ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಯೋಜನೆ ಜ.26ರಿಂದ ಮನೆ ಬಾಗಿಲಿಗೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಗ್ರಾಮ ವಾಸ್ತವ್ಯಕ್ಕೆ ಚಾಲನೆ
Last Updated 16 ಅಕ್ಟೋಬರ್ 2021, 20:37 IST
ಅಕ್ಷರ ಗಾತ್ರ

ದಾವಣಗೆರೆ: ಸರ್ಕಾರ ವಿಧಾನಸೌಧ ದಲ್ಲಿ ಇರುವುದಲ್ಲ, ಜನರ ಬಳಿಗೇ ಬರಬೇಕು. ಅದಕ್ಕಾಗಿ ಸರ್ಕಾರದ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ಒಯ್ಯುವ ‘ಜನಸೇವಕ’ ಕಾರ್ಯಕ್ರಮವನ್ನು ಮುಂದಿನ ಜನವರಿ 26ರಿಂದ ರಾಜ್ಯದಾದ್ಯಂತ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ನ್ಯಾಮತಿ ತಾಲ್ಲೂಕಿನ ಸುರಹೊನ್ನೆ ಮತ್ತು ಹೊನ್ನಾಳಿ ತಾಲ್ಲೂಕಿನ ಕುಂದೂರಿನಲ್ಲಿ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’
ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

‘ನಿಮ್ಮ ರೇಷನ್‌ ನಿಮ್ಮ ಮನೆ ಬಾಗಿಲಿಗೆ ತಲುಪಬೇಕು. ನೀವು ರೇಷನ್‌ ಹುಡುಕಿಕೊಂಡು ಹೋಗಬಾರದು. ಸಾಮಾಜಿಕ ಭದ್ರತೆಯ ಯೋಜನೆಗಳು, ಆರೋಗ್ಯ ತಪಾಸಣೆ ಹೀಗೆ ಎಲ್ಲವೂ ನಿಮ್ಮ ಮನೆಯಲ್ಲೇ ಆಗಬೇಕು. ಜಿಲ್ಲಾಧಿಕಾರಿ, ತಹಶೀಲ್ದಾರ್‌ರಿಂದ ಹಿಡಿದು ಎಲ್ಲರೂ ನಿಮ್ಮಲ್ಲಿಗೆ ಬರಬೇಕು’ ಎಂದು ಹೇಳಿದರು.

‘ಆದಾಯ ಪ್ರಮಾಣಪತ್ರದಿಂದ ಹಿಡಿದು ಎಲ್ಲ ಪ್ರಮಾಣಪತ್ರಗಳು ಗ್ರಾಮ ಪಂಚಾಯಿತಿಯಲ್ಲಿಯೇ ಸಿಗಬೇಕು ಎಂಬುದು ಇದರ ಉದ್ದೇಶ’ ಎಂದು ವಿವರಿಸಿದರು.

ನವೆಂಬರ್‌ 1ರಂದು ಜನಸೇವಕ ಕಾರ್ಯಕ್ರಮಗಳನ್ನು ಪ್ರಾಯೋಗಿಕವಾಗಿ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಜಾರಿ ಮಾಡಲಾಗುವುದು. ಜ.26ರಿಂದ ಇದನ್ನು ರಾಜ್ಯಕ್ಕೆ ವಿಸ್ತರಿಸಲಾಗುವುದು ಎಂದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕಂದಾಯ ಸಚಿವ ಆರ್‌. ಅಶೋಕ ಅವರು ಕುಂದೂರಿನಲ್ಲಿಯೇ ರಾತ್ರಿ ಗ್ರಾಮ ವಾಸ್ತವ್ಯ ಹೂಡಿದರು. ಅವರಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ವಿಜಯ ಮಹಾಂತೇಶ್‌ ದಾನಮ್ಮನವರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಸಹಿತ ವಿವಿಧ ಅಧಿಕಾರಿಗಳು ಸಾಥ್‌ ನೀಡಿದರು.

ಮುಖ್ಯಮಂತ್ರಿ ಹುದ್ದೆ ಚರ್ಚೆ:

ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ನಡೆಯಲಿದೆ ಎಂದು ಆರಂಭದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಏಕನಾಯಕತ್ವದ ಬಗ್ಗೆ ಮಾತನಾಡಿದರು. ಬಳಿಕ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಅದನ್ನು ಮುಂದುವರಿಸಿದರು. ‘ರಾಜ್ಯಕ್ಕೆ ಬಯಸದೇ ಬಂದ ಭಾಗ್ಯ ಬಸವರಾಜ ಬೊಮ್ಮಾಯಿ. ಅವರಿಗೆ ನಮ್ಮ ಪೂರ್ಣ ಬೆಂಬಲ ಇದೆ. ಮುಂದಿನ ಒಂದೂವರೆ ವರ್ಷ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ’ ಎಂದು ತಿಳಿಸಿದರು.

ಕಂದಾಯ ಸಚಿವ ಆರ್. ಅಶೋಕ ಈ ಚರ್ಚೆಯನ್ನು ಇನ್ನಷ್ಟು ಮುಂದಕ್ಕೆ ಒಯ್ದರು. ‘ಮುಂದಿನ ಒಂದೂವರೆ ವರ್ಷ ಮಾತ್ರವಲ್ಲ, ಅದರ ನಂತರದ ಚುನಾವಣೆಯ ಬಳಿಕದ ಸರ್ಕಾರವೂ ಬಸವರಾಜ ಬೊಮ್ಮಾಯಿ ನಾಯಕತ್ವದಲ್ಲಿಯೇ ಇರುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT