ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದಲ್ಲಿ ಮುಂದಿನ ಬಾರಿ ನಮ್ಮದೇ ಸರ್ಕಾರ: ರಾಹುಲ್ ಗಾಂಧಿ

Last Updated 8 ಅಕ್ಟೋಬರ್ 2022, 13:13 IST
ಅಕ್ಷರ ಗಾತ್ರ

ತುಮಕೂರು: ರಾಜ್ಯದಲ್ಲಿ ಮುಂದಿನ ವರ್ಷ ನಮ್ಮದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಲಿದ್ದು, 2023ರ ವಿಧಾನಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಗೆಲುವು ಸಾಧಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದರು.

ಭಾರತ್ ಜೋಡೊ ಯಾತ್ರೆ ಶನಿವಾರ ಜಿಲ್ಲೆ ಪ್ರವೇಶಿಸಿದ ನಂತರ ಪಾದಯಾತ್ರೆಯಲ್ಲಿ ಸಾಗಿ ಬಂದ ಅವರು ತುರುವೇಕೆರೆ ತಾಲ್ಲೂಕಿನ ಅರಳೀಕೆರೆಪಾಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದ ನಾಯಕರ ನಡುವೆ ಯಾವುದೇ ತಿಕ್ಕಾಟ, ಭಿನ್ನಮತವಿಲ್ಲ. ನಮ್ಮದು ಸರ್ವಾಧಿಕಾರಿ ಮನಸ್ಥಿತಿಯ ಪಕ್ಷವಲ್ಲ. ಎಲ್ಲರ ಭಾವನೆ, ಅಭಿಪ್ರಾಯಗಳಿಗೆ ಅವಕಾಶವಿದೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲಾ ನಾಯಕರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಗೆದ್ದ ನಂತರ ಪಕ್ಷದ ವೇದಿಕೆಯಲ್ಲಿ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಸಮರ್ಥರೊಬ್ಬರು ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದರು.

ಬಿಜೆಪಿ ಸರ್ಕಾರದ ಶೇ 40ರಷ್ಟು ಕಮಿಷನ್ ಪಡೆದುಕೊಳ್ಳುವ ಭ್ರಷ್ಟ ವ್ಯವಸ್ಥೆ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳನ್ನು ಜನರ ಮುಂದಿಟ್ಟು ಚುನಾವಣೆ ಎದುರಿಸುತ್ತೇವೆ. ಈ ಮೂರು ಪ್ರಮುಖ ಸಮಸ್ಯೆಗಳಿಂದ ಬೇಸತ್ತಿರುವುದು ಯಾತ್ರೆ ಸಮಯದಲ್ಲಿ ಜನರನ್ನು ಭೇಟಿ ಮಾಡಿದಾಗ ಮನದಟ್ಟಾಗಿದೆ. ಹಾಗಾಗಿಯೇ ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುತ್ತಿರುವುದು ಎಂದರು.

ಯಾತ್ರೆ ಅನುಭವ:ಪಾದಯಾತ್ರೆಯನ್ನೇ ಏಕೆ ಆಯ್ಕೆ ಮಾಡಿಕೊಂಡಿದ್ದೀರಿ? ಎಂಬ ಪ್ರಶ್ನೆಗೆ ಉತ್ತರಿಸಿ ‘ನನ್ನ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಲು ಬಿಜೆಪಿಯವರು ಹಣ ಖರ್ಚುಮಾಡಿ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಜನರಿಂದ ಸತ್ಯ ತಿಳಿದುಕೊಳ್ಳಲು ಪಾದಯಾತ್ರೆ ಆಯ್ಕೆ ಮಾಡಿಕೊಂಡಿದ್ದೇನೆ. ಅವರ ಜತೆಗೆ ಹೆಚ್ಚು ಆಪ್ತವಾಗಿ ಮಾತನಾಡಬಹುದು, ನೋವು, ಸಂಕಷ್ಟಗಳನ್ನು ಅರಿಯುವುದಾಗಿದೆ. ಇದು ನನಗೆ ದೊಡ್ಡ ಅನುಭವವಾಗಿದೆ. ನಾನೂ ಎಲ್ಲರಂತೆ ಕಾರು, ವಿಮಾನದಲ್ಲಿ ಸಂಚರಿಸಿದ್ದರೆ ಸಾರ್ವಜನಿಕರ ಸಮಸ್ಯೆ, ಅಭಿಪ್ರಾಯ ಗೊತ್ತಾಗುತ್ತಿರಲಿಲ್ಲ’ ಎಂದು ಯಾತ್ರೆಯ ಅನುಭವಗಳನ್ನು ಬಿಚ್ಚಿಟ್ಟರು.

ಯಾತ್ರೆ ಪ್ರಾರಂಭವಾಗಿ 31 ದಿನಗಳಷ್ಟೇ ಕಳೆದಿದ್ದು, ಇನ್ನೂ ಇದು ಆರಂಭಿಕ ಹಂತವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅನುಭವಗಳು ಪಾಠ ಹೇಳುತ್ತವೆ. ಜನರ ಜತೆಗೆ ಮಾತನಾಡದಿದ್ದರೆ ಅವರ ಪರವಾಗಿ ಕೆಲಸ ಮಾಡುವುದು ಕಷ್ಟಕರ. ಅದಕ್ಕಾಗಿಯೇ ಇಂತಹದೊಂದು ಪ್ರಯತ್ನಕ್ಕೆ ಕೈ ಹಾಕಿದ್ದೇನೆ ಎಂದರು.

ಭಾರತವನ್ನು ಒಗ್ಗೂಡಿಸುವುದು ಯಾತ್ರೆಯ ಉದ್ದೇಶವೇ ಹೊರತು 2024ರ ಚುನಾವಣೆ ಗೆಲ್ಲುವುದಷ್ಟೇ ನಮ್ಮ ಗುರಿಯಲ್ಲ. ಹಿಂಸಾಚಾರ, ಕೋಮು ದ್ವೇಷದಿಂದ ದೇಶವನ್ನು ವಿಭಜಿಸಲಾಗುತ್ತಿದೆ. ಆರ್ಥಿಕ ಅಸಮಾನತೆ ಮೂಡಿದ್ದು, ಕೆಲವರಷ್ಟೇ ಶ್ರೀಮಂತರಾಗುತ್ತಿದ್ದಾರೆ. ಒಬ್ಬಿಬ್ಬರ ಬಳಿ ದೇಶದ ಸಂಪತ್ತು ಕ್ರೋಡೀಕರಣವಾಗುತ್ತಿದೆ. ಬೆಲೆ ಏರಿಕೆ, ಆರ್ಥಿಕ ಕುಸಿತದಿಂದ ಜನರು ಜರ್ಜರಿತರಾಗಿದ್ದು, ಆ ಬಗ್ಗೆ ಮಾತನಾಡುವುದು ಯಾತ್ರೆಯ ಉದ್ದೇಶವಾಗಿದೆ ಎಂದು ವಿವರಿಸಿದರು.

ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಕಾಂಗ್ರೆಸ್ ರಾಷ್ಟ್ರವನ್ನು ಒಗ್ಗೂಡಿ, ಅಭಿವೃದ್ಧಿ ಮಾಡಿದೆಯೇ ಹೊರತು ಎಂದೂ ವಿಭಜನೆ ಮಾಡಿಲ್ಲ. ದೇಶ ವಿಭಜನೆ ಮಾಡುತ್ತಿರುವವರೇ ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ. ಪಿಎಫ್ಐ ಸೇರಿದಂತೆ ಯಾರೇ ಅಶಾಂತಿ ಮೂಡಿಸಿದರೂ ಅಂತಹವರನ್ನು ನಾವು ವಿರೋಧಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT