ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ರೆಡ್ ಅಲರ್ಟ್: ರಾಜ್ಯದ ಏಳು ಜಿಲ್ಲೆಗಳಲ್ಲಿ ಐಸಿಯು ಹಾಸಿಗೆ ಸಂಪೂರ್ಣ ಭರ್ತಿ

Last Updated 7 ಮೇ 2021, 3:57 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ರಾಜ್ಯದ ಹಲವೆಡೆ ಐಸಿಯು ಹಾಸಿಗೆ, ಆಮ್ಲಜನಕ ಕೊರತೆ ತಲೆದೂರಿದೆ. ಇದರ ನಡುವೆ ಏಳು ಜಿಲ್ಲೆಗಳಲ್ಲಿ ಐಸಿಯು ಹಾಸಿಗೆಗಳು ಸಂಪೂರ್ಣ ಭರ್ತಿಯಾಗಿವೆ ಎಂದು ರಾಜ್ಯದ ಕ್ರಿಟಿಕಲ್ ಕೇರ್ ಸಪೋರ್ಟ್ ಯುನಿಟ್ (ಸಿಸಿಎಸ್‌ಯು) ತಿಳಿಸಿದೆ.

ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರತಿದಿನ ಬೆಳಿಗ್ಗೆ ಆಮ್ಲಜನಕ ಸೌಲಭ್ಯದ ಹಾಸಿಗೆ, ಕೋವಿಡ್ ಔಷಧಗಳು, ಐಸಿಯು ಹಾಸಿಗೆಗಳ ಸಂಖ್ಯೆ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ವೆಂಟಿಲೇಟರ್‌ಗಳ ಮಾಹಿತಿಯನ್ನು ತೀವ್ರ ನಿಗಾ ತಜ್ಞರನ್ನು ಒಳಗೊಂಡಿರುವ ಸಿಸಿಎಸ್‌ಯು ತಂಡ ಸಂಗ್ರಹಿಸುತ್ತಿರುತ್ತದೆ.

ಬೆಂಗಳೂರು, ಮೈಸೂರಿನ ಕೆ.ಆರ್.ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಐಸಿಯು ಹಾಸಿಗೆಗಳು ಸಂಪೂರ್ಣ ಭರ್ತಿಯಾಗಿವೆ. ಉಳಿದಂತೆ ಧಾರವಾಡ, ಮಂಡ್ಯ, ಹಾಸನ ಮತ್ತು ತುಮಕೂರು ಜಿಲ್ಲೆಗಳು ಹಾಸಿಗೆಗಳ ಲಭ್ಯತೆ ಸಮರ್ಪಕವಾಗಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರು ಹಾಗೂ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಕೇವಲ ಎರಡು ಐಸಿಯು ಹಾಸಿಗೆಗಳು ಲಭ್ಯವಿವೆ.

ಗುರುವಾರ ಸಿಸಿಎಸ್‌ಯು ನೀಡಿರುವ ವರದಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಎಂದರೆ ತಪ್ಪಾಗುವುದಿಲ್ಲ. ‘ರಾಜ್ಯದ ಇತರ ಜಿಲ್ಲೆಗಳಲ್ಲೂ ಮುಂದಿನ ವಾರದಲ್ಲಿ ಐಸಿಯು ಹಾಸಿಗೆ, ವೆಂಟಿಲೇಟರ್‌ಗಳ ಕೊರತೆ ಮತ್ತಷ್ಟು ತಲೆದೂರುವ ಸಾಧ್ಯತೆಗಳಿವೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆರೋಗ್ಯ ಸಚಿವ ಡಾ.ಸುಧಾಕರ್ ಪ್ರತಿನಿಧಿಸುವ ಚಿಕ್ಕಬಳ್ಳಾಪುರ, ಬಳ್ಳಾರಿ, ಮಂಡ್ಯ, ತುಮಕೂರು, ಚಾಮರಾಜನಗರ, ಉಡುಪಿಯ ಕುಂದಾಪುರದ ಜಿಲ್ಲಾಸ್ಪತ್ರೆಗಳಲ್ಲಿ ಆಮ್ಲಜನಕ ಸೌಲಭ್ಯದ ಹಾಸಿಗೆಗಳ ಕೊರತೆ ಹೆಚ್ಚಾಗಿದೆ. ಈ ಆಸ್ಪತ್ರೆಗಳಿಗೆ 20ರಿಂದ 100 ವೆಂಟಿಲೇಟರ್‌ಗಳ ಅಗತ್ಯತೆ ಇದೆ ಎಂದು ಹೇಳಲಾಗಿದೆ.

‘ಐಸಿಯು ಹಾಸಿಗೆಗಳ ಕೊರತೆ ಸಂಬಂಧ ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇದು ಸಾಕಷ್ಟು ಆತಂಕಕಾರಿ ಸಂಗತಿ’ ಎಂದು ಸಿಸಿಎಸ್‌ಯು ಮೂಲಗಳು ತಿಳಿಸಿವೆ.

ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಚಿಕ್ಕಮಗಳೂರು, ಕಾರವಾರ ಜಿಲ್ಲಾಸ್ಪತ್ರೆಗಳಲ್ಲಿ ಐಸಿಯು ಹಾಸಿಗೆಗಳ ಲಭ್ಯತೆ ಉತ್ತಮವಾಗಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT