ಬೆಂಗಳೂರು: ‘ಉನ್ನತ ಶಿಕ್ಷಣದ ಬಲವರ್ಧನೆಗೆ ವಿಶ್ವದ ಇತರೆ ವಿಶ್ವವಿದ್ಯಾಲಯಗಳ ಸಹಭಾಗಿತ್ವ ಅನಿವಾರ್ಯ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರಾಜ್ಯದಲ್ಲಿ ಹೊಸದಾಗಿ ಆರಂಭ ವಾದ ಒಂಬತ್ತು ವಿಶ್ವವಿದ್ಯಾಲಯಗಳನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ರಾಜ್ಯ ಸರ್ಕಾರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿದೆ. ವಿಶ್ವವಿದ್ಯಾಲಯಗಳ ಸ್ಥಾಪನೆ ದೇಶಕ್ಕೇ ಮಾದರಿಯಾಗಿದೆ. ಎಲ್ಲರೂ ಕರ್ನಾಟಕದ ಮಾದರಿ ಅಳವಡಿಸಿಕೊಳ್ಳುವಂತೆ ಅವುಗಳ ಪ್ರಗತಿಯಾಗಬೇಕು‘ ಎಂದರು
‘ಕರ್ನಾಟಕದ ಮಕ್ಕಳಿಗೂ ಐಐಟಿ ಶಿಕ್ಷಣ ದೊರಕಿಸಲು ಎಲ್ಲ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನೂ ಐಐಟಿ ಮಾದರಿಯಲ್ಲೇ ಅಭಿವೃದ್ಧಿಪಡಿಸಲಾಗುವುದು. ಅದಕ್ಕಾಗಿ ಜಗತ್ತಿನ ಉನ್ನತ ವಿಶ್ವವಿದ್ಯಾಲಯಗಳ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ’ ಎಂದರು.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ‘ನಾಲ್ಕು ವರ್ಷಗಳಲ್ಲಿ 25 ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ಡಿಜಿಟಲೀಕರಣದ ಮೂಲಕ ಆಮೂಲಾಗ್ರ ಬದಲಾವಣೆ ಮಾಡಲಾಗುತ್ತಿದೆ. ಇದರ ಫಲವಾಗಿ 310 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಮೊದಲ ಬಾರಿಗೆ ನ್ಯಾಕ್ ಮಾನ್ಯತೆ ಪಡೆದುಕೊಂಡಿವೆ’ ಎಂದರು.
ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ವೈ.ಎಸ್. ಸಿದ್ದೇಗೌಡ, ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.