ಭಾನುವಾರ, ಜುಲೈ 3, 2022
27 °C
ಜೀವಕ್ಕಿಂತ ಹಣವೇ ಮುಖ್ಯ

‘ಚಿಕಿತ್ಸೆ’ಯೇ ಸುಲಿಗೆಯ ದಾರಿ: ಹಣ ಕೊಟ್ಟರೆ ಕಾಳಸಂತೆಯಲ್ಲಿ ಔಷಧಿ

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆಸ್ಪತ್ರೆಗಳಲ್ಲಿ ‘ಚಿಕಿತ್ಸೆ’ ಎನ್ನುವುದು ಸುಲಿಗೆಯ ದಂಧೆಯಾಗಿ ಎಷ್ಟೋ ವರ್ಷಗಳು ಕಳೆದಿವೆ. ಆಸ್ಪತ್ರೆಗೆ ಹೋದರೆ ಜೀವವೂ ಉಳಿಯುವುದಿಲ್ಲ, ಮಾಡಿಟ್ಟ ಆಸ್ತಿಯೂ ಉಳಿಯುವುದಿಲ್ಲ ಎಂಬ ಗೋಳಿಗೆ ಖಾಸಗಿ ಆಸ್ಪತ್ರೆಗಳಷ್ಟೆ ಸಾಕ್ಷಿಯಾಗಿದ್ದವು. ಇತ್ತೀಚೆಗೆ ಈ ಸಾಲಿಗೆ ಸರ್ಕಾರಿ ಆಸ್ಪತ್ರೆಗಳೂ ಸೇರಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳು ಇಲ್ಲ ಎನ್ನುತ್ತಾರೆ. ಆದರೆ, ಹಣ ಕೊಟ್ಟರೆ ಅದೇ ಆಸ್ಪತ್ರೆಯಲ್ಲಿ ಕಾಳಸಂತೆಯಲ್ಲಿ ಔಷಧಿ ಸಿಗುತ್ತವೆ. ಅಷ್ಟರಮಟ್ಟಿಗೆ, ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು ಅಕ್ರಮಕ್ಕಿಳಿದಿದ್ದಾರೆ ಎಂಬ ಆರೋಪವಿದೆ.

ಕೋವಿಡ್‌ ಸಮಯದಲ್ಲಿ ರೆಮ್‌ಡಿಸಿವಿರ್‌ ಚುಚ್ಚುಮದ್ದಿನ ಕೃತಕ ಕೊರತೆ ನೆನಪಿನಿಂದ ಇನ್ನೂ ಮಾಸಿಲ್ಲ. ₹ 3,500ಕ್ಕೆ ಸಿಗುತ್ತಿದ್ದ ಈ ಚುಚ್ಚುಮದ್ದನ್ನು ₹25 ಸಾವಿರದಿಂದ ₹ 27 ಸಾವಿರಕ್ಕೆ ಆರೋಗ್ಯ ಅಧಿಕಾರಿಗಳು ಮಾರಾಟ ಮಾಡಿದ್ದರು. ಖಾಸಗಿ ಕ್ಲಿನಿಕ್‌ ನಡೆಸುವ ಸರ್ಕಾರಿ ವೈದ್ಯರೇ ಈ ‘ವ್ಯವಹಾರ’ದ ಹಿಂದಿದ್ದರು. ರೆಮ್‌ಡಿಸಿವಿರ್‌ ಸಿಗದೆ ಜನ ನರಳುತ್ತಿದ್ದರೂ, ಅವರಿಗೆ ಜೀವಕ್ಕಿಂತ ಹಣವೇ ಮುಖ್ಯವಾಗಿ ಬಿಟ್ಟಿತ್ತು.

‘ತಾಯಿಯಾಗುವ ಸಂಭ್ರಮದ ನೋವು ಅನುಭವಿಸುತ್ತಿರುವ ಗರ್ಭಿಣಿಗೆ ಸಾಮಾನ್ಯ ಹೆರಿಗೆಯ (ನಾರ್ಮಲ್ ಡೆಲಿವರಿ) ಸಾಧ್ಯತೆ ಇದ್ದರೂ, ಇನ್ನಷ್ಟು ಸಮಯ ಕಾದರೆ ತಾಯಿ ಮತ್ತು ಮಗುವಿನ ಜೀವಕ್ಕೇ ಅಪಾಯವಿದೆ ಎಂದು ಪೋಷಕರನ್ನು ಬೆದರಿಸಿ ಸಿಜೇರಿಯನ್‌ ಮಾಡುವ ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ತುಂಬಿದ್ದಾರೆ. ಸಾಮಾನ್ಯ ಹೆರಿಗೆಯಾದರೆ ₹ 2,000ದಿಂದ ₹ 3,000 ಲಂಚ ನೀಡಬೇಕು. ಸಿಜೇರಿಯನ್‌ಗೆ ₹ 8,000ದಿಂದ ₹ 10,000 ಕೊಡಬೇಕು. ಇಲ್ಲವಾದರೆ ಹೆರಿಗೆಯನ್ನೇ ಮಾಡಿಸುವುದಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಸಿಜೇರಿಯನ್‌ಗೆ ₹ 45,000 ಪಾವತಿಸಬೇಕು’ ಎನ್ನುತ್ತಾರೆ ಮಗಳ ಹೆರಿಗೆ ವೇಳೆ ಮೊಮ್ಮಗುವನ್ನು ಕಳೆದುಕೊಂಡ ಗದಗದ ಮಹಿಳೆಯೊಬ್ಬರು.

‘ಸಹಜ ಹೆರಿಗೆ ಆಗಲಿದೆ ಎಂದಿದ್ದ ಸಿಬ್ಬಂದಿ, ಅದಕ್ಕೆ ಪ್ರಯತ್ನಿಸುವುದಾಗಿ ಹೇಳಿದ್ದರು. ಬಳಿಕ ಸಿಜೇರಿಯನ್‌ ಮಾಡಲು ತೀರ್ಮಾನಿಸಿ, ಸಹಜ ಹೆರಿಗೆ ಆಗದ ಬಗ್ಗೆ ತಜ್ಞ ವೈದ್ಯರಿಗೆ ಮಾಹಿತಿ ನೀಡಿದ್ದರು. ಆದರೆ, ಮೊದಲೇ ಹಣ ಕೊಟ್ಟಿಲ್ಲವೆಂದು ಕರ್ತವ್ಯದಲ್ಲಿದ್ದ ವೈದ್ಯರು ಸಮಯಕ್ಕೆ ಸರಿಯಾಗಿ ಬಾರದ ಕಾರಣ ಮಗು ಹುಟ್ಟುವ ಮುನ್ನವೆ ಹೊಟ್ಟೆಯಲ್ಲಿ ಅಸುನೀಗಿತ್ತು’ ಎಂದರು.

‘ರಕ್ತದೊತ್ತಡ ಜಾಸ್ತಿಯಾಗಿದೆ, ಅರಿವಳಿಕೆ ವೈದ್ಯರಿಲ್ಲ ಎಂದೆಲ್ಲ ನೆಪ ಹೇಳಿ ಖಾಸಗಿ ಆಸ್ಪತ್ರೆಗೆ ಹೋಗಿ ಅಥವಾ ಜಿಲ್ಲಾ ಆಸ್ಪತ್ರೆ ಹೋಗಿ ಎಂದು ಹೇಳುತ್ತಾರೆ. ಹಣ ಕೊಟ್ಟು ಹೆರಿಗೆ ಮಾಡಿಸಬೇಕಾದ ಅನಿವಾರ್ಯ ಸ್ಥಿತಿ ತಾಲ್ಲೂಕು ಆಸ್ಪತ್ರೆಗಳಲ್ಲಿವೆ. ಹೀಗಾಗಿ, ಹೆರಿಗೆಗೆ ಬರುವವರು ಕೈಯಲ್ಲಿ ಹಣ ಹಿಡಿದುಕೊಂಡೇ ಬರಬೇಕು. ₹ 2 ಸಾವಿರ ಕೊಟ್ಟರೆ ಮಾತ್ರ ಹೆರಿಗೆ. ಇಲ್ಲಾಂದ್ರೆ ಇಲ್ಲ. ಸರ್ಕಾರಿ ಆಸ್ಪತ್ರೆಗೆ ಬಡವರು, ಕೂಲಿಕಾರರು ಬರುತ್ತಾರೆ. ಅವರು ಎಲ್ಲಿಂದ ಹಣ ತರಬೇಕು’ ಎಂದೂ ಪ್ರಶ್ನಿಸಿದರು.

ಬೈಕೇ ಆಂಬ್ಯುಲೆನ್ಸ್‌, ಆಟೋ ಇನೋವಾ
ಕೋವಿಡ್‌ ತೀವ್ರವಾಗಿದ್ದ ದಿನಗಳಲ್ಲಿ ವೈದ್ಯಾಧಿಕಾರಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಮತ್ತು ಸೋಂಕಿತರನ್ನು ಆಸ್ಪತ್ರೆಗೆ ಕರೆತರಲು ಟ್ರಾವೆಲ್ಸ್‌ ಕಂಪನಿಗಳಿಂದ ವಾಹನಗಳನ್ನು ಬಾಡಿಗೆ ಪಡೆದಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು, ಅದರಲ್ಲೂ ಹಣ ನುಂಗಿರುವುದು ಭ್ರಷ್ಟಾಚಾರದ ಮತ್ತೊಂದು ಮುಖ!

‘ಆಂಬ್ಯುಲೆನ್ಸ್‌ ಹೆಸರಿನಲ್ಲಿ ಬೈಕು, ಆಟೊ, ಸರ್ಕಾರಿ ವಾಹನ ಸೇರಿದಂತೆ ಸಿಕ್ಕ ಸಿಕ್ಕ ವಾಹನಗಳ ನಂಬರ್‌ಗಳನ್ನು ನಮೂದಿಸಿ ಹಣ ಲಪಟಾಯಿಸಲಾಗಿದೆ. ಖಾಸಗಿ ಟ್ರಾವೆಲ್ಸ್‌ ಕಂಪನಿಗಳ ಜೊತೆ ಇಲಾಖೆಯ ಅಧಿಕಾರಿಗಳು ಕೈಜೋಡಿಸಿದ್ದರು. ದಾಖಲೆಗಳಲ್ಲಿ ಬಾಡಿಗೆ ಪಡೆದಿದ್ದ ಕಾರುಗಳ ನಂಬರ್‌ ಪರಿಶೀಲಿಸಿದಾಗ ಇಂಡಿಕಾ, ಸ್ವಿಫ್ಟ್‌ ಸೇರಿದಂತೆ ಸಾಮಾನ್ಯ ವರ್ಗದ ಕಾರುಗಳೆಂದು ಗೊತ್ತಾಗಿದೆ. ಆದರೆ, ಇನ್ನೋವಾ ಕ್ರೆಸ್ಟಾದಂಥ ದುಬಾರಿ ಕಾರುಗಳ ಬಿಲ್‌ ಮಾಡಲಾಗಿತ್ತು. ಹೀಗೆ ಬಾಡಿಗೆ ರೂಪದಲ್ಲಿ ₹ 5 ಕೋಟಿಗೂ ಹೆಚ್ಚು ಬಾಡಿಗೆ ಪಾವತಿಸಿ ಹಗಲು ದರೋಡೆ ನಡೆಸಲಾಗಿದೆ’ ಎಂದು ಇಲಾಖೆಯ ಅಧಿಕಾರಿಯೇ ಮಾಹಿತಿ ನೀಡಿದರು.

**

ಆರೋಗ್ಯ ಅಧಿಕಾರಿಗಳಿಂದ ಹುದ್ದೆ ಬಿಕರಿ!
ಕೋವಿಡ್‌ ಉಲ್ಬಣವಾಗಿದ್ದ ಅವಧಿಯಲ್ಲಿ ಯಾದಗಿರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಶುಶ್ರೂಷಕಿ ನೇಮಕಾತಿಗೆ ಬಂದಿದ್ದ ಅಭ್ಯರ್ಥಿಯೊಬ್ಬರಿಂದ ₹ 30 ಸಾವಿರ ಲಂಚ ಪಡೆಯುತ್ತಿದ್ದ ಆರೋಗ್ಯ ಇಲಾಖೆ ಮುಖ್ಯಾಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದರು. ಪ್ರತಿ ಅಭ್ಯರ್ಥಿಯಿಂದ ₹ 30 ಸಾವಿರದಿಂದ ₹ 50 ಸಾವಿರ ಲಂಚದ ಬೇಡಿಕೆ ಇಟ್ಟಿರುವ ಬಗ್ಗೆ ಬಂದ ದೂರು ಆಧರಿಸಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಇಂಥದ್ದೇ ಪ್ರಕರಣ ಗದಗದಲ್ಲೂ ನಡೆದಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ನರ್ಸಿಂಗ್ ಹುದ್ದೆಗಳ ಭರ್ತಿಗೆ ಅಧಿಕಾರಿಗಳು ₹ 1 ಲಕ್ಷ ಬೇಡಿಕೆ ಇಟ್ಟಿದ್ದರು. ಅರ್ಹತೆ ಆಧಾರದಲ್ಲಿ ನೇಮಕಾತಿ ಪಟ್ಟಿ ಸಿದ್ಧಪಡಿಸಿದ್ದರಿಂದ ನೇಮಕಾತಿ ಆದೇಶ ಬರಬಹುದೆಂದು ಕಾಯುತ್ತಿದ್ದವರಿಗೆ, ಲಂಚ ಕೊಟ್ಟು ಹುದ್ದೆ ಗಿಟ್ಟಿಸಿಕೊಳ್ಳುವಂತೆ ಕರೆ ಬಂದಿತ್ತು. ಈ ಬಗ್ಗೆ ಅಭ್ಯರ್ಥಿಯೊಬ್ಬರು ದೂರು ನೀಡಿದ ಪರಿಣಾಮ, ₹ 90 ಸಾವಿರ ಹಣ ಪಡೆಯುವ ವೇಳೆ ಮಧ್ಯವರ್ತಿಯೊಬ್ಬ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು