ಸೋಮವಾರ, ಸೆಪ್ಟೆಂಬರ್ 26, 2022
20 °C

ಬೇರೆಯವರ ಬೆಂಕಿಯಲ್ಲಿ ಕೈ ಕಾಯಿಸಿಕೊಳ್ಳುವುದು ಜೆಡಿಎಸ್‌ನ ಜಾಯಮಾನ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಬೇರೆಯವರ ಬೆಂಕಿಯಲ್ಲಿ ಕೈ ಕಾಯಿಸಿಕೊಳ್ಳುವುದು ಜೆಡಿಎಸ್‌ನ ಜಾಯಮಾನ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಕಾಂಗ್ರೆಸ್‌ ಗ್ರಾಮಾಂತರ ಜಿಲ್ಲಾ ಸಮಿತಿಯಿಂದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಇಲವಾಲ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಜೆಡಿಎಸ್ ಯಾವತ್ತೂ ಹೋರಾಟ ಮಾಡಿಲ್ಲ. ಆ ಪಕ್ಷದವರಿಗೆ ಅವಮಾನ ಮಾಡಲು ನಾನು ಈ ಮಾತು ಹೇಳುತ್ತಿಲ್ಲ. ಅವರು ಯಾವಾಗಲೂ ಮಧ್ಯದಲ್ಲಿ ತೂರಿಕೊಂಡು ಬಿಡೋಣ ಎಂದುಕೊಂಡೇ ಇರುತ್ತಾರೆ. ನಾವು ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಆ ಪಕ್ಷದವರಿಗೆ ಬಿಟ್ಟು ಕೊಟ್ಟಿದ್ದೆವು. ಅದನ್ನು ಉಳಿಸಿಕೊಂಡಿರಾ ಮಿಸ್ಟರ್ ಕುಮಾರಸ್ವಾಮಿ?’ ಎಂದು ವ್ಯಂಗ್ಯವಾಗಿ ಕೇಳಿದರು.

ಇದನ್ನೂ ಓದಿ: 

ಬಿಜೆಪಿಯವರು ಹೋರಾಡಿಲ್ಲ: ‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಕಾಂಗ್ರೆಸ್ ಸಂಸ್ಥಾಪಕರನ್ನು ನೆನೆಯಬೇಕು. ಕಾಂಗ್ರೆಸ್ ಹೋರಾಟ ನಡೆಸಿ, ನಮ್ಮನ್ನು ಸ್ವತಂತ್ರರನ್ನಾಗಿ ಮಾಡಲು ಶ್ರಮಿಸಿದೆ. ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಜವಾಹರಲಾಲ್‌ ನೆಹರೂ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ತ್ಯಾಗ ದೊಡ್ಡದು. ಆಸ್ತಿ ಕಳೆದುಕೊಂಡು, ಜೈಲಿಗೆ ಹೋಗಿ ಸ್ವಾತಂತ್ರ್ಯ ತಂದುಕೊಟ್ಟರು. ದೇಶದ ಸ್ವಾತಂತ್ರ್ಯಕ್ಕೆ ಕಾಂಗ್ರೆಸ್ ಪಕ್ಷ ಕಾರಣ. ಬೇರಾವ ಪಕ್ಷವೂ ಹೋರಾಟ ಮಾಡಿಲ್ಲ’ ಎಂದು ಪ್ರತಿಪಾದಿಸಿದರು.

‘ಹಿಂದೂ, ಮುಸ್ಲಿಮರು ಸೇರಿದಂತೆ ಎಲ್ಲರೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಸ್ವಾತಂತ್ರ್ಯ ಬಂದ ಮೇಲೆ ಜನ ಸಂಘ ರಚನೆಯಾಯಿತು. ಆದ್ದರಿಂದ ಬಿಜೆಪಿಯವರು ಕೂಡ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ’ ಎಂದು ಟೀಕಿಸಿದರು.

‘ಬಿಜೆಪಿಯ ಒಬ್ಬನಾದರೂ ದೇಶಕ್ಕಾಗಿ ಸತ್ತಿದ್ದಾರಾ? ದೇಶಕ್ಕೆ ಅವರ ಕೊಡುಗೆ ಏನು? ಅಂಥವರು ನಮಗೆ ದೇಶಭಕ್ತಿಯ ಪಾಠ ಮಾಡಲು ಹೊರಟಿದ್ದಾರೆ. ದೇಶ ಭಕ್ತಿ ಆರಂಭವಾಗಿದ್ದೇ ಕಾಂಗ್ರೆಸ್ ಪಕ್ಷದಿಂದ. ರಾಷ್ಟ್ರಧ್ವಜ ಬಂದದ್ದು, ಸಂವಿಧಾನ ಆಗಿದ್ದು ನಮ್ಮಿಂದಲೇ’ ಎಂದರು.

ಎಚ್ಚರದಿಂದಿರಿ: ‘ಹರ್ ಘರ್ ತಿರಂಗಾ’ದ ಬಗ್ಗೆ ವ್ಯಂಗ್ಯವಾಡುವ ಭರದಲ್ಲಿ, ಬಾವುಟದ ಬಣ್ಣವನ್ನು ಕೆಂಪು, ಬಿಳಿ ಮತ್ತು ಹಸಿರು ಎಂದು ತಪ್ಪಾಗಿ ಉಲ್ಲೇಖಿಸಿದರು.

‘ಬಿಜೆಪಿಯಂತಹ ಭ್ರಷ್ಟ ಹಾಗೂ ಕೋಮುವಾದಿ ಪಕ್ಷ ಯಾವುದೂ ಇಲ್ಲ. ಶೇ 40ರಷ್ಟು ಲಂಚದ ಸರ್ಕಾರ ಇದಾಗಿದೆ. ಬಿಜೆಪಿಗೆ ಸೇರಬೇಕು ಎಂದುಕೊಂಡವರು ಎಚ್ಚರಿಕೆಯಿಂದಿರಿ’ ಎಂದು ತಿಳಿಸಿದರು.

ತಾವು ಚಾಮುಂಡೇಶ್ವರಿ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಪಟ್ಟಿ ಮಾಡಿದ ಅವರು, ‘ಇಲ್ಲಿಗೆ ರಸ್ತೆ, ವಿದ್ಯುತ್ ಸಂಪರ್ಕ, ಕುಡಿಯುವ ನೀರು ಸೌಲಭ್ಯ ಇರಲಿಲ್ಲ. ಸಿಟಿ ಬಸ್ ಬರುತ್ತಿರಲಿಲ್ಲ. ವರುಣಾ ನಾಲೆ ಇತ್ತಾ? ಏನೂ ಮಾಡದರಿಗೆ ಅಧಿಕಾರ ಕೊಡ್ತಿರಲ್ಲಾ?’ ಎಂದು ತಮ್ಮನ್ನು ಸೋಲಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಕಾಂಗ್ರೆಸ್‌ ಗ್ರಾಮಾಂತರ ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮುಖಂಡರಾದ ಕೆ.ಮರೀಗೌಡ ಹಾಗೂ ಹರೀಶ್ ಗೌಡ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು