ಗುರುವಾರ , ಆಗಸ್ಟ್ 5, 2021
29 °C
ಎರಡು ದಿನಗಳ ಅಂತರದಲ್ಲಿ ತಂದೆ– ತಾಯಿ ಸಾವು

ಮಕ್ಕಳ ಆಸರೆ ಕಸಿದ ಕೊರೊನಾ | ‘ಅಂಗವಿಕಲನಾಗಿರುವ ನನಗೆ ದಿಕ್ಕೇ ತೋಚದಾಗಿದೆ’

ಅನಿತಾ ಎಚ್. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಅಂಗವಿಕಲನಾಗಿರುವ ನನಗೆ ಮತ್ತು ನನ್ನ ತಮ್ಮನಿಗೆ ಅಪ್ಪ, ಅಮ್ಮನೇ ಎಲ್ಲ. ಅವರಿಲ್ಲದ ಬದುಕನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಲಕ್ಷಾಂತರ ರೂಪಾಯಿ ವ್ಯಯಿಸಿದರೂ ಅವರನ್ನು ಬದುಕಿಸಿಕೊಳ್ಳಲು ಆಗಲಿಲ್ಲ. ಒಂದೆಡೆ ಬದುಕಿನ ಸವಾಲು, ಇನ್ನೊಂದೆಡೆ ಸಾಲದ ಶೂಲ. ಎಲ್ಲವನ್ನೂ ಹೇಗೆ ನಿಭಾಯಿಸುವುದು ದಿಕ್ಕೇ ತೋಚದಾಗಿದೆ’

ದಾವಣಗೆರೆ ಜಿಲ್ಲೆಯ ತ್ಯಾವಣಿಗೆ ಗ್ರಾಮದಲ್ಲಿ ಕೊರೊನಾದಿಂದ ಮೃತಪಟ್ಟ ಶಿಕ್ಷಕ ಬಿ. ಅಜ್ಜಪ್ಪ (56), ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಹನುಮಮ್ಮ ಅಜ್ಜಪ್ಪ (48) ದಂಪತಿ ಅವರ ಹಿರಿಯ ಪುತ್ರ ದರ್ಶನ್‌ ಅವರ ಮಾತಿದು.

‘ಅಪ್ಪ ಚಿಕ್ಕಗಂಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜತೆಗೆ ಕೋವಿಡ್‌ ಕರ್ತವ್ಯಕ್ಕೂ ಅವರನ್ನು ನಿಯೋಜಿಸಲಾಗಿತ್ತು. ಕೆಲಸದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ದರು. ತಪ್ಪಾದರೆ ಮೇಲಿಂದ ಪ್ರಶ್ನೆ ಮಾಡುತ್ತಾರೆ ಎಂದು ಸ್ವತಃ ಮುತುವರ್ಜಿ ವಹಿಸುತ್ತಿದ್ದರು. ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದ ಅಪ್ಪನಿಗೇ ನೆಗಡಿ, ಕೆಮ್ಮು ಕಾಣಿಸಿಕೊಂಡಾಗ ಮಾಮೂಲಿ ಸಮಸ್ಯೆ ಎಂದು ಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮತ್ತೆ ಕೆಲಸಕ್ಕೆ ಹೋಗುತ್ತಿದ್ದರು. ಒಂದು ದಿನ ರಾತ್ರಿ ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಬೆಡ್‌ ಸಿಗದೆ ಪರದಾಡಬೇಕಾಯಿತು. ಕೊನೆಗೆ ಬಾಪೂಜಿ ಆಸ್ಪತ್ರೆಯಲ್ಲಿ ಬೆಡ್‌ ವ್ಯವಸ್ಥೆಯಾಯಿತು. ನಂತರ ಸಿಟಿ ಮೆಡಿಕಲ್‌ ಆಸ್ಪತ್ರೆಗೂ ಸೇರಿಸಿದೆವು’ ಎಂದು ದರ್ಶನ್‌ ಚಿಕಿತ್ಸೆಗಾಗಿ ಪಟ್ಟ ಪಡಿಪಾಟಲನ್ನುವಿವರಿಸಿದರು.

‘ಆ ಮಧ್ಯೆ ಅಮ್ಮನಿಗೂ ನೆಗಡಿ, ಕೆಮ್ಮು ಕಾಣಿಸಿಕೊಂಡಿತು. ಅವರನ್ನೂ ಅಪ್ಪ ಇದ್ದ ಆಸ್ಪತ್ರೆಗೇ ದಾಖಲಿಸಿದ್ದೆವು. ಆದರೆ, ಒಂದೇ ವಾರದಲ್ಲಿ ಅಮ್ಮ ತೀರಿಕೊಂಡರು. ಅಪ್ಪನನ್ನಾದರೂ ಬದುಕಿಸಿಕೊಳ್ಳೋಣವೆಂದು ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿಗೆ ಕರೆದೊಯ್ದ ಎರಡೇ ದಿನಗಳಲ್ಲಿ ಅಪ್ಪನೂ ತೀರಿಕೊಂಡರು. ಅಪ್ಪ, ಅಮ್ಮನನ್ನು ಬದುಕಿಸಿಕೊಳ್ಳಲಿಕ್ಕಾಗಿ ಸಾಲ ಮಾಡಿ ಲಕ್ಷಾಂತರ ರೂಪಾಯಿ ವ್ಯಯಿಸಿದರೂ ಪ್ರಯೋಜನವಾಗಲಿಲ್ಲ. ಈಗ ದುಡಿಯುವ ಕೈ, ತುತ್ತು ನೀಡುವ ಕೈ ಎರಡನ್ನೂ ಕಳೆದುಕೊಂಡಿದ್ದೇವೆ. ಸದ್ಯ ಚಿಕ್ಕಮ್ಮ (ತಾಯಿ ತಂಗಿ), ದೊಡ್ಡಪ್ಪ (ತಂದೆಯವರ ಅಣ್ಣ) ಜತೆಗಿದ್ದಾರೆ. ಮುಂದೆ ಹೇಗೆಂಬ ಚಿಂತೆ ಕಾಡುತ್ತಿದೆ’ ಎಂದು ದರ್ಶನ್‌ ದುಃಖಿಸಿದರು.

‘ಶಿಕ್ಷಕರಾಗಿದ್ದ ಅಪ್ಪನಿಗೆ ತಮ್ಮ ಮಕ್ಕಳೂ ಚೆನ್ನಾಗಿ ಓದಬೇಕು ಎಂಬ ಆಸೆ ಇತ್ತು. ನಾನು ಮತ್ತು ತಮ್ಮ ಚೇತನ್‌ ಡಿಪ್ಲೊಮಾ ಕೋರ್ಸ್‌ ಪೂರ್ಣಗೊಳಿಸದೇ ಇದ್ದಿದ್ದಕ್ಕೆ ಬೇಸರವೂ ಆಗಿತ್ತು. ಆದರೆ, ನಾನು ಚಿಕ್ಕವನಿರುವಾಗಲೇ ಪೋಲಿಯೊಗೆ ತುತ್ತಾಗಿದ್ದೆ. ಅಪ್ಪನೂ ಕರ್ತವ್ಯದಲ್ಲಿ ಇದ್ದಿದ್ದರಿಂದ ಮನೆಯ ಅಗತ್ಯಗಳಿಗಾಗಿ ತಮ್ಮ ತಿರುಗಾಡುವುದು ಅನಿವಾರ್ಯವಾಗಿತ್ತು. ಹೀಗಾಗಿ ಓದುವ ವಿಷಯವಾಗಿ ನಮ್ಮ ಮೇಲೆ ಎಂದೂ ಒತ್ತಡ ಹೇರಲಿಲ್ಲ. ಕಣ್ಣ ಮುಂದೆ ಚೆನ್ನಾಗಿದ್ದರೆ ಸಾಕು ಎಂದು ಬಯಸುತ್ತಿದ್ದರು. ಅಮ್ಮನೂ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಈ ಹಿಂದಿನ ಅವಧಿಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರು’ ಎಂದು ಸ್ಮರಿಸಿದರು.

ಹನುಮಮ್ಮ ಅವರು ಜೂನ್‌ 7ರಂದು, ಅಜ್ಜಪ್ಪ 9ರಂದು ಮೃತಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು