ರಾಜ್ಯದಲ್ಲೇ ಪ್ರಥಮ; ಮುಖ್ಯಮಂತ್ರಿಗಳಿಂದ ಮೇಕ್ ಶಿಫ್ಟ್ ಆಸ್ಪತ್ರೆ ಉದ್ಘಾಟನೆ

ದೊಡ್ಡಬಳ್ಳಾಪುರ: ಕೊರೊನಾ ತುರ್ತು ಚಿಕಿತ್ಸಾ ಸೌಲಭ್ಯವನ್ನು ಒದಗಿಸುವ ಸಲುವಾಗಿ ನಗರದ ತಾಯಿ, ಮಗು ಸರ್ಕಾರಿ ಆಸ್ಪತ್ರೆ ಸಮೀಪದಲ್ಲೇ ನಿರ್ಮಿಸಲಾಗಿರುವ 70 ಹಾಸಿಗೆಗಳ ಮೇಕ್ ಶಿಫ್ಟ್ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಉದ್ಘಾಟಿಸುವ ಮೂಲಕ ಸಾರ್ವಜನಿಕರ ಸೇವೆಗೆ ಸಮರ್ಪಿಸಿದರು. ರಾಜ್ಯದಲ್ಲೇ ಪ್ರಥಮ ಆಸ್ಪತ್ರೆ ಇದಾಗಿದೆ.
'ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅನ್ ಲಾಕ್ ನಂತರ ಸಾರ್ವಜನಿಕರು ಎಚ್ಚರವಹಿಸದಿದ್ದರೆ ಮತ್ತೆ ಲಾಕ್ ಡೌನ್ ಜಾರಿ ಅನಿವಾರ್ಯ ವಾಗಲಿದೆ. ಕೋವಿಡ್ ಮೂರನೇ ಅಲೆ ಎದುರಿಸಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯಗಳನ್ನು ಸಜ್ಜುಗೊಳಿಸಿಕೊಂಡಿದೆ. ದೇಶದ ಆರು ರಾಜ್ಯಗಳಿಗೆ ಮೇಕ್ ಶಿಫ್ಟ್ ಆಸ್ಪತ್ರೆಗಳು ಮಂಜೂರಾಗಿವೆ. ಆದರೆ ಪ್ರಥಮ ಬಾರಿಗೆ ದೊಡ್ಡಬಳ್ಳಾಪುರದಲ್ಲಿ ನಿರ್ಮಾಣ ಕಾರ್ಯ ಮುಕ್ತಾಯವಾಗಿ ಸಾರ್ವಜನಿಕ ಸೇವೆಗೆ ಲಭ್ಯವಾಗಿದೆ' ಎಂದರು
ಕಂದಾಯ ಸಚಿವ ಆರ್.ಅಶೋಕ ಮಾನತಾಡಿ, 'ಮೂರನೇ ಅಲೆಯಲ್ಲಿ ಮಕ್ಕಳ ಆರೋಗ್ಯ ತಾಪಸಣೆಗೆ ವಿವಿಧ ವಿಭಾಗದ ವೈದ್ಯರಿಗೆ ತರಬೇತಿ ನೀಡಲು ಬೆಂಗಳೂರಿನ ನಿಮಾನ್ಸ್ ನಲ್ಲಿ ತರಬೇತಿ ಕೇಂದ್ರವನ್ನು ಆರಂಭಿಸಲಾಗಿದೆ. ಲೆನೆವೊ, ಗೋಲ್ಡ್ ಮ್ಯಾನ್ ಸ್ಯಾಚಸ್, ಕಂಪನಿಗಳು ತಮ್ಮ ಸಿ.ಎಸ್.ಆರ್ ನಿಧಿಯಡಿ ಒದಗಿಸಿರುವ ಅನುದಾನದಲ್ಲಿ ಮಾಡ್ಯುಲಸ್ ಸಂಸ್ಥೆಯವರು ಸಿದ್ಧಪಡಿಸಿರುವ ವಿನ್ಯಾಸದಂತೆ ಅಂದಾಜು ₹4 ಕೋಟಿ ವೆಚ್ಚದಲ್ಲಿ ಈ ಆಸ್ಪತ್ರೆ ನಿರ್ಮಾಣಗೊಂಡಿದೆ. ಈ ಆಸ್ಪತ್ರೆಯ ಲೇಔಟ್ ನಿರ್ಮಾಣ ಕಾಮಗಾರಿಯನ್ನು ದೊಡ್ಡಬಳ್ಳಾಪುರದ ಇಂಡೋ ಎಂಐಎಂ ಪ್ರೈವೇಟ್ ಲಿಮಿಟೆಡ್ ನಿರ್ವಹಿಸಿದೆ' ಎಂದರು.
ಈ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ,ಭಾರತ ಸರ್ಕಾರ, ಅಮೆರಿಕನ್ ಇಂಡಿಯಾ ಫೌಂಡೇಶನ್ ಮತ್ತು ಯು.ಎನ್.ಡಿ.ಪಿ ಸಂಸ್ಥೆಗಳು ನಿರ್ವಹಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.