ಭಾನುವಾರ, ಮೇ 29, 2022
31 °C

ವೈದ್ಯರ ವಿರುದ್ಧ ವೃಥಾ ಆರೋಪ: ಹೈಕೋರ್ಟ್ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ’ಧಾವಂತದ ಜಗತ್ತಿನಲ್ಲಿರುವ ಜನರಿಗೆ, ಸಣ್ಣ ಪುಟ್ಟ ಅವಕಾಶ ಸಿಕ್ಕರೂ ಸಾಕು ವೈದ್ಯರ ವಿರುದ್ಧ ಇಲ್ಲಸಲ್ಲದ ಆಪಾದನೆ ಹೊರಿಸುವ ಕೀಳು ಅಭಿರುಚಿ ಬೆಳೆಯುತ್ತಿದೆ‘ ಎಂದು ಹೈಕೋರ್ಟ್‌ ಕಳವಳ ವ್ಯಕ್ತಪಡಿಸಿದೆ. 

’ವೈದ್ಯರ ನಿರ್ಲಕ್ಷ್ಯದಿಂದ ತಾಯಿ ಸಾವನ್ನಪ್ಪಿದ್ದಾರೆ‘ ಎಂದು ಆರೋಪಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಅಂಕಿ ಅಂಶ ಆಧರಿಸಿ ಹೇಳುವುದಾದರೆ, ವೈದ್ಯರು, ಅಧಿಕಾರಿಗಳ ವಿರುದ್ಧ ದಾಖಲಾಗುವ ಮೊಕದ್ದಮೆಗಳಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಹುರುಳೇ ಇರುವುದಿಲ್ಲ‘ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. 

’ಬಹುತೇಕ ರೋಗಿಗಳು ವೈದ್ಯರ ಔಷಧಿ ಉಪಚಾರಗಳಿಂದ ಗುಣಮುಖರಾಗುತ್ತಾರೆ. ಆದರೆ,  ಕೆಲವೇ ವ್ಯಕ್ತಿಗಳು ಇದಕ್ಕೆ ಅಪವಾದವಾಗಿ ಸಾವನ್ನಪ್ಪುತ್ತಾರೆ. ಅಂತಹ ಪ್ರಕರಣಗಳಲ್ಲಿ ರೋಗಿಗೆ ಉಂಟಾಗುವ ಎಲ್ಲ ತೊಂದರೆಗಳೂ ವೈದ್ಯಕೀಯ ನಿರ್ಲಕ್ಷ್ಯದಿಂದ ಆಗುತ್ತವೆ ಎಂದು ಭಾವಿಸುವುದು ಸರಿಯಲ್ಲ. ನಿಜವಾಗಿಯೂ ವೈದ್ಯರೂ ನಿರ್ಲಕ್ಷ್ಯ ತೋರಿದ್ದಾರೆ ಎಂದು ಕಂಡು ಬಂದಾಗ ಕ್ರಮ ಕೈಗೊಳ್ಳುವುದು ಸೂಕ್ತ‘  ಎಂದು ನ್ಯಾಯಪೀಠ ತೀರ್ಪಿನಲ್ಲಿ ತಿಳಿಸಿದೆ.‌

’ಈ ಪ್ರಕರಣದಲ್ಲಿ ಮೃತ ಮಹಿಳೆ ಆ್ಯಂಜಿಯೊಪ್ಲಾಸ್ಟಿ ಮಾಡಿಸಿಕೊಳ್ಳುವ ಮುನ್ನ ಜೀವನದ ಸಂಧ್ಯಾಕಾಲದಲ್ಲಿ ಎಲ್ಲರ ಪಾಲಿನ ಅನಿರೀಕ್ಷಿತ ಅತಿಥಿಗಳು ಎನಿಸಿದಂತಹ ಮಧುಮೇಹ, ನರರೋಗ ಸೇರಿದಂತೆ ಇತರೆ ದೈಹಿಕ ಸಮಸ್ಯೆಗಳಿಂದ ಬಳಲುತ್ತಿದ್ದರು. ಇದು ಮೇಲ್ನೋಟಕ್ಕೆ ದಾಖಲೆಗಳನ್ನು ಪರಿಶೀಲಿಸಿದಾಗ ತಿಳಿದು ಬರುತ್ತದೆ‘ ಎಂದು ನ್ಯಾಯಪೀಠ ವಿವರಿಸಿದೆ.

ಹಲಸೂರಿನ 65 ವರ್ಷದ ವೃದ್ಧೆ ಆ್ಯಂಜಿಯೊಪ್ಲಾಸ್ಟಿ ಮಾಡಿಸಿಕೊಂಡ ಆರು ತಿಂಗಳ ನಂತರ ಸಾವನ್ನಪ್ಪಿದ್ದರು. ’ಇದು ಆ್ಯಂಜಿಯೊಪ್ಲಾಸ್ಟಿ ನೆರವೇರಿಸಿದ ವೈದ್ಯರ ವೃತ್ತಿಯ ನಿರ್ಲಕ್ಷ್ಯ‘ ಎಂದು ಆರೋಪಿಸಿ ಮೃತ ವೃದ್ಧೆಯ ಪುತ್ರ ಕರ್ನಾಟಕ ವೈದ್ಯಕೀಯ ಮಂಡಳಿಗೆ ದೂರು ಸಲ್ಲಿಸಿದ್ದರು.

ವೈದ್ಯಕೀಯ ಮಂಡಳಿ, ’ಈ ಪ್ರಕರಣದಲ್ಲಿ ವೈದ್ಯರ ವೃತ್ತಿದೋಷವೇ ಸಾವಿಗೆ ಕಾರಣ‘ ಎಂದು ತೀರ್ಮಾನಿಸಿ ಶಿಕ್ಷೆಯ ಎಚ್ಚರಿಕೆ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಡಾ.ಗಣೇಶ್ ನಾಯಕ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು