ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯಾ ಹಂತದಲ್ಲೇ ಟೆಂಡರ್‌: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ

Last Updated 13 ಮೇ 2022, 21:45 IST
ಅಕ್ಷರ ಗಾತ್ರ

ಬೆಂಗಳೂರು: ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ನಡೆಯುವ ಕಾಮಗಾರಿಗಳಿಗೆ ಆಯಾ ಹಂತದಲ್ಲೇ ಟೆಂಡರ್‌ ಪ್ರಕ್ರಿಯೆ ನಡೆಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಅವರಿಗೆ ಸೂಚಿಸಿದ್ದಾರೆ.

ವಿವಿಧ ಇಲಾಖೆಗಳ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ, ಬಿಲ್‌ ಪಾವತಿಯಲ್ಲಿ ಭ್ರಷ್ಟಾಚಾರ, ಬಿಲ್‌ ಬಾಕಿ ಮತ್ತಿತರ ವಿಷಯಗಳ ಕುರಿತು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ನೇತೃತ್ವದ ನಿಯೋಗದೊಂದಿಗೆ ಮುಖ್ಯಮಂತ್ರಿ ಏಪ್ರಿಲ್‌ 25ರಂದು ಸಭೆ ನಡೆಸಿದ್ದರು. ಆ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಆಧರಿಸಿ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌, ಮುಖ್ಯ ಕಾರ್ಯದರ್ಶಿಯವರಿಗೆ ಏಪ್ರಿಲ್‌ 29ರಂದು ಟಿಪ್ಪಣಿ ಕಳುಹಿಸಿದ್ದಾರೆ.

ಪ್ಯಾಕೇಜ್‌ ಟೆಂಡರ್‌ಗಳ ಗರಿಷ್ಠ ಮೊತ್ತವನ್ನು ₹1 ಕೋಟಿಗೆ ಸೀಮಿತಗೊಳಿಸಬೇಕು. ಗುತ್ತಿಗೆದಾರರು ಸ್ವಂತ ಯಂತ್ರೋಪಕರಣ ಹೊಂದಿರಬೇಕು ಎಂಬ ಷರತ್ತನ್ನು ₹3 ಕೋಟಿಗಿಂತ ಹೆಚ್ಚು ಮೊತ್ತದ ಕಾಮಗಾರಿಗಳಿಗೆ ಮಾತ್ರ ವಿಧಿಸುವ ಕುರಿತು ನಿಯಮಾವಳಿ ಪರಿಶೀಲಿಸಿ, ಕ್ರಮ ಕೈಗೊಳ್ಳಬೇಕು. ಜ್ಯೇಷ್ಠತೆ ಆಧಾರದಲ್ಲಿ ಬಿಲ್‌ ಪಾವತಿಸಬೇಕು. ಎಲ್ಲ ಕಾಮಗಾರಿಗಳಿಗೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಟಿಪಿ) ಕಾಯ್ದೆಯ ಅಡಿಯಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸಿ, ಅತಿಕಡಿಮೆ ದರ ನಮೂದಿಸಿದ (ಎಲ್‌–1) ಬಿಡ್‌ದಾರರಿಗೆ ಗುತ್ತಿಗೆ ನೀಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಸೂಚಿಸಲಾಗಿದೆ.

ಎಲ್‌–1 ಬಿಡ್‌ದಾರರನ್ನು ಕೈಬಿಟ್ಟು ಎಲ್‌–2 ಬಿಡ್‌ದಾರರಿಗೆ ಗುತ್ತಿಗೆ ನೀಡುವುದಾದರೆ ಸೂಕ್ತ ಸಮರ್ಥನೆಗಳೊಂದಿಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಒಪ್ಪಿಗೆ ಪಡೆಯುವ ವ್ಯವಸ್ಥೆ ಮಾಡಬೇಕು. ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಮತ್ತು ಜ್ಯೇಷ್ಠತೆ ಆಧಾರದಲ್ಲಿ ಬಿಲ್‌ ಪಾವತಿಗೆ ಹೊಸ ತಂತ್ರಾಂಶವೊಂದನ್ನು ಅಭಿವೃದ್ಧಿಪಡಿಸಬೇಕು ಎಂದು ಟಿಪ್ಪಣಿಯಲ್ಲಿ ಸೂಚನೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT