ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿ ಇಲ್ಲದೆ ಜೆಡಿಎಸ್‌ನವರ ಸೆಳೆಯುವ ಕಾಂಗ್ರೆಸ್‌ ರಾಜಕೀಯ ಪಕ್ಷವೇ? ಎಚ್‌ಡಿಕೆ

Last Updated 5 ಅಕ್ಟೋಬರ್ 2020, 5:27 IST
ಅಕ್ಷರ ಗಾತ್ರ

ಬೆಂಗಳೂರು: ಉಪಚುನಾವಣೆಗೆ ಅಭ್ಯರ್ಥಿಗಳು ಗತಿ ಇಲ್ಲದೆ ಜೆಡಿಎಸ್‌ನವರನ್ನು ಸೆಳೆಯುವ ಕಾಂಗ್ರೆಸ್‌ ರಾಜಕೀಯ ಪಕ್ಷವೇ? ದೇಶದಲ್ಲಿ ಇತರ ಪಕ್ಷಗಳೊಂದಿಗೆ ಚೌಕಾಸಿಯಲ್ಲಿ ತೊಡಗಿರುವ ಕಾಂಗ್ರೆಸ್‌, ಭಾರತದಲ್ಲಿ ರಾಜಕೀಯ ಪಕ್ಷವಾಗಿ ಉಳಿದಿದೆಯೇ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

‘ಜೆಡಿಎಸ್‌ನವರು ಇನ್ನೊಬ್ಬರ ಹೆಗಲ ಮೇಲೆ ಕುಳಿತುಕೊಂಡು ಅಧಿಕಾರಕ್ಕೆ ಬರುವವರು. ಅವರು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವವರಲ್ಲ. ನನ್ನ ಪ್ರಕಾರ ಜೆಡಿಎಸ್ ಒಂದು ರಾಜಕೀಯ ಪಕ್ಷವೇ ಅಲ್ಲ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಭಾನುವಾರ ಹೇಳಿದ್ದರು. ಅಲ್ಲದೆ, ‘ತಿಪ್ಪರಲಾಗ ಹಾಕಿದರೂ ಅವರು ಅಧಿಕಾರಕ್ಕೆ ಬರಲಾರರು,’ ಎಂದು ಮೂದಲಿಸಿದ್ದರು. ಈ ಹೇಳಿಕೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಸರಣಿ ಟ್ವೀಟ್‌ ಮಾಡಿ ಟೀಕಿಸಿದ್ದಾರೆ.

‘ಜೆಡಿಎಸ್‌ನಿಂದ ಪ್ರವರ್ದಮಾನಕ್ಕೆ ಬಂದಿದ್ದ, ಜೆಡಿಎಸ್‌ನಿಂದಲೇ ಡಿಸಿಎಂ ಆದ ನಾಯಕರೊಬ್ಬರು, ಸಭೆಯೊಂದರಲ್ಲಿ ಜೆಡೆಎಸ್‌ ಮುಖಂಡರನ್ನು ತಮ್ಮ ಈಗಿನ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾ ಅದೇ ಜೆಡಿಎಸ್‌ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಜೆಡಿಎಸ್‌ ರಾಜಕೀಯ ಪಕ್ಷವಲ್ಲ ಎಂದು ಹೇಳಿದ್ದಾರೆ. ಉಪಚುನಾವಣೆಗೆ ಅಭ್ಯರ್ಥಿಯ ಗತಿ ಇಲ್ಲದೆ ಜೆಡಿಎಸ್‌ನವರನ್ನು ಸೆಳೆದ ನಿಮ್ಮದು ರಾಜಕೀಯ ಪಕ್ಷವೇ?’ ಎಂದು ಕೇಳಿದ್ದಾರೆ.

‘ಭಾರತದ ಅತಿ ಹಳೆಯ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್‌ ಇಂದು ಯಾವ ಪರಿಸ್ಥಿತಿಯಲ್ಲಿದೆ, ಯಾವ ರಾಜ್ಯಗಳಲ್ಲಿ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡಿದೆ? ಎಲ್ಲೆಲ್ಲಿ ಯಾರು ಯಾರ ಹೆಗಲ ಮೇಲೆ ಕುಳಿತು ರಾಜಕೀಯ ಮಾಡುತ್ತಿದೆ? ಎಲ್ಲಿಲ್ಲಿ ಯಾರು ಯಾರಿಗೆ ಹೆಗಲಾಗಿದೆ? ಜೆಡಿಎಸ್‌ ಉಪ್ಪು ತಿಂದ ಆ ಮಹಾನ್‌ ನಾಯಕರು ಈ ಪ್ರಶ್ನೆಗಳಿಗೆ ಉತ್ತರ ನೀಡುವರೇ?’ ಎಂದು ಪ್ರಶ್ನೆ ಮಾಡಿದ್ದಾರೆ.

‘ಮಿತ್ರಪಕ್ಷಗಳನ್ನೇ ಆಪೋಷನ ಪಡೆದು ಜೀವಿಸುತ್ತಿರುವ, ಜನರಿಂದ ತಿರಸ್ಕಾರವಾಗಿರುವ, ಇತರ ಪಕ್ಷಗಳೊಂದಿಗೆ ಚೌಕಾಸಿಯಲ್ಲಿ ತೊಡಗಿರುವ ಕಾಂಗ್ರೆಸ್‌ ಭಾರತದಲ್ಲಿ ರಾಜಕೀಯ ಪಕ್ಷವಾಗಿ ಉಳಿದಿದೆಯೇ? ಕಾಂಗ್ರೆಸ್‌ ತನ್ನ ಅಹಂಕಾರದ ಪ್ರವೃತ್ತಿ ಮುಂದುವರಿಸಿಕೊಂಡು ಹೋದರೆ ಕರ್ನಾಟಕದಲ್ಲೂ ನೆಲೆ ಕಳೆದುಕೊಳ್ಳುವುದರಲ್ಲಿ ಅನುಮಾನಗಳಿಲ್ಲ,’ ಎಂದು ಭವಿಷ್ಯ ನುಡಿದಿದ್ದಾರೆ.

‘2018ರ ಚುನಾವಣೆಯಲ್ಲಿ ‘ಮಹಾನ್‌ ನಾಯಕರ’ ‘ಅಪ್ಪನಾಣೆ’ ‘ತಿಪ್ಪರಲಾಗ’ದ ಸವಾಲುಗಳನ್ನು ಜನ ಸೋಲಿಸಿದ್ದಾರೆ. ಆ ಪಕ್ಷ ಅಧಿಕಾರಕ್ಕೆ ಬಾರದು, ಈ ಪಕ್ಷ ಅಧಿಕಾರಕ್ಕೆ ಬಾರದು ಎಂದು ‘ಅಪ್ಪನಾಣೆ’ಗಳನ್ನು ಇಟ್ಟವರಿಗೆ ಜನ, ಆಣೆ ಪ್ರಮಾಣದ ಮಹತ್ವ ತಿಳಿಸಿಕೊಟ್ಟಿದ್ದಾರೆ. ಈ ಉಪ ಚುನಾವವಣೆಯಲ್ಲೂ ಅವರಿಗೆ ತಕ್ಕ ಉತ್ತರ ಸಿಗಲಿದೆ. ಅದಕ್ಕಾಗಿ ಕಾಯಲಿ,’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT