ಸೋಮವಾರ, ಸೆಪ್ಟೆಂಬರ್ 28, 2020
22 °C

ಆಸ್ಪತ್ರೆಯಿಂದಲೇ ಮುಖ್ಯಮಂತ್ರಿ ಬಿಎಸ್‌ವೈ ನಿಗಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ

ಬೆಂಗಳೂರು: ಕಾವೇರಿ ಕೊಳ್ಳ, ಕರಾವಳಿ, ಮಲೆನಾಡು ಸೇರಿ ದಂತೆ ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಉಂಟಾಗಿರುವ ಭೂ ಕುಸಿತ, ಪ್ರವಾಹ ಪರಿಸ್ಥಿತಿ ಹಾಗೂ ಹಾನಿ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಣಿಪಾಲ ಆಸ್ಪತ್ರೆಯಿಂದಲೇ ಮಾಹಿತಿ ಪಡೆದು ನಿಗಾ ವಹಿಸಿದ್ದಾರೆ.

ಈ ಮಧ್ಯೆ, ಪ್ರವಾಹಪೀಡಿತ ಪ್ರದೇಶಗಳ ವೀಕ್ಷಣೆಗೆ ಇದೇ 20ರಂದು ತೆರಳಲು ಮುಖ್ಯಮಂತ್ರಿ ಅವರು ನಿರ್ಧರಿಸಿದ್ದಾರೆ.

‘ಸದ್ಯ ಸಿ.ಎಂ ಆರೋಗ್ಯ ಸ್ಥಿರವಾಗಿದೆ. ಇನ್ನಷ್ಟು ದಿನ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸುವ ಸಾಧ್ಯತೆ ಇದೆ. ಆದರೆ, ಪ್ರವಾಹ ಪರಿಸ್ಥಿತಿ ಕಂಡು ವಿಚಲಿತರಾಗಿರುವ ಯಡಿಯೂರಪ್ಪ, ಆ ಪ್ರದೇಶಗಳಿಗೆ ತೆರಳಲು ಮುಂದಾಗಿದ್ದಾರೆ ಎಂದು ಮುಖ್ಯಮಂತ್ರಿ ಸಚಿವಾಲಯ ಮೂಲ ಗಳು ತಿಳಿಸಿವೆ.

ಶನಿವಾರ ಬೆಳಿಗ್ಗೆ ಕೊಡಗು ಜಿಲ್ಲಾಧಿಕಾರಿಗೆ ಕರೆ ಮಾಡಿ ಮಾತನಾಡಿದ ಮುಖ್ಯಮಂತ್ರಿ, ಭೂಕುಸಿತ, ರಕ್ಷಣಾ ಕಾರ್ಯದ ಬಗ್ಗೆ ಮಾಹಿತಿ ಪಡೆದು ಕೊಂಡರು. ಪ್ರವಾಹದಿಂದಾಗಿ ಬೆಳಗಾವಿಯಲ್ಲಿ ಉಂಟಾಗಿರುವ ಪರಿಸ್ಥಿತಿ ಬಗ್ಗೆಯೂ ಅಲ್ಲಿನ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಂದ ಮಾಹಿತಿ ಪಡೆದರು.

‍ಪ್ರವಾಹಪೀಡಿತ ಜಿಲ್ಲೆಗಳ ಉಸ್ತುವಾರಿ ಸಚಿವರಿಗೆ ಕರೆ ಮಾಡಿ ಚರ್ಚೆ ನಡೆಸಿರುವ ಮುಖ್ಯಮಂತ್ರಿ, ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಸಂತ್ರಸ್ತರ ಸ್ಥಳಾಂತರ, ತಕ್ಷಣದ ಪರಿಹಾರ ಕ್ರಮಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳುವಂತೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಮುಖ್ಯಮಂತ್ರಿಗೆ ವಾಸ್ತವ ಸ್ಥಿತಿ ವಿವರಿಸಿರುವ ಸಚಿವರು, ‘ನೀವು ವಿಶ್ರಾಂತಿ ತೆಗೆದುಕೊಳ್ಳಿ. ಪರಿಸ್ಥಿತಿಯನ್ನು ನಾವು ನಿಭಾಯಿಸುತ್ತೇವೆ’ ಎಂದು ಭರವಸೆ ನೀಡಿದ್ದಾರೆ ಎಂದೂ ಗೊತ್ತಾಗಿದೆ.

ಸಂಕಷ್ಟಕ್ಕೆ ಸಿಲುಕಿರುವವರ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರಿಗೆ ಯಡಿಯೂರಪ್ಪ ಈಗಾಗಲೇ ಪೂರ್ಣ ಅಧಿಕಾರ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಂವಾದ 

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅನುಪಸ್ಥಿತಿಯಲ್ಲಿ ರಾಜ್ಯದ ಪ್ರವಾಹ ಪರಿಸ್ಥಿತಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಕಂದಾಯ ಸಚಿವ ಆರ್. ಅಶೋಕ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೋಮವಾರ ಬೆಳಿಗ್ಗೆ 11 ಗಂಟೆಗೆ ವಿಡಿಯೊ ಸಂವಾದ ನಡೆಸಲಿದ್ದಾರೆ.

ಈ ವೇಳೆ, ಮಳೆ ಮತ್ತು ಪ್ರವಾಹದಿಂದ ಉಂಟಾಗಿರುವ ವಸ್ತುಸ್ಥಿತಿಯನ್ನು ಪ್ರಧಾನಿಗೆ ವಿವರಿಸಲಿರುವ ಉಭಯ ಸಚಿವರು, ಕೇಂದ್ರದಿಂದ ಮುಂಗಡ ಪರಿಹಾರ ಧನ ಬಿಡುಗಡೆ ಮಾಡುವಂತೆ ಮನವಿ ಮಾಡುವ ಸಾಧ್ಯತೆ ಇದೆ.

ತುರ್ತುಕ್ರಮಕ್ಕೆ ಅಶೋಕ ಸೂಚನೆ: ಪ್ರವಾಹ ಪೀಡಿತ ಪ್ರದೇಶಗಳಿಗೆ ಅಶೋಕ ಅವರು ಭೇಟಿ ನೀಡಿ ಪರಿಶೀಲಿಸಿದ್ದು, ತುರ್ತು ಪರಿಹಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಹಾವೇರಿ ಜಿಲ್ಲೆಯಲ್ಲಿ ಮಳೆ ಪರಿಸ್ಥಿತಿ ವೀಕ್ಷಿಸಿದ್ದಾರೆ.

ಇಬ್ಬರೂ ಸಚಿವರು ಭಾನುವಾರ ಸಂಜೆ ಸಭೆ ಸೇರಿ, ಪ್ರಧಾನಿ ಎದುರು ಮಂಡಿಸ ಬೇಕಾದ ವಿಷಯಗಳ ಕುರಿತು ಚರ್ಚಿಸುವರು. ಎಲ್ಲ ಜಿಲ್ಲೆಗಳಿಂದ ವರದಿ ತರಿಸಿಕೊಂಡು, ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚಿಸುವರು. ಕೇಂದ್ರ ದಿಂದ ತಕ್ಷಣಕ್ಕೆ ಎಷ್ಟು ಮೊತ್ತದ ನೆರವಿಗೆ ಮನವಿ ಮಾಡಬೇಕೆಂಬ ಬಗ್ಗೆ ತೀರ್ಮಾನಿಸುವರು ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿನ ಕೋವಿಡ್‌ ಸ್ಥಿತಿಯ ಬಗ್ಗೆ ಪ್ರಧಾನಿ ಮೋದಿ ಅವರು ಮಂಗಳವಾರ ವಿಡಿಯೊ ಸಂವಾದ ನಡೆಸುವ ಸಾಧ್ಯತೆ ಇದೆ. ಈ ಬಗ್ಗೆಯೂ ಮಾಹಿತಿ ಇದೆ. ಆದರೆ, ಇನ್ನೂ ಖಚಿತಪಟ್ಟಿಲ್ಲ ಎಂದೂ ಮೂಲಗಳು ಹೇಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು