ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ನಡಿಗೆಗೆ ಕಾಂಗ್ರೆಸ್‌ ಸಿದ್ಧತೆ: ಡಿ.ಕೆ. ಶಿವಕುಮಾರ್ ಸರಣಿ ಸಭೆ

ಇದೇ 15ರಂದು ಪ‍ಕ್ಷದ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮ
Last Updated 9 ಆಗಸ್ಟ್ 2022, 5:45 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಇದೇ 15ರಂದು ಕಾಂಗ್ರೆಸ್‌ ಪ‍ಕ್ಷದ ವತಿಯಿಂದ ಹಮ್ಮಿಕೊಂಡಿರುವ ‘ಸ್ವಾತಂತ್ರ್ಯ ನಡಿಗೆ’ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರ ಸರಣಿ ಸಭೆಗಳನ್ನು ಸೋಮವಾರ ನಡೆಸಿದರು.

ರಾಜಾಜಿನಗರ, ಮಹಾಲಕ್ಷ್ಮಿ ಬಡಾವಣೆ, ದಾಸರಹಳ್ಳಿ ಮತ್ತು ಯಲಹಂಕ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಭೆ ನಡೆಸಿದ ಅವರು, ಸ್ವಾತಂತ್ರ್ಯ ನಡಿಗೆಯ ಮೂಲಕವೇ ಪಕ್ಷ ಸಂಘಟನೆ ಚುರುಕುಗೊಳಿಸುವಂತೆ ಸೂಚನೆ ನೀಡಿದರು. ಬಿಜೆಪಿ ಹಾಗೂ ಜೆಡಿಎಸ್‌ ಶಾಸಕರಿರುವ ಕ್ಷೇತ್ರಗಳಲ್ಲೇ ಇಡೀ ದಿನ ಸುತ್ತಾಟ ನಡೆಸಿದ ಅವರು, ಕಾಂಗ್ರೆಸ್‌ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಲು ಯತ್ನಿಸಿದರು.

ರಾಜಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಭೆಯಲ್ಲಿ ಮಾಜಿ ಮೇಯರ್‌ ಜಿ. ಪದ್ಮಾವತಿ, ಪಾಲಿಕೆ ಮಾಜಿ ಸದಸ್ಯ ಕೃಷ್ಣಮೂರ್ತಿ ಸೇರಿ ಹಲವು ಮುಖಂಡರು ಇದ್ದರು. ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಮುಖಂಡ ಎಚ್‌.ಎಂ. ರೇವಣ್ಣ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ರಾಜಕುಮಾರ್‌, ಪಾಲಿಕೆ ಮಾಜಿ ಸದಸ್ಯರಾದ ಎಂ. ಶಿವರಾಜು, ಎಸ್‌. ಕೇಶವಮೂರ್ತಿ ಅವರೂ ಪಾಲ್ಗೊಂಡಿದ್ದರು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಭೆಯಲ್ಲಿ ಸ್ಥಳೀಯ ಮುಖಂಡರಾದ ಪಿ.ಎನ್‌. ಕೃಷ್ಣಮೂರ್ತಿ, ನಾಗಲಕ್ಷ್ಮಿ ಚೌಧರಿ, ಗೀತಾ ಶಿವರಾಮು, ಕೆ.ಆರ್‌. ಮಂಜುನಾಥ್‌ ಇದ್ದರು. ಯಲಹಂಕ ಕ್ಷೇತ್ರದ ವ್ಯಾಪ್ತಿಯ ಸಭೆಯಲ್ಲಿ ಹಲವು ಮಂದಿ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.

ಶಕ್ತಿ ತುಂಬುವ ಯತ್ನ: ರಾಜಾಜಿನಗರ ಕ್ಷೇತ್ರದಲ್ಲಿನ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶಿವಕುಮಾರ್‌, ‘ಕಾಂಗ್ರೆಸ್‌ ಶಾಸಕರಿಲ್ಲದ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ಪ್ರಯತ್ನ ಮಾಡುತ್ತಿದ್ದೇನೆ’ ಎಂದರು.

ದಾಸರಹಳ್ಳಿ ಸಭೆಯಲ್ಲಿ ವಾಗ್ವಾದ
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸೇರಿದಂತೆ ಪಕ್ಷದ ನಾಯಕರ ಎದುರಿನಲ್ಲೇ ಸ್ಥಳೀಯ ಮುಖಂಡರು ವಾಗ್ವಾದ ನಡೆಸಿದ ಘಟನೆ ಸೋಮವಾರ ನಡೆಯಿತು.

ಸಭೆಯ ಆರಂಭದಲ್ಲೇ ಕೆಲವರು ತಮಗೆ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ ಎಂದು ತಕರಾರು ತೆಗೆದರು. ಮತ್ತೊಂದು ಗುಂಪು ಕೂಡ ವಾಗ್ವಾದಕ್ಕೆ ಇಳಿಯಿತು. ಎರಡೂ ಗುಂಪಿನ ಮುಖಂಡರಿಗೆ ಗದರಿದ ಶಿವಕುಮಾರ್‌, ಸಭೆ ಮುಂದುವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT