ಗುರುವಾರ , ಸೆಪ್ಟೆಂಬರ್ 23, 2021
22 °C

ಸಭಾಪತಿ ರಾಜೀನಾಮೆ: ಇಂದು ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿಧಾನ ಪರಿಷತ್‌ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಕುರಿತು ಸೋಮವಾರ ಅಂತಿಮ ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ.

ಡಿಸೆಂಬರ್‌ನಲ್ಲಿ ನಡೆದ ಅಧಿವೇಶನದಲ್ಲಿ ಬಿಜೆಪಿ ಸದಸ್ಯರು ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಕೋರಿ ನೋಟಿಸ್ ನೀಡಿದ್ದರು. ಸಭಾಪತಿ ಅದನ್ನು ತಿರಸ್ಕರಿಸಿದ್ದರು. ಈಗ ಮತ್ತೊಮ್ಮೆ ಅವಿಶ್ವಾಸ ನಿರ್ಣಯದ ನೋಟಿಸ್‌ ನೀಡಿದ್ದಾರೆ. ಫೆಬ್ರುವರಿ 5 ರವರೆಗೂ ಅಧಿವೇಶನ ನಡೆಯಲಿದ್ದು, ಅವಿಶ್ವಾಸ ನಿರ್ಣಯದ ನೋಟಿಸ್‌ ಕುರಿತು ಈ ಅಧಿವೇಶನದ ಕೊನೆಯ ದಿನದೊಳಗೆ ಸಭಾಪತಿ ನಿರ್ಧಾರ ಪ್ರಕಟಿಸಬೇಕಿದೆ.

ಸೋಮವಾರ ಅಥವಾ ಮಂಗಳವಾರ ರಾಜೀನಾಮೆ ಸಲ್ಲಿಸಲು ಪ್ರತಾಪಚಂದ್ರ ಶೆಟ್ಟಿ ಚಿಂತನೆ ನಡೆಸಿದ್ದಾರೆ. ಆದರೆ, ಅಧಿವೇಶನದ ಕೊನೆಯ ದಿನವೇ ರಾಜೀನಾಮೆ ನೀಡುವಂತೆ ಅವರಿಗೆ ಕೆಲವರು ಸಲಹೆ ಮಾಡಿದ್ದಾರೆ. ಈ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಸೋಮವಾರ ಉಡುಪಿಯಿಂದ ಹಿಂದಿರುಗಿದ ಬಳಿಕ ತೀರ್ಮಾನಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌–ಜೆಡಿಎಸ್‌ ಪ‍ಕ್ಷಗಳ ಸದಸ್ಯರ ಬೆಂಬಲದೊಂದಿಗೆ 2018ರ ಡಿಸೆಂಬರ್‌ನಲ್ಲಿ ಪ್ರತಾಪಚಂದ್ರ ಶೆಟ್ಟಿ ಸಭಾಪತಿ ಹುದ್ದೆಗೇರಿದ್ದರು. ಈಗ ಬಿಜೆಪಿ ಬೆಂಬಲದೊಂದಿಗೆ ಸಭಾಪತಿ ಹುದ್ದೆ ಪಡೆಯಲು ಜೆಡಿಎಸ್‌ ನಿರ್ಧರಿಸಿದೆ. ಇದಕ್ಕಾಗಿ ಜನವರಿ 29ರಂದು ನಡೆದ ಉಪ ಸಭಾಪತಿ ಚುನಾವಣೆಯಲ್ಲಿ ಬಿಜೆಪಿಯ ಎಂ.ಕೆ. ಪ್ರಾಣೇಶ್‌ ಅವರಿಗೆ ಜೆಡಿಎಸ್‌ ಸದಸ್ಯರು ಬೆಂಬಲ ಸೂಚಿಸಿದ್ದರು.

ಜೆಡಿಎಸ್‌ ಸದಸ್ಯರು ಬಿಜೆಪಿ ಜತೆ ಕೈಜೋಡಿಸಿರುವುದರಿಂದ ಸಭಾಪತಿ ಬಹುಮತ ಕಳೆದುಕೊಂಡಿರುವುದು ಸ್ಪಷ್ಟವಾಗಿದೆ. ಈ ಕಾರಣದಿಂದ ಹುದ್ದೆಯಲ್ಲಿ ಮುಂದುವರಿಯದೇ ಇರಲು ಪ್ರತಾಪಚಂದ್ರ ಶೆಟ್ಟಿ ನಿರ್ಧರಿಸಿದ್ದಾರೆ. ಸೋಮವಾರ ಅಥವಾ ಮಂಗಳವಾರ ಅವರು ರಾಜೀನಾಮೆ ಸಲ್ಲಿಸಿದರೆ ಈ ಅಧಿವೇಶನದಲ್ಲೇ ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರು ಸಭಾಪತಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಪ್ರತಾಪಚಂದ್ರ ಶೆಟ್ಟಿ ಅವರು ಫೆ.5ರಂದು ರಾಜೀನಾಮೆ ಸಲ್ಲಿಸಿದಲ್ಲಿ ಬಜೆಟ್‌ ಅಧಿವೇಶನದಲ್ಲೇ ನೂತನ ಸಭಾಪತಿ ಆಯ್ಕೆಗೆ ಚುನಾವಣೆ ನಡೆಯುತ್ತದೆ ಎಂದು ಮೂಲಗಳು ತಿಳಿಸಿವೆ.

ಸ್ವಂತ ವಾಹನದಲ್ಲಿ ಸಂಚಾರ: ಸಭಾಪತಿ ಕಳೆದ ಕೆಲವು ದಿನಗಳಿಂದ ಸರ್ಕಾರಿ ವಾಹನವನ್ನು ಬಳಸದೇ ಸ್ವಂತ ವಾಹನದಲ್ಲಿ ಸಂಚಾರ ಮಾಡುತ್ತಿದಾರೆ. ರಾಜೀನಾಮೆ ನೀಡಲು ನಿರ್ಧರಿಸಿರುವುದರಿಂದ ಸರ್ಕಾರಿ ವಾಹನ ಬಳಸುತ್ತಿಲ್ಲ ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು