ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿದರೆ ಕುಮಾರಸ್ವಾಮಿಗೆ ಕೋಪ: ಸಿದ್ದರಾಮಯ್ಯ

Last Updated 25 ಸೆಪ್ಟೆಂಬರ್ 2021, 15:46 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿದರೆ ಕುಮಾರಸ್ವಾಮಿ ಅವರಿಗೆ ಕೋಪ ಬರುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಶನಿವಾರ ವ್ಯಂಗ್ಯವಾಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ‘ಅವಕಾಶಗಳಿಂದ ವಂಚಿತರಾದವರಿಗೆ ಅವಕಾಶಗಳನ್ನು ಕಲ್ಪಿಸುವುದೇ ಸಾಮಾಜಿಕ ನ್ಯಾಯ. ಇದರ ಬಗ್ಗೆ ಮಾತನಾಡಿದರೆ ಕುಮಾರಸ್ವಾಮಿ ಅವರಿಗೆ ಕೋಪ ಬರುತ್ತದೆ. ಜಾತಿ ಗಣತಿ ವರದಿಯನ್ನು ನಾನೇ ಬರೆಸಿಬಿಟ್ಟಿದ್ದೇನೆ ಎಂದು ಅವರು ಆರೋಪಿಸುತ್ತಾರೆ,‘ ಎಂದು ವ್ಯಂಗ್ಯ ಮಾಡಿದ್ದಾರೆ.

‘ಯಾರು ಹಿಂದುಳಿದಿದ್ದಾರೆ ಅವರನ್ನು ಮುಂದಕ್ಕೆ ತರಲು ಜಾತಿ ಗಣತಿ ಮಾಡಲಾಗಿದೆ. ಆದಕ್ಕೆ ಕೆಲವರು ವಿರೋಧ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಧಿಕಾರಕ್ಕೆ ಬರುತ್ತದೆ. ನಾನು ಎಲ್ಲ ಜಾತಿಗೂ ಪ್ರಾತಿನಿಧ್ಯ ಕೊಡಲು ಪ್ರಯತ್ನಿಸುತ್ತೇನೆ,’ ಎಂದು ಅವರು ಇದೇ ವೇಳೆ ಹೇಳಿದರು.

ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಹಿಂದುಳಿದ ವರ್ಗಗಳ ಆಯೋಗದ ಜಾತಿವಾರು ಜನಗಣತಿ ವರದಿಯನ್ನು ಬಿಡುಗಡೆ ಮಾಡದಂತೆ ಆಗ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದ ಪುಟ್ಟರಂಗ ಶೆಟ್ಟಿ ಅವರನ್ನು ಬೆದರಿಸಿದ್ದರು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಕೋವಿಡ್‌ನಿಂದ ಮೃತರಾದವರ ಕುಟುಂಬಗಳಿಗೆ ನೆರವು ಮತ್ತು ದಿನಸಿ ಕಿಟ್‌ ವಿತರಿಸಲು ಕರ್ನಾಟಕ ರಾಜ್ಯ ಮಡಿವಾಳರ ಸಂಘ ಯಶವಂತಪುರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿವಾರು ಜನಗಣತಿ) ಪೂರ್ಣಗೊಂಡಿರಲಿಲ್ಲ. ನಂತರ ಬಂದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಕ್ತಾಯವಾಯಿತು. ವರದಿ ಬಹಿರಂಗವಾಗದಂತೆ ಕುಮಾರಸ್ವಾಮಿ ತಡೆದರು’ ಎಂದರು.

ಜಾತಿವಾರು ಜನಗಣತಿಯ ವರದಿ ಸಿದ್ಧವಾಗಿರುವ ಕುರಿತು ಪುಟ್ಟರಂಗ ಶೆಟ್ಟಿ ಅವರು ಕುಮಾರಸ್ವಾಮಿ ಅವರಿಗೆ ಮಾಹಿತಿ ನೀಡಿದ್ದರು. ಆಗ, ಅಂದಿನ ಮುಖ್ಯಮಂತ್ರಿ ನೇರವಾಗಿ ವರದಿಯನ್ನು ವಿರೋಧಿಸಿದ್ದರು. ಕುಮಾರಸ್ವಾಮಿ ಅವರ ಬೆದರಿಕೆಗೆ ಹೆದರಿದ ಪುಟ್ಟರಂಗ ಶೆಟ್ಟಿ ವರದಿಯನ್ನು ಬಿಡುಗಡೆ ಮಾಡುವ ಗೋಜಿಗೆ ಹೋಗಲಿಲ್ಲ ಎಂದು ಹೇಳಿದರು.

‘ಸತ್ಯ ಹೇಳಿದರೆ ಕುಮಾರಸ್ವಾಮಿ ಅವರಿಗೆ ಕೋಪ ಬರುತ್ತದೆ. ಜಾತಿವಾರು ಜನಗಣತಿಯ ವರದಿಯನ್ನು ಸಿದ್ದರಾಮಯ್ಯ ಕುಳಿತು ಬರೆಸಿದ್ದಾರೆ ಎಂಬ ಆರೋಪ ಮಾಡುತ್ತಾರೆ. ಅದು ರಾಜ್ಯದಲ್ಲಿನ ಎಲ್ಲ ಜಾತಿ, ಧರ್ಮದ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿಯ ವಾಸ್ತವ ಚಿತ್ರಣ ನೀಡುವ ವರದಿ. ಯಾರಿಗೂ ಅನ್ಯಾಯ ಮಾಡುವ ಉದ್ದೇಶ ವರದಿಯ ಹಿಂದಿಲ್ಲ. ಆದರೂ, ಅವರು ವರದಿಯನ್ನು ವಿರೋಧಿಸುತ್ತಾರೆ’ ಎಂದರು.

ತಮ್ಮ ಸರ್ಕಾರ ಇದ್ದಾಗ ರಾಜ್ಯದಲ್ಲಿ ಮಡಿವಾಳ ಸಮುದಾಯದ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಲಾಗಿತ್ತು. ಮುಂದೆ ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆಗ ಮಡಿವಾಳ ಸಮುದಾಯಕ್ಕೆ ವಿಧಾನ ಪರಿಷತ್‌ ಸದಸ್ಯ ಸ್ಥಾನ ನೀಡಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

ರಾಜ್ಯ ಮಡಿವಾಳರ ಸಂಘದ ಅಧ್ಯಕ್ಷ ನಂಜಪ್ಪ, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ. ರವಿಕುಮಾರ್‌, ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್‌. ಶಿವಣ್ಣ ಮಳವಳ್ಳಿ, ಕಾಂಗ್ರೆಸ್‌ ಮುಖಂಡ ರಾಜು ತಲ್ಲೂರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT