ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಶಾಸಕರೊಂದಿಗೆ ಸಿಎಂ ಸಭೆ; ಸಚಿವರ ವಿರುದ್ಧ ಅಸಹನೆ

ಮುಖ್ಯಮಂತ್ರಿ ಯಡಿಯೂರಪ್ಪ ಎದುರೇ ಸಚಿವರು, ಉಸ್ತುವಾರಿ ಸಚಿವರ ವಿರುದ್ಧ ಸಿಟ್ಟು
Last Updated 4 ಜನವರಿ 2021, 20:32 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮದೇ ಸರ್ಕಾರ ಇದ್ದರೂ ನಮ್ಮ ಕ್ಷೇತ್ರಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ವಿಶೇಷವಾಗಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರವಲ್ಲ ಜಿಲ್ಲಾಧಿಕಾರಿಗಳೂ ನಮಗೆ ಸ್ಪಂದಿಸುತ್ತಿಲ್ಲ. . .’

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಈ ರೀತಿ ಆಕ್ರೋಶ ಹೊರಹಾಕಿದ್ದು ಬಿಜೆಪಿ ಶಾಸಕರು. ಹಲವು ದಿನಗಳಿಂದ ಮಡುಗಟ್ಟಿದ್ದ ಅಸಮಾಧಾನ ಸೋಮವಾರ ನಡೆದ ಸಭೆಯಲ್ಲಿ ಸ್ಫೋಟಗೊಂಡಿತು.

ಬಜೆಟ್‌ ತಯಾರಿ ಸಭೆಗಳಿಗೂ ಮುನ್ನ ಪಕ್ಷದ ಶಾಸಕರ ಸಭೆ ನಡೆಸಿದ ಮುಖ್ಯಮಂತ್ರಿ, ಎಲ್ಲ ಶಾಸಕರಿಗೂ ಮಾತನಾಡಲು ಅವಕಾಶ ನೀಡಿದರು. ಬಹುತೇಕ ಶಾಸಕರು ಸಚಿವರ ಕಾರ್ಯವೈಖರಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ವಿಶೇಷವಾಗಿ ನೀರಾವರಿ, ಗ್ರಾಮೀಣಾಭಿವೃದ್ಧಿ, ಕಂದಾಯ, ಲೋಕೋಪಯೋಗಿ ಇಲಾಖೆಗಳಿಗೆ ಸಂಬಂಧಿಸಿದ ಕೆಲಸ ಆಗುತ್ತಿಲ್ಲ ಎಂದು ಸಿಡಿಮಿಡಿಗೊಂಡರು.

‘ನಮ್ಮ ಸರ್ಕಾರ ಇರುವುದರಿಂದ ನಮ್ಮ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನಮತ್ತು ಕಾರ್ಯಕ್ರಮಗಳನ್ನು ಬಯಸುವುದು ಸಹಜ. ಹಿಂದೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅವಧಿಯಲ್ಲಿ ನಮ್ಮ ಕ್ಷೇತ್ರಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದವು. ಅದೇ ಪರಿಸ್ಥಿತಿ ಈಗಲೂ ಮುಂದುವರಿದಿದೆ. ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕೈಗೆ ಸಿಗುತ್ತಿಲ್ಲ. ಕೆಡಿಪಿ ಸಭೆಗಳಿಗೂ ನಮ್ಮನ್ನು ಆಹ್ವಾನಿಸುತ್ತಿಲ್ಲ. ನಾವು ಕೇಳುವ ಅಧಿಕಾರಿಗಳನ್ನು ಹಾಕುತ್ತಿಲ್ಲ’ ಎಂದೂ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದ ಮುಖ್ಯ ಸಚೇತಕ ಸುನಿಲ್‌ ಕುಮಾರ್‌ ಮಾತನಾಡಿ, ‘ಈ ಕಾರಣಕ್ಕಾಗಿಯೇ ಹಿಂದೆ ಪಕ್ಷದ ಅಧ್ಯಕ್ಷರಿಗೆ ಪತ್ರ ಬರೆದಿದ್ದೆ. ನಮ್ಮ ಯಾವುದೇ ಕೆಲಸ ನಡೆಯುತ್ತಿಲ್ಲ. ಇದು ನನ್ನ ಒಬ್ಬನ ಅಭಿಪ್ರಾಯವಲ್ಲ. ಬಹುತೇಕ ಎಲ್ಲ ಶಾಸಕರ ನೋವು ಇದೇ ಆಗಿದೆ. ಶಿಸ್ತಿನ ಹೆಸರಿನಲ್ಲಿ ಕರಾವಳಿ ಪ್ರದೇಶವನ್ನು ನಿರ್ಲಕ್ಷಿಸಬೇಡಿ. ನಾವು ಯಾವತ್ತೂ ಇರಿಸು ಮುರಿಸು ಮಾಡಿಲ್ಲ. ಹಾಗೆಂದು ಏನೂ ಕೊಡದೇ ಇರೋದು ಸರಿಯಲ್ಲ. ಅನುದಾನ ಕೇಳಲ್ಲ, ನಮ್ಮ ಭಾಗದ ಡೀಮ್ಡ್‌ ಫಾರೆಸ್ಟ್‌, ಪ್ರತ್ಯೇಕ ಮರಳು ನೀತಿ, ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರಿಪಡಿಸಿ’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಎಲ್ಲ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೂ ಈ ಸಂಬಂಧ ಸೂಚನೆ ನೀಡುತ್ತೇನೆ. ಒಂದು ವೇಳೆ ಅವರಿಂದ ಸ್ಪಂದನೆ ಸಿಗದಿದ್ದರೆ ನನ್ನ ಬಳಿಬನ್ನಿ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

‘ಕೋವಿಡ್‌ ಸಂದರ್ಭದಲ್ಲಿ ಸರ್ಕಾರ ಎದುರಿಸಿದ ಆರ್ಥಿಕ ಸಂಕಷ್ಟ ಏನು ಎಂಬುದು ನಿಮಗೆಲ್ಲ ಗೊತ್ತಿರುವಂತಹದ್ದೇ. ರೈತರು, ಕಾರ್ಮಿಕರಿಗೆ ಪ್ಯಾಕೇಜ್‌ ನೀಡಲಾಯಿತು. ಬರುವ ಬಜೆಟ್‌ನಲ್ಲೂ ಅಷ್ಟೇ ಬೇಕಾಬಿಟ್ಟಿ ಹಣ ಖರ್ಚು ಮಾಡುವುದಿಲ್ಲ, ಆರೋಗ್ಯ ಕ್ಷೇತ್ರಕ್ಕೆ ಮತ್ತು ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು’ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ, ಮುಂಬೈ ಮತ್ತು ಮಧ್ಯ ಕರ್ನಾಟಕ ಹಾಗೂ ಕರಾವಳಿ ಶಾಸಕರ ಸಭೆ ನಡೆಯಿತು. ಉಳಿದ ಭಾಗಗಳ ಶಾಸಕರ ಸಭೆ ನಾಳೆ ನಡೆಯಲಿದೆ. ಶಾಸಕರ ಸಲಹೆಗಳನ್ನು ಬಜೆಟ್‌ನಲ್ಲಿ ಅಳವಡಿಸಲು ಬಜೆಟ್‌ಗೂ ಮುನ್ನ ಮತ್ತೊಮ್ಮೆ ಶಾಸಕರ ಸಭೆ ಕರೆಯುವುದಾಗಿ ಬಿಎಸ್‌ವೈ ಭರವಸೆ ನೀಡಿದ್ದಾರೆ.

ವಿಜಯೇಂದ್ರ ವಿರುದ್ಧ ಸಿಡಿದ ಯತ್ನಾಳ

‘ನಮ್ಮ ಕ್ಷೇತ್ರಗಳಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ. ನಾನು ಶಾಸಕ, ನಾನು ನಿಮ್ಮ ಬಳಿ ಮಾತನಾಡಬೇಕೇ ಹೊರತು, ನಿಮ್ಮ ಮಗನ(ವಿಜಯೇಂದ್ರ) ಬಳಿ ಏಕೆ ಮಾತನಾಡಬೇಕು’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದರು.

ಸಭೆಯಲ್ಲಿ ಮಾತನಾಡಿದ ಅವರು,‘ ಎಲ್ಲ ವಿಚಾರಗಳಿಗೂ, ನಿಮ್ಮ ಮಗನ ಮಾತೇ ಅಂತಿಮವಾಗುವುದಾದರೆ, ಹಲವು ದಶಕಗಳಿಂದ ದುಡಿದ ಕಾರ್ಯಕರ್ತರ ಪಾಡೇನು? ಎಲ್ಲದಕ್ಕೂ ನೀವು ತಲೆದೂಗಬೇಡಿ, ಮಗನ ಹಸ್ತಕ್ಷೇಪ ಕಡಿಮೆ ಮಾಡಿ’ ಎಂದು ಯತ್ನಾಳ ಖಡಕ್ ಆಗಿ ಹೇಳಿದರು.

‘ಆಡಳಿತ ಪಕ್ಷದ ಶಾಸಕರಾಗಿ ನಾವು ಅನುದಾನಕ್ಕಾಗಿ ಅಲೆದಾಡುವಂತಾಗಿದೆ. ಪ್ರತಿಪಕ್ಷದವರು ನಮ್ಮ ಪಾಡು ನೋಡಿ ನಗುತ್ತಿದ್ದಾರೆ. ಉತ್ತರ ಕರ್ನಾಟಕ್ಕೆ ತಾರತಮ್ಯ ಆಗುತ್ತಿದೆ’ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ನಿಮ್ಮ ಯಾವುದೇ ಸಮಸ್ಯೆ ಹೇಳಿಕೊಳ್ಳಲು ಕೃಷ್ಣಾ, ಕಾವೇರಿಯಲ್ಲಿ ಮುಕ್ತ ಪ್ರವೇಶವಿದೆ. ನನ್ನ ಬಳಿಯೇ ಬಂದು ಮಾತನಾಡಿ. ಅದನ್ನು ಬಿಟ್ಟು ಬೆಂಗಳೂರಿನಲ್ಲೊಂದು ವಿಜಯಪುರದಲ್ಲೊಂದು ಹೇಳಿಕೆ ನೀಡುವುದು ಸರಿಯಲ್ಲ. ಇದರಿಂದ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಹಾನಿ ಆಗುತ್ತದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ, ‘ಹಾನಿ ಯಾರಿಂದ ಆಗುತ್ತದೆ ಎಂಬುದು ಎಲ್ಲರಿಗೂ ಗೊತ್ತು. ನಮ್ಮ ಬಾಯಿ ಮುಚ್ಚಿಸುವುದು ಬೇಡ. ನಮ್ಮ ಅಭಿಪ್ರಾಯ ಹೇಳಿಕೊಳ್ಳಲು ಇದೊಂದೇ ವೇದಿಕೆ. ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದಾಗ, ಪ್ರತಿ ಮಂಗಳವಾರವೂ ಸಭೆ ಮಾಡಿ ನಮ್ಮ ಜತೆ ಮಾತನಾಡುತ್ತಿದ್ದರು’ ಎಂದು ಹೇಳಿದರು.

ಹಿರಿಯ ಶಾಸಕ ಉಮೇಶ ಕತ್ತಿ ಅವರೂ ಯತ್ನಾಳ ಅಭಿಪ್ರಾಯಕ್ಕೆ ಧ್ವನಿಗೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT