ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ವೇಳೆ ಮಕ್ಕಳ ಕಲಿಕಾ ಸಾಮರ್ಥ್ಯದಲ್ಲಿ ಹಿನ್ನಡೆ: ವಾಣಿ ಪೆರಿಯೋಡಿ

Last Updated 24 ಜೂನ್ 2021, 20:56 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್ ಪಿಡುಗಿನ ಸಂದರ್ಭದಲ್ಲಿ ಶೇ 92ರಷ್ಟು ಮಕ್ಕಳು ತಮ್ಮ ಹಿಂದಿನ ತರಗತಿಯ ಕನಿಷ್ಠ ಭಾಷಾ ಸಾಮರ್ಥ್ಯಗಳನ್ನು ಕಳೆದುಕೊಂಡಿದ್ದಾರೆ’ ಎಂದು ಮಹಿಳಾ ಹೋರಾಟಗಾರ್ತಿ ವಾಣಿ ಪೆರಿಯೋಡಿ ತಿಳಿಸಿದರು.

ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ ಆನ್‌ಲೈನ್‌ ಮೂಲಕ ಮಂಗಳವಾರ ಹಮ್ಮಿಕೊಂಡಿದ್ದ 50ನೇ ಇ–ಮಂಥನದಲ್ಲಿ ‘ಕಲ್ಪನೆಯಿಂದ ಸಾಧ್ಯತೆಯೆಡೆಗೆ ಮಕ್ಕಳ ಹಕ್ಕುಗಳು’ ಚರ್ಚೆಯಲ್ಲಿ ಮಾತನಾಡಿದರು.

‘ಈ ವರ್ಷದ ಜನವರಿಯಲ್ಲಿ ಐದು ರಾಜ್ಯಗಳಲ್ಲಿ2ರಿಂದ 6ನೇ ತರಗತಿ ಓದುತ್ತಿರುವ 16 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ಇವರಲ್ಲಿ ಭಾಷೆ ಮತ್ತು ಗಣಿತಕ್ಕೆ ಸಂಬಂಧಿಸಿದ ಸಾಮರ್ಥ್ಯಗಳನ್ನು ಮೌಲ್ಯಮಾಪನ ಮಾಡಿದಾಗ,ಚಿತ್ರ ನೋಡಿ ವಿವರಣೆ, ಪದಗಳನ್ನು ಓದುವುದು, ಅರ್ಥಗ್ರಹಿಕೆ, ವಾಕ್ಯರಚನೆಯಂತಹ ಮೂಲ ಸಾಮರ್ಥ್ಯಗಳಲ್ಲಿ ಹಿನ್ನಡೆ ಕಂಡುಬಂತು’ ಎಂದು ವಿವರಿಸಿದರು.

‘ಮುಂದಿನ ತರಗತಿ ತಲುಪಲು ಇಂತಹ ಸಾಮರ್ಥ್ಯಗಳು ಅಡಿಪಾಯ. ಶಿಕ್ಷಣ ಎಂದರೆ ಇತರರೊಡನೆ ಒಡನಾಟ ಇರಬೇಕು. ಈಗಿನ ಆನ್‌ಲೈನ್‌ ಶಿಕ್ಷಣದಲ್ಲಿ ಒಡನಾಟ ಕಡಿಮೆ, ಹಾಸ್ಯಕ್ಕೆ ಅವಕಾಶ ಇಲ್ಲ. ಪರದೆ ನೋಡುತ್ತಲೇ ಕೂರಬೇಕಾದ ಅನಿವಾರ್ಯತೆ ಇದೆ. ಇವರಿಗಾಗಿ ಸೃಜನಶೀಲ ಹಾಗೂ ವಿಕೇಂದ್ರೀಕೃತ ಮಾರ್ಗಗಳನ್ನು ಕಂಡುಕೊಳ್ಳಬೇಕು’ ಎಂದರು.

ನಟ ಸುಚೇಂದ್ರ ಪ್ರಸಾದ್,‘ ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಆದರೆ, ಮಾಹಿತಿ, ಅರಿವು, ಜಾಗೃತಿ ಮೂಡಿಸುವ ಹಂತಗಳಲ್ಲೇ ಇನ್ನೂ ಎಷ್ಟು ವರ್ಷಗಳನ್ನು ಕಳೆಯಬೇಕು?’ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯಎಚ್.ಸಿ.ರಾಘವೇಂದ್ರ, ‘ತಜ್ಞರ ಪ್ರಕಾರ ಮಕ್ಕಳ ಶಿಕ್ಷಣ ಸಾಮಾಜೀಕರಣಗೊಳ್ಳಬೇಕು. ಭಾವನಾತ್ಮಕವಾಗಿ ಬೆರೆತಾಗ ಮಾತ್ರ ಕಲಿಕೆ ಅರ್ಥಪೂರ್ಣವಾಗುತ್ತದೆ. ಆನ್‌ಲೈನ್‌ ಶಿಕ್ಷಣ ಉಳ್ಳವರ ಸ್ವತ್ತಾಗಿದೆ. ಅಂಗವಿಕಲರು ಹಾಗೂ ಗುಡ್ಡಗಾಡು ಪ್ರದೇಶಗಳ ಮಕ್ಕಳಿಗೆ ಈ ತಾಂತ್ರಿಕತೆ ಪಡೆಯುವುದೇ ಸವಾಲು. ಆನ್‌ಲೈನ್ ಶಿಕ್ಷಣಕ್ಕೆ ಪರ್ಯಾಯ ವ್ಯವಸ್ಥೆಗಳು ಅಗತ್ಯ’ ಎಂದರು.

ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಸುಚಿತ್ರಾ, ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ನ ವಾಸುದೇವ ಶರ್ಮ, ನಾಗಸಿಂಹ ಜಿ.ರಾವ್ ಹಾಗೂ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT