ಗುರುವಾರ , ಮೇ 13, 2021
22 °C

Covid-19: ಮನೆ ಆರೈಕೆಗೆ ಹಲವು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೊರೊನಾ ಸೋಂಕಿತರು ‘ರೆಮ್‌ಡಿಸಿವಿರ್’ ಇಂಜೆಕ್ಷನ್ ಅಥವಾ ಇನ್ನಾವುದೇ ಚಿಕಿತ್ಸೆಯನ್ನು ಆಸ್ಪತ್ರೆಗಳಲ್ಲಿನ ವೃತ್ತಿಪರ ವೈದ್ಯರಿಂದಲೇ ಪಡೆದುಕೊಳ್ಳಬೇಕು. ‘ರೆಮ್‌ಡಿಸಿವಿರ್’ ಔಷಧವನ್ನು ಮನೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳಬಾರದು’ ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಲಕ್ಷಣ ರಹಿತ ಹಾಗೂ ಸೌಮ್ಯ ಲಕ್ಷಣಗಳು ಹೊಂದಿದ್ದು, ಮನೆ ಆರೈಕೆ ಅಥವಾ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಇರುವವರಿಗೆ ಪರಿಷ್ಕೃತ ಮಾರ್ಗಸೂಚಿಯನ್ನು ಇಲಾಖೆ ಬಿಡುಗಡೆ ಮಾಡಿದೆ. ‘ಸೋಂಕಿತರು ವೈದ್ಯರು ಸೂಚಿಸುವ ಔಷಧಗಳನ್ನು ಮಾತ್ರ ಸೇವಿಸಬೇಕು. ಆರೋಗ್ಯದಲ್ಲಿ ಏರುಪೇರಾದಲ್ಲಿ ವೈದ್ಯರ ಗಮನಕ್ಕೆ ತಂದು, ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ತಿಳಿಸಲಾಗಿದೆ.

‘ಲಕ್ಷಣಗಳನ್ನು ಆಧರಿಸಿ ಮಾತ್ರೆಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಐವರ್ಮೆಕ್ಟಿನ್ 12 ಎಂ.ಜಿ., ಎಚ್‌ಸಿಕ್ಯೂ, ಫವಿಪಿರಾವಿರ್, ಇನ್ಹಲೇಷನ್ ಬುಡೆಸೊನೈಡ್, ಝಿಂಕ್ 50ಎಂ.ಜಿ., ವಿಟಮಿನ್‌ ಸಿ 500ಎಂ.ಜಿ., ಪ್ಯಾರೆಸಿಟಮಾಲ್ 650ಎಂ.ಜಿ., ಸಿಟ್ರಿಜಿನ್ 10ಎಂ.ಜಿ., ಪ್ಯಾಂಟೊಪ್ರಜೋಲ್ 40ಎಂ.ಜಿ. ಹಾಗೂ ಆ್ಯಂಟಿ ಟ್ಯೂಸಿವ್ ಕಾಫ್ ಸಿರಪ್ ಅನ್ನು ಸೋಂಕಿನ ಲಕ್ಷಣ ಹಾಗೂ ವ್ಯಕ್ತಿಯ ಸ್ಥಿತಿಗತಿ ಅನುಸಾರ ನೀಡಬೇಕಾಗುತ್ತದೆ’ ಎಂದು ವಿವರಿಸಲಾಗಿದೆ.

ಆರೈಕೆಗೆ ಒಳಗಾದವರಿಗೆ ಸೂಚನೆಗಳು
* ಮನೆ ಆರೈಕೆ ಹಾಗೂ ಕೋವಿಡ್ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಳ್ಳುವವರು ವೈದ್ಯರು ಅಥವಾ ವೈದ್ಯಾಧಿಕಾರಿಗಳು ಬರೆದುಕೊಡುವ ಔಷಧಗಳನ್ನು ಮಾತ್ರ ಸೇವಿಸಬೇಕು.
* ಗರಿಷ್ಠ ಡೋಸ್‌ನ ಮಾತ್ರೆಗಳನ್ನು ಪಡೆದರೂ ಜ್ವರ ಕಡಿಮೆಯಾಗದಿದ್ದಲ್ಲಿ ವೈದ್ಯರ ಜತೆಗೆ ಸಮಾಲೋಚನೆ ನಡೆಸಿ, 650 ಮಿ.ಗ್ರಾಂ ಪ್ಯಾರಸಿಟಮಾಲ್‌ ಅನ್ನು ದಿನಕ್ಕೆ ನಾಲ್ಕು ಬಾರಿ ಹಾಗೂ ಸ್ಟೆರಾಯ್ಡ್‌ ಅಲ್ಲದ ಔಷಧವನ್ನು ಪಡೆಯಬೇಕು.
* 7 ದಿನಗಳು ಕಳೆದರೂ ರೋಗ ಲಕ್ಷಣಗಳು ಕಡಿಮೆಯಾಗದಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು.
* ಬಿಸಿ ನೀರಿನಿಂದ ಬಾಯಿಯನ್ನು ಮುಕ್ಕಳಿಸುವ ಜತೆಗೆ ದಿನಕ್ಕೆ ಎರಡು ಬಾರಿ ಆವಿಯನ್ನು ತೆಗೆದುಕೊಳ್ಳಬೇಕು.
* ಅಧಿಕ ರಕ್ತದೊತ್ತಡ, ಮಧುಮೇಹ ಸೇರಿದಂತೆ ವಿವಿಧ ಕೋವಿಡೇತರ ಸಮಸ್ಯೆಗಳಿಗೆ ತೆಗೆದುಕೊಳ್ಳುತ್ತಿರುವ ಮಾತ್ರೆಗಳನ್ನು ಮುಂದುವರಿಸಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು