ಮಂಗಳವಾರ, ಜೂನ್ 22, 2021
27 °C
ಎಫ್‌ಐಆರ್‌ ದಾಖಲಿಸುವಂತೆ ಕಾಂಗ್ರೆಸ್‌ ಮುಖಂಡರ ಆಗ್ರಹ

ತೇಜಸ್ವಿ, ಮೂವರು ಶಾಸಕರ ವಿರುದ್ಧ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಬಿಎಂಪಿ ಕೋವಿಡ್‌ ವಾರ್‌ ರೂಮ್‌ನಲ್ಲಿದ್ದ ಮುಸ್ಲಿಂ ಧರ್ಮೀಯ ಸಿಬ್ಬಂದಿ ಮೇಲೆ ಸುಳ್ಳು ಆರೋಪ ಹೊರಿಸಿ ಮತೀಯ ಸಂಘರ್ಷ ಸೃಷ್ಟಿಸಲು ಯತ್ನಿಸಿದ ಆರೋಪದಡಿ ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕರಾದ ಸತೀಶ್ ರೆಡ್ಡಿ, ಎಲ್‌.ಎ.ರವಿ ಸುಬ್ರಮಣ್ಯ ಮತ್ತು ಉದಯ ಗರುಡಾಚಾರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲು ಒತ್ತಾಯಿಸಿ ಕಾಂಗ್ರೆಸ್‌ ಮುಖಂಡರು ನಗರ ಪೊಲೀಸ್‌ ಕಮಿಷನರ್‌ಗೆ ದೂರು ನೀಡಿದ್ದಾರೆ.

ರಾಜ್ಯಸಭಾ ಸದಸ್ಯ ಡಾ.ನಾಸೀರ್‌ ಹುಸೇನ್‌, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಸಲೀಂ ಅಹ್ಮದ್, ಶಾಸಕರಾದ ಕೃಷ್ಣ ಬೈರೇಗೌಡ, ಜಮೀರ್‌ ಅಹಮ್ಮದ್ ಖಾನ್‌, ಎನ್‌.ಎ. ಹ್ಯಾರಿಸ್‌, ರಿಜ್ವಾನ್‌ ಅರ್ಷದ್‌, ವಿಧಾನ ಪರಿಷತ್‌ ಸದಸ್ಯ ನಸೀರ್‌ ಅಹ್ಮದ್ ಮತ್ತು ಎಐಸಿಸಿ ವಕ್ತಾರ ಬೃಜೇಶ್ ಕಾಳಪ್ಪ ಅವರಿದ್ದ ನಿಯೋಗ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಅವರನ್ನು ಶುಕ್ರವಾರ ಭೇಟಿಮಾಡಿ ದೂರು ಸಲ್ಲಿಸಿತು.

‘ಮೇ 4ರಂದು ಬೊಮ್ಮನಹಳ್ಳಿ ವಲಯದ ಕೋವಿಡ್‌ ವಾರ್‌ ರೂಮ್‌ಗೆ ಭೇಟಿ ನೀಡಿದ್ದ ತೇಜಸ್ವಿ ಸೂರ್ಯ ಮತ್ತು ಶಾಸಕರು, 16 ಮಂದಿ ಮುಸ್ಲಿಂ ಧರ್ಮೀಯ ಸಿಬ್ಬಂದಿ ಹೆಸರನ್ನು ದುರುದ್ದೇಶದಿಂದ ಉಲ್ಲೇಖಿಸಿದ್ದಾರೆ. ಅವರನ್ನು ಸೇರಿಸಿಕೊಂಡು ಮದರಸಾ ನಡೆಸುತ್ತಿದ್ದೀರಾ? ಎಂದು ಪ್ರಶ್ನಿಸುವ ಮೂಲಕ ಧರ್ಮದ ಆಧಾರದಲ್ಲಿ ದ್ವೇಷ ಬಿತ್ತಲು ಯತ್ನಿಸಿದ್ದಾರೆ’ ಎಂದು ದೂರಲಾಗಿದೆ.

ಸಂಸದ ಮತ್ತು ಶಾಸಕರ ಹೇಳಿಕೆ ಆಧರಿಸಿ ಮುಸ್ಲಿಂ ಧರ್ಮೀಯರ ವಿರುದ್ಧ ದ್ವೇಷದ ಸಂದೇಶಗಳನ್ನು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕೋಮು ಸೌಹಾರ್ದ ಕೆಡಿಸುವುದು ಮತ್ತು ನಗರದಲ್ಲಿ ಶಾಂತಿ ಕದಡುವ ಉದ್ದೇಶದಿಂದ ನಾಲ್ವರೂ ಈ ಕೃತ್ಯ ಎಸಗಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಇವರ ವಿರುದ್ಧ ಧರ್ಮದ ಆಧಾರದಲ್ಲಿ ದ್ವೇಷ ಬಿತ್ತಲು ಯತ್ನ, ಮತೀಯ ವಿಚಾರಗಳನ್ನು ಬಳಸಿ ಶಾಂತಿ ಕದಡಲು ಯತ್ನ, ಒಳಸಂಚು ನಡೆಸಿದ ಆರೋಪದ ಮೇಲೆ ಎಫ್‌ಐಆರ್‌ ದಾಖಲಿಸಿ ಕ್ರಮ ಜರುಗಿಸಬೇಕು ಎಂದು ನಿಯೋಗ ಆಗ್ರಹಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು