ಮಂಗಳವಾರ, ಜೂನ್ 28, 2022
27 °C
ವೈದ್ಯಕೀಯ ಸಿಬ್ಬಂದಿ ಕೊರತೆ; ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಅಲೆದಾಟ

ಕೋವಿಡ್‌ ಆರೈಕೆ ಕೇಂದ್ರವೇ ದೂರ: ಆಂಬುಲೆನ್ಸ್‌ಗೂ ಪರದಾಟ

ಕೆ.ಎಸ್.ಸುನಿಲ್ Updated:

ಅಕ್ಷರ ಗಾತ್ರ : | |

Prajavani

ಹಾಸನ: ಎಂಬತ್ತೈದು ಸಾವಿರ ಜನಸಂಖ್ಯೆಯ ಆಲೂರು ತಾಲ್ಲೂಕಿಗೆ ಇರುವುದು ಒಂದೇ ಆಂಬುಲೆನ್ಸ್‌. ಮತ್ತೊಂದು ಕೆಟ್ಟು ಹೋಗಿದೆ. ಕೊರೊನಾ ಸೋಂಕಿತರನ್ನು ಆರೈಕೆ ಕೇಂದ್ರಕ್ಕೆ ಕರೆದೊಯ್ಯಲು ಹಾಗೂ ಮನೆಗೆ ಬಿಡಲು ಇರುವುದು ಅದೊಂದೇ ವಾಹನ. ಕೆಲವೊಮ್ಮೆ ಅದು ದೂರದ ಹಳ್ಳಿಗೆ ಹೋಗಿದ್ದರೆ, ಬರುವುದು ತಡವಾಗುತ್ತದೆ. ಅಂತಹ ಸಂದರ್ಭದಲ್ಲಿ, ತಾಲ್ಲೂಕು ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳು ಜಿಲ್ಲಾಸ್ಪತ್ರೆಗೆ ತೆರಳುವುದು ಬಹಳ ಕಷ್ಟಕರವಾಗಿದೆ.

ಮಲೆನಾಡು ಪ್ರದೇಶ ಸಕಲೇಶಪುರ, ಆಲೂರು ಭಾಗದಲ್ಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಭಾಗ
ದಲ್ಲಿ ಒಂಟಿ ಮನೆಗಳಿದ್ದು, ಕಾಡಾನೆಗಳ ಉಪಟಳವೂ ಹೆಚ್ಚು. ಸದ್ಯಕ್ಕೆ ಬಸ್ ಸೇವೆಯೂ ಇಲ್ಲ. ರೋಗಿಗಳು ಗಂಭೀರ ಸ್ಥಿತಿಗೆ  ತಲುಪಿದರೆ ಕಾಡಾನೆ ಭಯದಿಂದ ಚಿಕಿತ್ಸೆಗಾಗಿ 20 –30 ಕಿ.ಮೀ. ದೂರದ ಆಸ್ಪತ್ರೆಗೆ ಬರಲು ಸಾಧ್ಯವಾಗುತ್ತಿಲ್ಲ.

‘ಹಗಲೂ ರಾತ್ರಿ ಕಾಡಾನೆಗಳ ಕಾಟ. ಕೂಲಿ, ಕೃಷಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದೆವು. ಗಂಭೀರ ಆರೋಗ್ಯ ಸಮಸ್ಯೆಯಾದರೆ ಆಂಬುಲೆನ್ಸ್‌ಗೆ ಕರೆ ಮಾಡಲು ನೆಟ್‌ವರ್ಕ್‌ ಸಮಸ್ಯೆ. ಬಾಡಿಗೆ ವಾಹನಗಳೂ ಸಿಗುವುದಿಲ್ಲ. ಕೊರೊನಾ ಸೋಂಕು ಹೆಚ್ಚಾಗಿ ವ್ಯಾಪಿಸಿರುವುದರಿಂದ ಬಹುತೇಕ ಕ್ಲಿನಿಕ್‌ಗಳ ಬಾಗಿಲು ತೆರೆದಿಲ್ಲ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವಂತಾಗಿದೆ. ಹಾಗಾಗಿ, ಕಾಯಿಲೆ ಬಂದರೂ ಮನೆ ಮದ್ದು ಹಾಗೂ ಮಾತ್ರೆ
ಗಳ ಮೊರೆ ಹೋಗುತ್ತಿದ್ದೇವೆ’ ಎನ್ನುತ್ತಾರೆ ಶುಕ್ರವಾರಸಂತೆ, ಹಾನುಬಾಳು, ಹೆತ್ತೂರು, ಯಸಳೂರು, ಅಲೇ ಬೇಲೂರು ಮತ್ತು ಬಾಳ್ಳುಪೇಟೆ ಜನರು.

ಸಕಲೇಶಪುರ, ಆಲೂರು, ಬೇಲೂರು, ಅರಸೀಕೆರೆ ತಾಲ್ಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳು ಇದ್ದರೂ ಅಪರೇಟರ್‌ಗಳು ಇಲ್ಲ. ಹಲವು ಕಡೆ ಐಸಿಯು ಬೆಡ್‌ಗಳ ಕೊರತೆ ಇದೆ. ವೈದ್ಯರು, ಸ್ಟಾಫ್‌ ನರ್ಸ್‌, ಗ್ರೂಪ್‌ ಡಿ ನೌಕರರು ಅಗತ್ಯಕ್ಕೆ ತಕ್ಕಂತೆ ಇಲ್ಲ. ಸಮರ್ಪಕ ಚಿಕಿತ್ಸೆ ದೊರೆಯದ ಕಾರಣ, ರೋಗಿಗಳೂ ಆಸ್ಪತ್ರೆಗಳಿಂದ ಆಸ್ಪತ್ರೆಗಳಿಗೆ ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ತುರ್ತು ಸಂದರ್ಭದಲ್ಲಿ ತಾಲ್ಲೂಕು ಕೇಂದ್ರ ಇಲ್ಲವೇ ಜಿಲ್ಲಾಸ್ಪತ್ರೆಗೆ ತೆರಳಬೇಕು. ಆದರೆ, ಅಗತ್ಯವಿದ್ದಾಗ ಆಂಬುಲೆನ್ಸ್‌ ದುರ್ಲಭ.

‘ಸೋಂಕು ತಗುಲಿದಾಗ ಮನೆಯಲ್ಲಿಯೇ ಚಿಕಿತ್ಸೆ ಪಡೆದೆ. ಮನೆಯಲ್ಲಿದ್ದ ಉಳಿದ ಮೂವರಿಗೂ ಕೋವಿಡ್‌ ಪಾಸಿಟಿವ್ ಬಂತು. ಆದರೆ, ಆರೈಕೆ ಕೇಂದ್ರಕ್ಕೆ ಹೋಗಬೇಕಾದರೆ 20 ಕಿ.ಮೀ ದೂರದ ಸಕಲೇಶಪುರ ತಾಲ್ಲೂಕು ಕೇಂದ್ರಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ’ ಎನ್ನುತ್ತಾರೆ ಶುಕ್ರವಾರಸಂತೆಯ ಸಿದ್ದರಾಜು.

‘ಸಕಲೇಶಪುರ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ, ಫಿಜಿಷಿಯನ್‌ ಸೇರಿದಂತೆ ತಜ್ಞ ವೈದ್ಯರ ಹುದ್ದೆಯು ಹತ್ತು ವರ್ಷಗಳಿಂದ ಖಾಲಿ ಇದೆ. ಕರ್ತವ್ಯದಲ್ಲಿರುವ ಐವರು ವೈದ್ಯರ ಪೈಕಿ ಒಬ್ಬರಿಗೆ ಕೋವಿಡ್–19 ದೃಢಪಟ್ಟಿದ್ದು, ರಜೆಯಲ್ಲಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳು ಜಿಲ್ಲಾಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿರುವ ಉದಾಹರಣೆಗಳು ಸಾಕಷ್ಟಿದೆ ’ ಎಂದು ಯಡೇಹಳ್ಳಿಯ ಮಂಜುನಾಥ್‌ ಆಕ್ರೋಶ ವ್ಯಕ್ತಪಡಿಸಿದರು.

ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇದ್ದು, ಸ್ಟಾಫ್‌ ನರ್ಸ್‌ಗಳೇ ವೈದ್ಯರ ಕೆಲಸ ಮಾಡುತ್ತಿದ್ದಾರೆ. ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ, ಮಲೆನಾಡು ಭಾಗದಲ್ಲಿ ಸೋಂಕಿತರಿಗೆ ಮನೆಗಳಲ್ಲಿಯೇ ಆರೈಕೆ, ಲಸಿಕೆಗೆ ಪರದಾಟ, ಆಂಬುಲೆನ್ಸ್‌ ಕೊರತೆ–ಇವು ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ ಜನರು ಎದುರಿಸುತ್ತಿರುವ ಸಮಸ್ಯೆಗಳು. ಇನ್ನು, ಹಕ್ಕಿಪಿಕ್ಕಿ ಸಮುದಾಯದಲ್ಲಿನ ಸೋಂಕಿತರು, ಶೆಡ್‌ನಲ್ಲಿ ಪ್ರತ್ಯೇಕ ವಾಸವಾಗಿದ್ದುಕೊಂಡು ತಮ್ಮದೇ ಆದ ಔಷಧೋಪಚಾರವನ್ನೂ ಮಾಡಿಕೊಳ್ಳುತ್ತಿದ್ದಾರೆ.

ತಗಡಿನ ಶೆಡ್‌ನಲ್ಲೇ ವಾಸ: ಬೇಲೂರು ತಾಲ್ಲೂಕಿನ ಅಂಗಡಿಹಳ್ಳಿ ಗ್ರಾಮದಲ್ಲಿ ಹಕ್ಕಿಪಿಕ್ಕಿ ಸಮುದಾಯದ ಸೋಂಕಿತರು ಊರ ಹೊರಗಿನ ಬಯಲಲ್ಲಿ ಹಾಕಿರುವ ಶೆಡ್‌ನಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಸೋಂಕು ಹರಡದಂತೆ ಗ್ರಾಮದ ಮುಖಂಡರು ಈ ನಿರ್ಧಾರ ಕೈಗೊಂಡಿದ್ದಾರೆ. ಆಸ್ಪತ್ರೆಯಿಂದ ಗುಣಮುಖರಾಗಿ ಬಂದವರಿಗೂ, ಹತ್ತು ದಿನ ಊರ ಹೊರಗೆ ಪ್ರತ್ಯೇಕ ವಾಸ. ಇಲ್ಲಿ 300ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದು, ಗಿಡ ಮೂಲಿಕೆಗಳ ಔಷಧ ಮಾರಾಟ ಇವರ ಕಾಯಕ.

‘ಸೋಂಕು ಹರಡದಂತೆ ಗ್ರಾಮದ ಹೊರಗೆ ಶೆಡ್‌ನಲ್ಲಿ ಕುಟುಂಬ ಸಮೇತ ಇರಿಸಲಾಗಿದೆ. ಜ್ವರ–ಗಂಟಲು ನೋವಿಗೆ ತುಳಸಿ, ಕಸ್ತೂರಿ, ಗಾಳಿಬೀಜ ಅರೆದು ಜೇನು ಸೇರಿಸಿ ಲೇಹ ತಯಾರಿಸಿ ಗಂಟಲಿಗೆ ಹಚ್ಚಿಕೊಳ್ಳುತ್ತೇವೆ. ಅರಿಸಿನ, ಒಣಮೆಣಸು, ಅಮೃತ ಬಳ್ಳಿ, ಕಾಡು ಜೀರಿಗೆ ಕಷಾಯ ಮಾಡಿ  ಕುಡಿಯುತ್ತಿದ್ದೇವೆ. ಹಾಗಾಗಿ ಕೋವಿಡ್‌ಗೆ ನಮ್ಮೂರಲ್ಲಿ ಯಾರೂ ಸತ್ತಿಲ್ಲ’ ಎನ್ನುತ್ತಾರೆ ಹಕ್ಕಿಪಿಕ್ಕಿ ಸಮುದಾಯದ ಮುಖಂಡ ಹೂ ರಾಜ್‌ ಮತ್ತು ಗ್ರಾಮ ಪಂಚಾಯಿತಿ ಸದಸ್ಯೆ ಖುನ್ನಿಸಾ.

ಅರಕಲಗೂಡು ತಾಲ್ಲೂಕಿನ ಕೊಣನೂರು ಸಮುದಾಯ ಆರೋಗ್ಯ ಕೇಂದ್ರವನ್ನು ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸಿದರೆ ರೋಗಿಗಳು ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಕ್ಕೆ ಅಲೆಯುವುದನ್ನು ತಪ್ಪಿಸಬಹುದು ಎನ್ನುತ್ತಾರೆ ಸ್ಥಳೀಯರು.

69 ತಜ್ಞ ವೈದ್ಯರ ಹುದ್ದೆ ಖಾಲಿ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 13 ತಜ್ಞ ವೈದ್ಯರ ಹುದ್ದೆ ಮತ್ತು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ 56 ತಜ್ಞ ವೈದ್ಯರ ಹುದ್ದೆ ಖಾಲಿ ಇವೆ. ಸಕಲೇಶಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಹತ್ತು ವರ್ಷಗಳಿಂದ ಮುಖ್ಯ ವೈದ್ಯಾಧಿಕಾರಿ, ಫಿಜಿಷಿಯನ್‌, ಮಕ್ಕಳ ತಜ್ಞ, ರೇಡಿಯಾಲಜಿಸ್ಟ್‌, ಅರಿವಳಿಕೆ ತಜ್ಞರಿಲ್ಲ.

ಜಿಲ್ಲಾಸ್ಪತ್ರೆ ಮೇಲೆ ಒತ್ತಡ: ಆಮ್ಲಜನಕ ಸೌಲಭ್ಯದ 500 ಹಾಸಿಗೆ, 100 ಸಾಮಾನ್ಯ ಹಾಗೂ ವೆಂಟಿಲೇಟರ್‌ ಸಹಿತ 90 ಹಾಸಿಗೆಗಳ ಸೌಲಭ್ಯ ಹೊಂದಿರುವ ಹಾಸನ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಕೋವಿಡ್‌ ಆಸ್ಪತ್ರೆಯು, ರೋಗಿಗಳಿಂದ ಭರ್ತಿಯಾಗಿದೆ.  ಸೋಂಕಿತರ ಸಂಖ್ಯೆ ಹೆಚ್ಚಿದಂತೆ ಆಸ್ಪತ್ರೆ ಮೇಲಿನ ಒತ್ತಡವೂ ಹೆಚ್ಚುತ್ತಿದೆ. ನಿತ್ಯವೂ ಸರಾಸರಿ 15 ಸಾವು ಸಂಭವಿಸುತ್ತಿವೆ. ಖಾಸಗಿ ಆಸ್ಪತ್ರೆಗಳು ಆಮ್ಲಜನಕ ಸೌಲಭ್ಯದ ಹಾಸಿಗೆ ಒದಗಿಸಿದರೂ ವೆಂಟಿಲೇಟರ್‌ಗಳ ಕೊರತೆ ಕಾಡುತ್ತಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು