ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌ನ ಹೊಸ ವೈರಾಣು: ಪರೀಕ್ಷೆಯ ಫಲಿತಾಂಶ ಇಂದು?

Last Updated 26 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬ್ರಿಟನ್‌ನಲ್ಲಿ ವ್ಯಾಪಿಸಿಕೊಂಡಿರುವ ಹೊಸ ಸ್ವರೂಪದ ಕೊರೊನಾ ವೈರಾಣು ಇಲ್ಲಿಗೆ ಬಂದವರಲ್ಲಿ ಕಾಣಿಸಿಕೊಂಡಿದೆಯೇ ಎನ್ನುವುದು ಭಾನುವಾರ ದೃಢಪಡುವ ಸಾಧ್ಯತೆಯಿದೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಇಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ‘ಬ್ರಿಟನ್‌ನಲ್ಲಿ ವೈರಾಣು 17 ರೀತಿಯಲ್ಲಿ ರೂಪಾಂತರಗೊಂಡಿದೆ. ಕಳೆದ ನ.22ರಿಂದ 38,500 ಪ್ರಯಾಣಿಕರು ಅಲ್ಲಿಂದ ನಮ್ಮ ದೇಶಕ್ಕೆ ಬಂದಿದ್ದಾರೆ. ಇದರಲ್ಲಿ 2,500 ಮಂದಿ ನಮ್ಮ ರಾಜ್ಯದಲ್ಲಿದ್ದಾರೆ. ಅವರಲ್ಲಿ 1,638 ಮಂದಿಗೆ ಪರೀಕ್ಷೆ ನಡೆಸಲಾಗಿದೆ. ಈಗಾಗಲೇ ಅವರಲ್ಲಿ 14 ಮಂದಿಗೆ (ಡಿ.25ರವರೆಗೆ) ಸೋಂಕು ದೃಢಪಟ್ಟಿದ್ದು, ಅವರ ಮಾದರಿಗಳನ್ನು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ಪ್ರಯೋಗಾಲಯಕ್ಕೆ ಜೆನೆಟಿಕ್ ಸೀಕ್ವೆನ್ಸ್ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ತಿಳಿಸಿದರು.

‘ಈ ಮಾದರಿಯ ಪರೀಕ್ಷೆಗೆ 48 ಗಂಟೆಗಳು ಬೇಕಾಗುತ್ತವೆ. ಪರೀಕ್ಷೆಯ ವರದಿಯನ್ನು ಪ್ರಯೋಗಾಲಯವು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿಗೆ (ಐಸಿಎಂಆರ್‌) ಕಳುಹಿಸಲಿದೆ. ಜೆನೆಟಿಕ್ ಸೀಕ್ವೆನ್ಸ್ ಪರೀಕ್ಷೆಗೆ ಕೇಂದ್ರ ಸರ್ಕಾರವು ದೇಶದಲ್ಲಿ 10 ಪ್ರಯೋಗಾಲಯವನ್ನು ಗುರುತಿಸಿದೆ. ವಿವಿಧ ರಾಜ್ಯಗಳಿಂದ ಪರೀಕ್ಷಾ ವರದಿಯು ಐಸಿಎಂಆರ್‌ಗೆ ರವಾನೆಯಾಗಲಿದೆ. ಆ ಬಳಿಕ ಪ್ರಧಾನಿ ಕಚೇರಿಗೆ ಕಳುಹಿಸಲಾಗುತ್ತದೆ. ತದನಂತರ ಅಧಿಕೃತವಾಗಿ ಮಾಹಿತಿ ಹೊರಬರಲಿದೆ’ ಎಂದು ವಿವರಿಸಿದರು.

ಲಸಿಕೆ ಪಡೆಯಲು ಮನವಿ
‘ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ. ಈ ಲಸಿಕೆಯನ್ನು ಪ್ರಾಯೋಗಿಕವಾಗಿ ಪಡೆಯಬಹುದು. ಕೊರೊನಾ ಯೋಧರಾಗಿ ಕಾರ್ಯನಿರ್ವಹಿಸುತ್ತಿರುವವರು ಇದರ ಲಾಭ ಪಡೆದು, ಕ್ಲಿನಿಕಲ್ ಟ್ರಯಲ್‌ಗೆ ಸಹಕರಿಸಬೇಕು’ ಎಂದು ಸುಧಾಕರ್ ಮನವಿ ಮಾಡಿಕೊಂಡರು.

‘ಹೊಸ ಸ್ವರೂಪದ ಕೊರೊನಾ ವೈರಾಣು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆಯೊಂದಿಗೆ ಸಭೆ ನಡೆಸಿ, ಹೊಸ ಮಾರ್ಗಸೂಚಿ ರೂಪಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT