ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಮೋಸಗಳ ಪಟ್ಟಿ ಮಾಡಿದರೆ ಆಕಾಶಕ್ಕೆ ಏಣಿಯಾಗುವಷ್ಟಿದೆ: ಕಾಂಗ್ರೆಸ್‌ ಟೀಕೆ

Last Updated 2 ಸೆಪ್ಟೆಂಬರ್ 2022, 11:17 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕರಾವಳಿ ಭಾಗದ ಹಲವು ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದ ಹಿನ್ನೆಲೆ ರಾಜ್ಯಕ್ಕೆ ಆಗಮಿಸಿದ ಬೆನ್ನಲ್ಲೇ ಕಾಂಗ್ರೆಸ್‌ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಚುನಾವಣೆಗೂ ಮೊದಲು ನೀಡಿದ ಭರಪೂರ ಭರವಸೆಗಳು ಏನಾದವು ಪ್ರಧಾನಿಗಳೇ? ಎಂದು ಪ್ರಶ್ನಿಸಿದೆ.

ಮೋದಿ ಮೋಸ, ನಿಮ್ಮ ಹತ್ತಿರ ಉತ್ತರ ಇದೆಯೇ ಎಂಬ ಹ್ಯಾಶ್‌ ಟ್ಯಾಗ್‌ನಲ್ಲಿ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಬೆಂಗಳೂರು ಸೇರಿದಂತೆ 7 ನಗರಗಳನ್ನು ಸ್ಮಾರ್ಟ್ ಸಿಟಿ ಮಾಡುತ್ತೇವೆ, 836 ಕೋಟಿ ಕೊಡುತ್ತೇವೆ ಎಂದಿದ್ದರು. ಈಗ ಸ್ಮಾರ್ಟ್ ಸಿಟಿ ಬಿಡಿ, ಸಿಟಿಯೂ ಇಲ್ಲದ ಹಾಗೆ ಮುಳುಗಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಮೋಸದ ಮಾತುಗಳಿಗೆ ಮೋದಿ ಉತ್ತರಿಸುವ ಸಮಯವಿದು. ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ಕಡಿಮೆ ಆಗಿದೆಯೋ ಇಲ್ಲವೋ? ನಿಮ್ಮ ಜೇಬಿನಲ್ಲಿ ಹಣ ಉಳಿದಿದೆಯೋ ಇಲ್ಲವೋ? ಎಂಬುದನ್ನು ಭಾಷಣದಲ್ಲಿ ಉತ್ತರಸಿ ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಟ್ವೀಟ್‌ ಮೂಲಕ ಕಾಂಗ್ರೆಸ್‌ ಪ್ರಧಾನಿ ಮುಂದಿಟ್ಟಿರುವ ಪ್ರಶ್ನೆಗಳು ಇಲ್ಲಿವೆ:

1. ನರೇಂದ್ರ ಮೋದಿ ಅವರೇ, ನೀವು ಆಡಿದ್ದ ಮಾತುಗಳನ್ನು ಕನ್ನಡಿಗರು ಇನ್ನೂ ಮರೆತಿಲ್ಲ. ಕೌಶಲ್ಯಾಭಿವೃದ್ಧಿ ಮಾಡುತ್ತೇವೆ, ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದಿರಿ. ಆದರೆ ಈಗ ಸರ್ಕಾರಿ ಉದ್ಯೋಗಗಳು ಮಾರಾಟವಾಗುತ್ತಿವೆ, ನಿರುದ್ಯೋಗ ಮುಗಿಲು ಮುಟ್ಟಿದೆ. ನಿಮ್ಮ ಭರವಸೆಗಳು ಮಣ್ಣುಪಾಲಾಗಿದ್ದೇಕೆ ಪ್ರಧಾನಿಗಳೇ?

2. ಮೋದಿ ಮೋಸಗಳ ಪಟ್ಟಿ ಮಾಡಿದರೆ ಆಕಾಶಕ್ಕೆ ಏಣಿಯಾಗುವಷ್ಟಿದೆ. ಗ್ಯಾಸ್ ಸಿಲಿಂಡರ್ ಸಂಪರ್ಕದ ಬಗ್ಗೆ ಟೆಲಿಪ್ರಾಂಪ್ಟರ್ ಓದಿಕೊಂಡು ಭಾಷಣ ಮಾಡಿದ್ದ ಪ್ರಧಾನಿ ನಂತರ ಅಡುಗೆ ಅನಿಲದ ಸಬ್ಸಿಡಿ ನಿಲ್ಲಿಸಿ, ಬೆಲೆ ಏರಿಸಿ ಬಡವರ ಮನೆಯ ಒಲೆಗಳನ್ನು ಆರಿಸಿದರು. ಗ್ಯಾಸ್ ಬೆಲೆ ಏರಿಕೆಯ ಕುರಿತು ಕರ್ನಾಟಕದ ತಾಯಂದಿರ ಪ್ರಶ್ನೆಗೆ ನಿಮ್ಮ ಬಳಿ ಉತ್ತರವಿದೆಯೇ?

3. ಮಹಿಳಾ ಸುರಕ್ಷತೆ, ಅತ್ಯಾಚಾರ ತಡೆಯುವ ಬಗ್ಗೆ ಭರ್ಜರಿ ಭಾಷಣ ಮಾಡಿದ್ದ ಮೋದಿಯವರೇ, ಸಚಿವರೊಬ್ಬರನ್ನು ಅತ್ಯಾಚಾರ ಪ್ರಕರಣದಲ್ಲಿ ರಕ್ಷಿಸಲಾಯ್ತು. ಗೃಹಸಚಿವರು ಅತ್ಯಾಚಾರ ಸಂತ್ರಸ್ತೆಯದ್ದೇ ತಪ್ಪೆಂದಿದ್ದರು. ಬಿಜೆಪಿ ಶಾಸಕರೇ ಮಹಿಳೆಗೆ ಹಲ್ಲೆ ಮಾಡಿದ್ದರು. ಅವರೆಲ್ಲರ ವಿರುದ್ಧ ನಿಮ್ಮ ಕ್ರಮವೇನು?

4. ಮಹಿಳೆಯರಿಗೆ 1% ಬಡ್ಡಿದರದಲ್ಲಿ 2 ಲಕ್ಷದವರೆಗೆ ಸಾಲ ನೀಡಲಾಗುವುದು ಎಂಬುದು ಮತ್ತೊಂದು ಸುಳ್ಳಿನ ಗೋಪುರ. ನರೇಂದ್ರ ಮೋದಿ ಅವರೇ, ಮಹಿಳೆಯರಿಗೆ 1% ಬಡ್ಡಿಯ ಸಾಲ ಭಾಗ್ಯ ಸಿಗುವ ಬದಲಿಗೆ ಗುತ್ತಿಗೆದಾರರಿಗೆ 40% ಕಮಿಷನ್ ಲೂಟಿ ಭಾಗ್ಯ ಸಿಕ್ಕಿದೆ. ಸುಳ್ಳಿನ ಗೋಪುರ ಕಟ್ಟಿ ಮೋಸ ಮಾಡಿದ್ದೇಕೆ?

5. ಸುಕನ್ಯಾ ಸಮೃದ್ಧಿ ಯೋಜನೆಯಿಂದ ಹೆಣ್ಣುಮಕ್ಕಳ ಖಾತೆಯಲ್ಲಿ ಕೋಟಿ ಕೋಟಿ ಹಣ ಎಂಬ ಮಾತುಗಳು ಕಿವಿಗಳಿಗೆ ಎಂತಹಾ ಅದ್ಬುತ ಅನುಭೂತಿ ನೀಡಿದ್ದವು. ನರೇಂದ್ರ ಮೋದಿ ಅವರೇ, ಸುಕನ್ಯಾ ಸಮೃದ್ಧಿಯಾಗಿಲ್ಲ, ಭ್ರಷ್ಟಾಚಾರ ಸಮೃದ್ಧಿಯಾಗಿದೆ.
ಕೋಟಿ ಕೋಟಿ ಹಣ ಹೆಣ್ಣುಮಕ್ಕಳ ಖಾತೆಗೆ ಸೇರಿಲ್ಲ, ಬಿಜೆಪಿಗರ ಜೇಬು ಸೇರಿದೆ. ಇದಕ್ಕೆ ನಿಮ್ಮ ಬಳಿ ಉತ್ತರವಿದೆಯೇ?

6. ನೀವು ನೀಡುವ ಭರವಸೆಗಳೆಲ್ಲವೂ ಸಾವಿರ, ಲಕ್ಷ ಕೋಟಿಗಳ ಲೆಕ್ಕದಲ್ಲೇ ಇರುತ್ತವೆ, ಆದರೆ ಅದ್ಯಾವುದೂ ವಾಸ್ತವವಾಗುವುದಿಲ್ಲ. ಪ್ರಧಾನಿಗಳೇ,
₹10,000 ಕೋಟಿ ನೀಡಿ ಸ್ತ್ರೀ ಉನ್ನತಿ ಫಂಡ್ ಮಾಡುವ ಭರವಸೆ ನೀಡಿದ್ದಿರಿ, ಆದರೆ 40% ಸರ್ಕಾರ ಮಾಡಿದ್ದು 'ಸ್ವಯಂ ಉನ್ನತಿ ಫಂಡ್'. ಸ್ತ್ರೀ ಉನ್ನತಿಕರಣ ಮರೆತುಹೋಗಿದ್ದೇಕೆ?

7. ಮಹಿಳಾ ಕೋ- ಆಪರೇಟಿವ್ ಸೊಸೈಟಿಗಳನ್ನ ಸ್ಥಾಪಿಸಲಾಗುವುದು, ರಾಜ್ಯಾದ್ಯಂತ 'ಸ್ತ್ರೀ ಉನ್ನತಿ ಸ್ಟೋರ್'ಗಳನ್ನು ಸ್ಥಾಪಿಸಲಾಗುವುದು ಎಂದಿದ್ದೀರಿ. ಆದರೆ ರಾಜ್ಯದಲ್ಲಿ ಆಗಿದ್ದೇನು? ಸರ್ಕಾರಿ ಹುದ್ದೆ ಮಾರಾಟ ಸ್ಟೋರ್‌ಗಳನ್ನು ತೆರೆಯಲಾಗಿದೆ. ಕೋ- ಆಪರೇಟಿವ್ ಸಿಸ್ಟಮ್‌ನಲ್ಲಿ ಭ್ರಷ್ಟೋತ್ಸವ ನಡೆಸಲಾಗುತ್ತಿದೆ. ಇದಕ್ಕೆ ನಿಮ್ಮ ಬಳಿ ಉತ್ತರವಿದೆಯೇ?

8. ಡಬಲ್ ಇಂಜಿನ್ ಸರ್ಕಾರ ಬಂದಾಗಿಂದ ಕರ್ನಾಟಕ ಮಲತಾಯಿ ಧೋರಣೆ ಎದುರಿಸುತ್ತಲೇ ಬಂದಿದೆ. ಸಬ್ ಅರ್ಬನ್ ರೈಲು ಯೋಜನೆಗೆ ಅನುದಾನ ಕಡಿತ ಮಾಡಲಾಗಿದೆ. ಜಿಎಸ್‌ಟಿ ಮತ್ತು ನೆರೆ ಪರಿಹಾರ ನಿರಾಕರಣೆ ಮಾಡಲಾಗಿದೆ. ಕೊಡಗಿಗೆ ಕ್ರೀಡಾ ವಿವಿ, ರೈತರಿಗೆ ನೇಗಿಲ ಯೋಗಿ ಯೋಜನೆ ನಿರಾಕರಣೆ ಮಾಡಲಾಗಿದೆ. ಹೀಗೆ ರಾಜ್ಯಕ್ಕೆ ಮಾಡಿರುವ ಅನ್ಯಾಯಗಳ ಪಟ್ಟಿ ಬೆಳೆಯುತ್ತಲೇ ಹೋಗಿದೆ ಏಕೆ?

9. ಕೋಲಿ ಮತ್ತು ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿಯ ಭರವಸೆ ನೀಡಿ ಹೋಗಿದ್ದ ನರೇಂದ್ರ ಮೋದಿ ಅವರೇ, ಚುನಾವಣೆ ಮುಗಿದ ನಂತರ ತಾವಾಡಿದ ಮಾತು ಮರೆತಿದ್ದೇಕೆ? ಇದುವರೆಗೂ ಮೀಸಲಾತಿ ಬಗ್ಗೆ ತುಟಿ ಬಿಚ್ಚದಿರುವುದೇಕೆ? ಪ್ರತಿ ಚುನಾವಣೆಗೂ ಹೊಸ ಹೊಸ ಸುಳ್ಳುಗಳೊಂದಿಗೆ ಬರುವುದು ನಿಮ್ಮ ಖಯಾಲಿಯೇ?

10. ಬೆಂಗಳೂರು - ಮೈಸೂರು ರೈಲನ್ನು ಭಾಷಣದಲ್ಲಿ ಅದ್ಭುತವಾಗಿ ಬಿಟ್ಟಿದ್ದ ನರೇಂದ್ರ ಮೋದಿ ಅವರೇ, ಮೈಸೂರು ಪ್ಯಾರಿಸ್ ಆಗಲಿಲ್ಲ. ಸಬ್ ಅರ್ಬನ್ ರೈಲು ನಿಗದಿತ ಅವಧಿ ಮುಗಿಯುತ್ತಾ ಬಂದರೂ ಓಡಲಿಲ್ಲ ಏಕೆ? ಮೈಸೂರು ಹೆದ್ದಾರಿಯು ಜಲಮಾರ್ಗವಾಗಿದೆ. ರಸ್ತೆ ಗುಂಡಿಗಳು ಪ್ರಾಣ ತೆಗೆಯುತ್ತಿವೆ

11. ರೈತರಿಗೆ ಆಪರೇಷನ್ ಗ್ರೀನ್ ಯೋಜನೆಯಿಂದ ರೈತರ ಆದಾಯ ದುಪ್ಪಟ್ಟಾಗುತ್ತದೆ ಎಂದು ಮೋದಿ ಹೇಳಿದ್ದರು. ಆದರೆ ಮೋದಿ ಮಾಡಿದ್ದು, ಆಪರೇಷನ್ ಕಮಲದ ಸರ್ಕಾರ, ರೈತರ ಸಂಕಷ್ಟ ಡಬಲ್, ಕೃಷಿ ಖರ್ಚು ಡಬಲ್, ಕೃಷಿ ಯಂತ್ರಗಳ ಮೇಲೆ ಜಿಎಸ್‌ಟಿ ಹೊರೆ, ಗೊಬ್ಬರದ ಬೆಲೆ ಡಬಲ್. ಮೋದಿ ಮೋಸಕ್ಕೆ ಎಣೆಯಿಲ್ಲ, ರೈತರಿಗೆ ಬದುಕಿಲ್ಲ ಎಂಬಂತಾಗಿದೆ. ಈ ದ್ರೋಹವೆಸಗಿದ್ದೇಕೆ?

12. ಮೋದಿ ಆಶ್ವಾಸನೆಗಳು ಕೇಳಲು ಕರ್ಣಾನಂದ, ಮೋದಿ ಮಾಡುವ ದ್ರೋಹಗಳಿಂದ ಅಭಿವೃದ್ದಿಯೇ ಮಂದ. ಕರ್ನಾಟಕವನ್ನು ಸಂಪೂರ್ಣ ಅಭಿವೃದ್ಧಿ ಮಾಡುತ್ತೇವೆ ಎಂದಿದ್ದರು. ಆದರೆ ಈಗ ರಾಜ್ಯದಲ್ಲಿ
ವೇಗದ ಭ್ರಷ್ಟಾಚಾರ, ಸಂಪೂರ್ಣ ಭ್ರಷ್ಟಾಚಾರ
ಎನ್ನುವಂತಾಗಿದೆ. ಮೋದಿ ಮೋಸಕ್ಕೆ ರಾಜ್ಯದ ಜನತೆ ಎಂದೂ ಕ್ಷಮಿಸಲಾರರು.

13. 2022ರ ಒಳಗೆ ಮನೆಯಿಲ್ಲದ ಎಲ್ಲಾ ಬಡವರಿಗೆ ಮನೆ ನೀಡುವುದಾಗಿ ಘೋಷಿಸಿದ್ದಿರಿ. ಈಗಲೂ ಕರ್ನಾಟಕದಲ್ಲಿ ಸರಿಸುಮಾರು 18 ಲಕ್ಷ ಕುಟುಂಬಗಳಿಗೆ ಇರಲು ಮನೆಯಿಲ್ಲ. ನಿಮ್ಮ ಶ್ರೀಮಂತ ಸ್ನೇಹಿತರಿಗೆ ಜೇನಿನ ಸವಿ ನೀಡಿದ್ದೀರಿ. ಬಡವರ ಮೂಗಿಗೆ ಮಾತ್ರ ತುಪ್ಪ ಸವರಿದ್ದೀರಿ. ಬಡವರ ಕಾಳಜಿ ಮತ ಗಳಿಕೆಯ ತನಕ‌ ಮಾತ್ರವೇ? ಬಡವರಿಗೇಕೆ ಈ ಮೋಸ?

14. ಬೆಂಗಳೂರಿಗರಿಗೆ 'ಕೆಂಪೇಗೌಡರ' ಬೆಂಗಳೂರನ್ನು ಪುನಃ ಸೃಷ್ಟಿಸಿ ಕೊಡುವುದಾಗಿ 2018ರಲ್ಲಿ ಆಶ್ವಾಸನೆ ನೀಡಿದ್ದೀರಿ. 2022 ರಲ್ಲಿ, ರಸ್ತೆಗಳು ಪುನಃ ನದಿ, ಕೆರೆ, ಹಳ್ಳ ಕೊಳ್ಳಗಳಾಗಿವೆ. ಇದರಲ್ಲಿ ಮೀನುಗಾರಿಕೆ ಮಾಡಬಹುದು, ಬೋಟ್‌ನಲ್ಲಿ ಪ್ರಯಾಣಿಸಬಹುದು. ಇದೇನಾ ಕೆಂಪೇಗೌಡರ ಕನಸಿನ ಬೆಂಗಳೂರು?

15. 2018ರ ಆಶ್ವಾಸನೆಯಲ್ಲಿ ಬೆಂಗಳೂರಿನಂತೆ ರಾಜ್ಯದ ಐದು ನಗರಗಳಲ್ಲಿ ಸ್ಟಾರ್ಟ್ ಅಪ್ ಹಬ್ ನಿರ್ಮಾಣ ಮಾಡುವುದಾಗಿ ಹೇಳಿದ್ದೀರಿ. ಇದರಿಂದ ಯುವಜನತೆಗೆ ಭರಪೂರ ಉದ್ಯೋಗಾವಕಾಶ ಸಿಗಲಿದೆ ಎಂದಿದ್ದೀರಿ. 2022ಕ್ಕೆ ನಿರ್ಮಾಣಗೊಂಡ ಸ್ಟಾರ್ಟ್ ಅಪ್ ಹಬ್ ಸಂಖ್ಯೆ ಸೊನ್ನೆಯಾಗಿದೆ ಏಕೆ?

16. 2018ರಲ್ಲಿ 'ನೇಗಿಲಯೋಗಿ' ಯೋಜನೆ ಪ್ರಸ್ತಾಪ ಮಾಡಿದ್ದೀರಿ. 20 ಲಕ್ಷ ಅತಿ ಸಣ್ಣ ಮತ್ತು ಒಣಭೂಮಿ ಕೃಷಿಕರಿಗೆ ಸಹಾಯಧನದ 'ಭರವಸೆ' ನೀಡಿದ್ದೀರಿ. ಆದರೆ 2022ರಲ್ಲಿ ಈ ಯೋಜನೆಯ ಪ್ರಸ್ತಾಪವೇ ಇಲ್ಲ. ಆರಂಭವೂ ಆಗಿಲ್ಲ ಏಕೆ?

17. 2018ರಲ್ಲಿ ಕೊಡಗಿನ ವೀರ ಕಲಿ 'ಫೀಲ್ಡ್ ಮಾರ್ಷಲ್ ಕಾರ್ಯಪ್ಪ' ಹೆಸರಲ್ಲಿ 'ಕ್ರೀಡಾ ವಿಶ್ವವಿದ್ಯಾಲಯದ' ಸ್ಥಾಪನೆಯ ಆಶ್ವಾಸನೆ ಸಿಕ್ಕಿತ್ತು. ಆದರೆ ಭರವಸೆ ಇಂದಿಗೂ ಕೇವಲ ಭರವಸೆಯಾಗಿಯೇ ಉಳಿದಿದೆ. ಕೊಡಗಿನ ಕ್ರೀಡಾ ಕಲಿಗಳ ಕನಸು ಕನಸಾಗಿಯೇ ಇದೆ.

18. ಮಹಿಳೆಯರ ರಕ್ಷಣೆ ಬಗ್ಗೆ ಬಹಳ ಗೌರವಯುತವಾಗಿ ಮಾತನಾಡಿದ್ದ ನರೇಂದ್ರ ಮೋದಿ ಅವರೇ, ಬಿಲ್ಕಿಸ್ ಬಾನು ಅವರ ಅತ್ಯಾಚಾರಿಗಳನ್ನು ಬಿಡುಗಡೆಗೊಳಿಸಿ, ಸನ್ಮಾನಿಸಿದ್ದು ನಿಮ್ಮದೇ ಸರ್ಕಾರವಲ್ಲವೇ? ಇದೇನಾ ನಿಮ್ಮ ಸ್ತ್ರೀ ಗೌರವ, ಇದೇನಾ ನಿಮ್ಮ ಸಂಸ್ಕೃತಿ?

19. ಕೇವಲ ಆಶ್ವಾಸನೆಗಳಲ್ಲಿ ದೇಶ ಕಳೆದುಹೋಗಿದೆ. ರಾಜ್ಯದಲ್ಲಿ 40% ಕಮಿಷನ್ ಭ್ರಷ್ಟಾಚಾರ ತಾಂಡವವಾಡುತ್ತಿದೆ, ನೇಮಕಾತಿಗಳಲ್ಲಿ ಸಾಲು ಸಾಲು ಅಕ್ರಮ ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT