ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10ಕ್ಕೂ ಹೆಚ್ಚು ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ: ನಳಿನ್‌ ಕುಮಾರ್‌ ಕಟೀಲ್‌

Last Updated 24 ಏಪ್ರಿಲ್ 2022, 15:53 IST
ಅಕ್ಷರ ಗಾತ್ರ

ಬೆಂಗಳೂರು: ಇತರ ಪಕ್ಷಗಳ ಹತ್ತಕ್ಕೂ ಹೆಚ್ಚು ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದು, ವರಿಷ್ಠರ ಜತೆ ಚರ್ಚಿಸಿದ ಬಳಿಕ ಪಕ್ಷ ಸೇರ್ಪಡೆಗೆ ಅವಕಾಶ ನೀಡಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಭಾನುವಾರ ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾ ಘಟಕದ ಪ್ರಮುಖರ ಸಮಿತಿ ಸಭೆಗೂ ಮೊದಲು ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಹಳೆ ಮೈಸೂರು ಭಾಗದಲ್ಲಿ ಇತರ ಪಕ್ಷಗಳ ಹೆಚ್ಚು ಶಾಸಕರು ಬಿಜೆಪಿ ಸೇರಲು ಕಾತುರರಾಗಿದ್ದಾರೆ. ಅವರೆಲ್ಲರೂ ನನ್ನ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪರ್ಕದಲ್ಲಿದ್ದಾರೆ’ ಎಂದರು.

ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಗಳನ್ನು ಹೊಂದಿದೆ. ಉಳಿದ ಕ್ಷೇತ್ರಗಳಲ್ಲಿ ಅನ್ಯ ಪಕ್ಷಗಳಿಂದ ಬಂದವರಿಗೆ ಅವಕಾಶ ಕಲ್ಪಿಸಬಹುದು. ಆ ರೀತಿಯಲ್ಲಿ ನೋಡಿದರೆ ಹೆಚ್ಚು ಮಂದಿಯೇನೂ ಬಿಜೆಪಿಗೆ ಬೇಕಾಗುವುದಿಲ್ಲ. ಪಕ್ಷದ ರಾಷ್ಟ್ರೀಯ ನಾಯಕರ ಒಪ್ಪಿಗೆ ದೊರಕಿದ ಬಳಿಕ ಮುಖ್ಯಮಂತ್ರಿ ಸಮ್ಮುಖದಲ್ಲೇ ಅಂತಹ ಶಾಸಕರನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗುವುದು ಎಂದು ಹೇಳಿದರು.

ಸರ್ಕಾರ ಮತ್ತು ಪಕ್ಷ ಒಟ್ಟಾಗಿ ಚುನಾವಣೆ ಎದುರಿಸಲಿವೆ. ಚುನಾವಣಾ ಸಿದ್ಧತೆ ಮತ್ತು ಅಭ್ಯರ್ಥಿಗಳ ಬಲಾಬಲಕ್ಕೆ ಸಂಬಂಧಿಸಿದಂತೆ ಹಲವು ಸುತ್ತಿನ ಸಮೀಕ್ಷೆ ನಡೆಸಲಾಗುವುದು. ಜನಾಭಿಪ್ರಾಯವನ್ನು ಆಧರಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಸ್ವಾಮೀಜಿ ಜತೆ ಚರ್ಚಿಸುವೆ: ‘ರಾಜ್ಯದ 50 ಕ್ಷೇತ್ರಗಳಲ್ಲಿ ಸ್ವಾಮೀಜಿಗಳು ಸ್ಪರ್ಧೆ ಮಾಡುತ್ತಾರೆ’ ಎಂಬ ಧರ್ಮಸ್ಥಳದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ನಳಿನ್‌, ‘ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನಮ್ಮ ಗುರುಗಳು. ರಾಜಕಾರಣದ ಕುರಿತು ಅವರು ಏನು ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಅವರ ಜತೆ ಈ ಬಗ್ಗೆ ಚರ್ಚಿಸುವೆ’ ಎಂದರು.

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ: ಶಾಸಕ ಜಗದೀಶ ಶೆಟ್ಟರ್‌ ಮಾತನಾಡಿ, ‘ಕಾಂಗ್ರೆಸ್‌ ಪಕ್ಷವು ಅಲ್ಪಸಂಖ್ಯಾತರು ತಪ್ಪು ಮಾಡಿದಾಗ ಮಾತನಾಡುವುದಿಲ್ಲ. ಕಾಂಗ್ರೆಸ್‌ ಪಕ್ಷವು ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿರುವುದರಿಂದಲೇ ಹುಬ್ಬಳ್ಳಿಯಲ್ಲಿ ಗಲಭೆ ನಡೆದಿದೆ’ ಎಂದು ವಾಗ್ದಾಳಿ ನಡೆಸಿದರು.

ಗಲಭೆ ನಡೆಸುವವರ ಅಕ್ರಮ ಕಟ್ಟಡಗಳನ್ನು ‘ಬುಲ್ಡೋಜರ್‌’ ಬಳಸಿ ನೆಲಸಮಗೊಳಿಸುವ ಕಾನೂನು ರಾಜ್ಯದಲ್ಲೂ ಜಾರಿಯಾಗಬೇಕು. ಇಂತಹ ಕ್ರಮಗಳಿಂದ ಮಾತ್ರ ಗಲಭೆ ನಿಯಂತ್ರಣ ಸಾಧ್ಯ ಎಂದು ಒತ್ತಾಯಿಸಿದರು.

ತಾವು ದೆಹಲಿ ಪ್ರವಾಸ ಕೈಗೊಳ್ಳುತ್ತಿರುವುದರ ಹಿಂದೆ ಯಾವುದೇ ಉದ್ದೇಶವಿಲ್ಲ. ಇತ್ತೀಚೆಗೆ ತಾವು ದೆಹಲಿಗೆ ಹೋದಾಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅದು ಏಕೆ ಎಂಬುದು ತಿಳಿದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT