ ಕರ್ನಾಟಕವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಿದೆ.

ಕರ್ನಾಟಕ ಜೀವ ವೈವಿಧ್ಯ ಮಂಡಳಿನಿಕಟಪೂರ್ವ ಅಧ್ಯಕ್ಷಅನಂತ ಹೆಗಡೆ ಅಶೀಸರ ಅವರ ನೇತೃತ್ವದ ನಿಯೋಗ ಈ ಬಗ್ಗೆ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೂ ಮನವಿ ನೀಡಿದೆ. ‘ಗ್ರಾಮೀಣರ ಬದುಕನ್ನು ಕಾಯುವ ಮೂಲೆಸೆಲೆಗಳಲ್ಲೊಂದಾದ ಈ ಗೋಮಾಳ, ಬೆಟ್ಟ ಭೂಮಿಯನ್ನು ಸರ್ಕಾರ ರಕ್ಷಿಸಬೇಕು. ಈ ಸಮುದಾಯ ಪ್ರದೇಶಗಳನ್ನು ಸಾರ್ವಜನಿಕ ವಲಯದಲ್ಲಿಯೇ ಇರಿಸಿಕೊಳ್ಳಬೇಕು. ಈಗಾಗಲೇ ಅತಿಕ್ರಮಣವಾಗಿರುವ ಅಥವಾ ಪರಾಭಾರೆ ಆಗಿರುವ ಗೋಮಾಳ ಭೂಮಿಯನ್ನು ಪುನಃ ಹಸಿರೀಕರಣ ಮಾಡಲು ಸೂಕ್ತ ಕಾರ್ಯಕ್ರಮ ರೂಪಿಸಬೇಕು’ ಎಂದು ನಿಯೋಗದ ಸದಸ್ಯರು ಆಗ್ರಹಿಸಿದ್ದಾರೆ.

‘ರಾಜ್ಯದಲ್ಲಿ ಸುಮಾರು 17.5 ಲಕ್ಷಹೆಕ್ಟೇರ್ ಗೋಮಾಳ ಭೂಮಿಯಿದೆ. ಇದನ್ನು ಗೋಮಾಳ, ಕಾವಲ್, ಬೆಟ್ಟ, ಸೊಪ್ಪಿನ ಬೆಟ್ಟ ಇತ್ಯಾದಿ ಹೆಸರುಗಳಿಂದ ಸರ್ಕಾರಿ ದಾಖಲೆಯಲ್ಲಿ ಗುರುತಿಸಲಾಗಿದೆ. ಇದೂ ಸೇರಿದಂತೆ ರಾಜ್ಯದಲ್ಲಿ ಒಟ್ಟು 25 ಲಕ್ಷ ಹೆಕ್ಟರ್ ಸರ್ಕಾರಿ ಕಂದಾಯ ಜಮೀನಿದೆ. ಇದು ಅತ್ಯಂತ ಮಹತ್ವದ ಸಾಮೂಹಿಕ ಭೂಮಿಯಾಗಿದೆ. ಈ ಭೂಮಿಯನ್ನು ಉದ್ಯಮಿಗಳು ಹಾಗೂ ಸಂಘ–ಸಂಸ್ಥೆಗಳಿಗೆವಿತರಿಸುವ ಬಗ್ಗೆ ಸರ್ಕಾರ ಸಂಪುಟಉಪ ಸಮಿತಿ ರಚಿಸಿದೆ. ಈ ಕ್ರಮವು ಗೋಮಾಳ ಭೂಮಿಗಳ ನಾಶಕ್ಕೆ ಕಾರಣವಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘ಸರ್ಕಾರ ಸ್ಥಾಪಿಸಿರುವ ಗೋಶಾಲೆಗಳ ವ್ಯಾಪ್ತಿಯಲ್ಲಿನ ಗೋಮಾಳವನ್ನು ಗುರುತಿಸಿ, ಅವುಗಳನ್ನು ರಕ್ಷಿಸಲು ಪಶುಸಂಗೋಪನೆ ಇಲಾಖೆಯು ಯೋಜನೆ ರೂಪಿಸಬೇಕು. ಊರಿನಲ್ಲಿರುವ ಗೋಮಾಳ ಪ್ರದೇಶಗಳನ್ನು ರಕ್ಷಿಸುವ ಯೋಜನೆಗಳನ್ನು ಕಂದಾಯ ಹಾಗೂ ಅರಣ್ಯ ಇಲಾಖೆಗಳು ಜಂಟಿಯಾಗಿ ಕೈಗೊಳ್ಳಬೇಕು. ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಜೀವವೈವಿಧ್ಯ ಕಾನೂನು ಅನ್ವಯ ಈಗಾಗಲೇ ರಚಿಸಲಾಗಿರುವ ಜೀವವೈವಿಧ್ಯ ನಿರ್ವಹಣಾ ಸಮಿತಿಗಳ ಆಶ್ರಯದಲ್ಲಿ ಹಾಗೂ ಗ್ರಾಮ ಅರಣ್ಯ ಸಮಿತಿಗಳ ಜನಸಹಭಾಗಿತ್ವದಲ್ಲಿ ಸಾಮೂಹಿಕ ಭೂಮಿ ಸಂರಕ್ಷಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT