ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವವು ಜನರ ಮನಸ್ಸಿನ ಕನ್ನಡಿಯಾಗಲಿ: ಕೆ.ಆರ್‌.ರಮೇಶ್‌ ಕುಮಾರ್‌

ಕಾಂಗ್ರೆಸ್‌ ಶಾಸಕ ಕೆ.ಆರ್‌.ರಮೇಶ್‌ಕುಮಾರ್‌
Last Updated 26 ಸೆಪ್ಟೆಂಬರ್ 2021, 13:45 IST
ಅಕ್ಷರ ಗಾತ್ರ

ಬೆಂಗಳೂರು: ‘ಎಲ್ಲಾ ರಾಜಕೀಯ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ಅಗತ್ಯವಿರುವ ಸಂಖ್ಯಾಬಲದತ್ತ ಚಿತ್ತ ಹರಿಸುತ್ತವೆ. ಜನರ ಸಮಸ್ಯೆಗಳನ್ನು ಆಲಿಸುವ ವ್ಯವದಾನ ಯಾರಿಗೂ ಇರುವುದಿಲ್ಲ. ಜನರ ನೋವು ಕೇಳದ ಜನಪ್ರತಿನಿಧಿಗಳನ್ನು ಮೊದಲು ಮನುಷ್ಯರನ್ನಾಗಿ ಮಾಡಬೇಕು.ಪ್ರಜಾಪ್ರಭುತ್ವವು ಜನರ ಮನಸ್ಸಿನ ಕನ್ನಡಿಯಾಗಬೇಕು. ಸಮಾಜದೆಲ್ಲೆಡೆ ಸ್ಥಾಪಿತ ಹಿತಾಸಕ್ತಿ ದಟ್ಟೈಸಿದೆ. ಅದನ್ನು ದೂರ ಸರಿಸಬೇಕು’ ಎಂದು ಕಾಂಗ್ರೆಸ್‌ ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಹೇಳಿದರು.

ಆಮ್‌ ಆದ್ಮಿ ಪಕ್ಷ (ಆಪ್‌) ಹಮ್ಮಿಕೊಂಡಿದ್ದ ‘ಶಾಲಾ ಶುಲ್ಕ ಇಳಿಸಿ; ಮಕ್ಕಳ ಭವಿಷ್ಯ ಉಳಿಸಿ’ ಚಿಂತನ–ಮಂಥನ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.

‘ಪ್ರಾಥಮಿಕ ಶಿಕ್ಷಣ ಹಾಗೂ ಪ್ರಾಥಮಿಕ ಆರೋಗ್ಯ ಖಾಸಗಿಯವರ ಕೈಗೆ ಹೋದರೆ ಅಂತಹ ಸಮಾಜದಲ್ಲಿ ನರಕದ ಕೂಪ ಸೃಷ್ಟಿಯಾಗುತ್ತದೆ. ಅರವಿಂದ್‌ ಕೇಜ್ರಿವಾಲ್‌ ಅವರು ಮುಖ್ಯಮಂತ್ರಿಯಾದ ಬಳಿಕ ನವದೆಹಲಿಯ ಸರ್ಕಾರಿ ಶಾಲೆಗಳಿಗೆ ಹೊಸ ಮೆರುಗು ನೀಡಿದ್ದಾರೆ. ಅದಕ್ಕೆ ಅವರ ಇಚ್ಛಾಶಕ್ತಿ ಕಾರಣ. ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾಗಿ ಮಾತನಾಡುವವರು ಪಕ್ಷದಿಂದಲೇ ಹೊರಹೋಗಲಿ ಎಂದು ಹೇಳಿದ್ದಾರೆ. ಆ ಶಕ್ತಿ ನಮಗಿಲ್ಲ. ನಾವು ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳೆರಡೂ ಇರಲಿ ಎಂದು ಹೇಳುವವರು’ ಎಂದರು.

‘ನಮಗೆ ದೇಶ ಮತ್ತು ಜನರ ಹಿತ ಮುಖ್ಯವೇ ಹೊರತು ಪಕ್ಷವಲ್ಲ. ಸರ್ಕಾರಿ ಶಾಲೆಗಳಿಗೆ ಹಣದ ಕೊರತೆ ಇಲ್ಲ. ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಅನುಷ್ಠಾನಗೊಳಿಸಬೇಕಿದೆ. ಅದಕ್ಕೆ ಇಚ್ಛಾಶಕ್ತಿ ಬೇಕು.ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಉದ್ದೇಶ ಪೂರ್ವಕವಾಗಿಯೇ ನಿರ್ಲಕ್ಷಿಸಿ, ಖಾಸಗಿ ಶಾಲೆಗಳನ್ನು ಬೆಳೆಸಲಾಗುತ್ತಿದೆ. ಎಲ್ಲಾ ಪಕ್ಷಗಳಲ್ಲಿ ಇರುವ ನಾಯಕರು ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ. ಇವರು ಪೋಷಕರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಇದಕ್ಕೆ ವ್ಯಾಪಕ ಚಳವಳಿಯ ಅಗತ್ಯವಿದೆ’ ಎಂದು ತಿಳಿಸಿದರು.

‘ಪತಿ ಹಾಗೂ ತಂದೆಯನ್ನು ಕಳೆದುಕೊಂಡಿರುವ ನಾನು ಇಬ್ಬರು ಮಕ್ಕಳನ್ನು ಓದಿಸಲು ಹಲವು ಮನೆಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ಲಾಕ್‌ಡೌನ್‌ನಿಂದಾಗಿ ಒಂದೂವರೆ ವರ್ಷ ಕೆಲಸವೇ ಇರಲಿಲ್ಲ. ಈಗ ಮಕ್ಕಳ ಶಾಲಾ ಶುಲ್ಕ ಕಟ್ಟಲು ಹಣ ಎಲ್ಲಿಂದ ತರಲಿ’ ಎಂದು ಪೋಷಕರಾದ ಪವಿತ್ರ ಪ್ರಶ್ನಿಸಿದರು.

‘ಗುಣಮಟ್ಟದ ಹಾಗೂ ಉಚಿತ ಶಿಕ್ಷಣ ಪಡೆಯುವ ಹಕ್ಕು ಪ್ರತಿಯೊಬ್ಬ ಮಗುವಿಗೂ ಇದೆ. ಇದನ್ನು ಬಿಜೆಪಿ ಸರ್ಕಾರ ಅರ್ಥಮಾಡಿಕೊಳ್ಳಬೇಕು. ಪೋಷಕರ ಸಮಸ್ಯೆ ಆಲಿಸಿ, ಅವರ ಬೇಡಿಕೆ ಈಡೇರಿಸಲು ಮುಂದಾಗಬೇಕು’ ಎಂದು ಆಪ್‌ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆಗ್ರಹಿಸಿದರು.

ಬೆಂಗಳೂರು ನಗರ ಅಧ್ಯಕ್ಷ ಮೋಹನ್‌ ದಾಸರಿ,‘ಎಎಪಿ ಸರ್ಕಾರ ನವದೆಹಲಿಯಲ್ಲಿ ಸರ್ಕಾರಿ ಶಾಲೆಗಳಿಗೆ ಹೊಸ ರೂಪ ನೀಡಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT