ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಸಾವು ಅ‘ಗಣಿತ’: 2 ವರ್ಷಗಳಲ್ಲಿ ಸತ್ತವರು 11.25 ಲಕ್ಷ!

ಕೋವಿಡ್‌ನಿಂದ ಸತ್ತವರೆಷ್ಟು– ತಪ್ಪು ಲೆಕ್ಕ ಕೊಟ್ಟ ಸರ್ಕಾರ?
Last Updated 25 ಆಗಸ್ಟ್ 2021, 22:15 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯಕ್ಕೆ ಕೋವಿಡ್ ಕಾಲಿಟ್ಟ ಬಳಿಕ ಮರಣ ಪ್ರಮಾಣ ಭಾರಿ ಹೆಚ್ಚಳವಾಗಿದೆ. ಎರಡು ವರ್ಷಗಳಲ್ಲಿ 11.25 ಲಕ್ಷ ಮಂದಿ ಸಾವಿಗೀಡಾಗಿದ್ದು, ಇವರಲ್ಲಿ ಕೋವಿಡ್‌ನಿಂದಾಗಿ ಮೃತಪಟ್ಟವರು ಎಷ್ಟು ಎಂಬ ಜಿಜ್ಞಾಸೆ ನಡೆದಿದೆ.

ರಾಜ್ಯದಲ್ಲಿ ನಾನಾ ಕಾರಣಗಳಿಂದ ಮೃತಪಡುವವರ ವಾರ್ಷಿಕ ಸರಾಸರಿ ಲೆಕ್ಕಕ್ಕೆ ಹೋಲಿಸಿದರೆ, ಈ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ ಎಂಬುದನ್ನು ಸರ್ಕಾರದ ದಾಖಲೆಗಳೇ ಹೇಳುತ್ತವೆ.

ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆಯನ್ನು ಅಲ್ಲಿನ ಸರ್ಕಾರಗಳು ಮುಚ್ಚಿಟ್ಟಿವೆ ಎಂಬ ವರದಿಗಳು ಚರ್ಚೆಗೆ ಗ್ರಾಸವಾಗಿದ್ದವು. ಕರ್ನಾಟಕ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆರಾಜ್ಯ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಸಲ್ಲಿಸಿರುವ ಮರಣ ದಾಖಲೆಯು ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಅಗಣಿತ ಸಾವುಗಳ ಅಂಕಿ ಅಂಶವನ್ನು ಈ ದಾಖಲೆ ಹೊರಗೆಡಹಿದ್ದು, ಕರ್ನಾಟಕದಲ್ಲೂ ಕೋವಿಡ್‌ನಿಂದ ಸಾವಿಗೀಡಾದವರ ಸಂಖ್ಯೆ ‘ರಹಸ್ಯ’ವಾಗಿಯೇ ಉಳಿದಿದೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

2018 ರಲ್ಲಿ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 4,83,511 ಇತ್ತು. 2019 ರಲ್ಲಿ (ಕೋವಿಡ್‌ ಮೊದಲ ಅಲೆ) ಸಾವಿನ ಸಂಖ್ಯೆ 5,08,584 ಕ್ಕೆ ಏರಿತು. 2020 ರಲ್ಲಿ 5,51,808 ಕ್ಕೆ ಮುಟ್ಟಿತು. 2021ರ ಜುಲೈವರೆಗೆ 65,530 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಕೋವಿಡ್‌ನಿಂದ ಮೃತಪಟ್ಟವರು ಎಷ್ಟು ಮತ್ತು ಇತರ ಕಾರಣಗಳಿಗೆ ನಿಧನರಾದವರ ಸಂಖ್ಯೆ ಎಷ್ಟು ಎಂಬ ಮಾಹಿತಿಯನ್ನು ಸರ್ಕಾರ ಕರಾರುವಾಕ್ಕಾಗಿ ಬಹಿರಂಗಪಡಿಸಬೇಕು ಎಂಬ ಒತ್ತಾಯವನ್ನು ವಿರೋಧ ಪಕ್ಷಗಳು ಮಾಡಿವೆ.

ಆರೋಗ್ಯ ಇಲಾಖೆ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಈವರೆಗೆ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 37,184 ಮಾತ್ರ. ಕೋವಿಡ್‌ ಪೂರ್ವ ಅಂದರೆ 2018 ಸಾಮಾನ್ಯ ವರ್ಷವಾಗಿತ್ತು. ಆ ವರ್ಷ ಸತ್ತವರ ಸಂಖ್ಯೆಗಿಂತ ನಂತರದ ವರ್ಷ ಅಂದರೆ 2019 ರಲ್ಲಿ ಮೃತರ ಸಂಖ್ಯೆಯಲ್ಲಿ 25,073 ಹೆಚ್ಚಳ ಕಂಡು ಬಂದಿದೆ. 2020 ರಲ್ಲಿ ಮೃತಪಟ್ಟವರ ಸಂಖ್ಯೆ (2019 ಕ್ಕೆ ಹೋಲಿಸಿದಾಗ) 43,224ದಷ್ಟು ಅಧಿಕವಾಗಿರುವುದು ಅಂಕಿಅಂಶಗಳಿಂದ ಗೊತ್ತಾಗಿದೆ.

ಕೋವಿಡ್‌ ಪೂರ್ವ ಮತ್ತು ನಂತರದ ವರ್ಷಗಳ ರಾಜ್ಯದಲ್ಲಿನ ಮರಣದ ಅಂಕಿಯನ್ನು ಸಾಂಖ್ಯಿಕ ನಿರ್ದೇಶನಾಲಯದ ಜನನ–ಮರಣಗಳ ಮುಖ್ಯ ನೋಂದಣಾಧಿಕಾರಿ ಅವರು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸಲ್ಲಿಸಿದ್ದಾರೆ. ಅದರ ಅನ್ವಯ ಕೋವಿಡ್‌ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 11,25,922 ಮಂದಿ ಸಾವಿಗೀಡಾಗಿದ್ದಾರೆ. 2019 ರಿಂದ 2022 ರ ಜುಲೈವರೆಗೆ ಮರಣ ಪ್ರಮಾಣದಲ್ಲಿ ಗಣನೀಯ ಏರಿಕೆ ಆಗಿದೆ. ಆ ಸಂದರ್ಭದಲ್ಲಿ ಲೆಕ್ಕವಿಲ್ಲದಷ್ಟು ಶವಗಳನ್ನು ಸುಡಲಾಗಿತ್ತು. ಬೆಂಗಳೂರಿನಲ್ಲಂತೂ ಚಿತಾಗಾರ, ಸ್ಮಶಾನಗಳಲ್ಲದೇ ಹೊರವಲಯದಲ್ಲೂ ತಾತ್ಕಾಲಿಕ ಚಿತಾಗಾರಗಳನ್ನು ನಿರ್ಮಿಸಲಾಗಿತ್ತು.

ಅಷ್ಟೂ ಸಾವುಗಳು ಕೋವಿಡ್‌ನಿಂದ ಸಂಭವಿಸಿದ್ದು ಅಲ್ಲದಿದ್ದರೂ, ಕೋವಿಡ್‌ ಸಾವಿನ ಸಂಖ್ಯೆ ಸರ್ಕಾರ ಹೇಳುತ್ತಿರುವುದಕ್ಕಿಂತ ಅಧಿಕ ಎಂಬುದನ್ನು ಈ ಅಂಕಿಅಂಶಗಳಿಂದ ಗೊತ್ತಾಗುತ್ತದೆ. ವಾಸ್ತವದ ಬಗ್ಗೆ ಸಾವಿನ ನಿಖರ ಲೆಕ್ಕ ಮುಂದಿಡಬೇಕು ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷ ರಾಮಲಿಂಗಾರೆಡ್ಡಿ ಆಗ್ರಹಿಸಿದ್ದಾರೆ.

‘ಅಂಕಿಅಂಶ ಮುಚ್ಚಿಡುವ ಉದ್ದೇಶ ಇಲ್ಲ’

‘ನಮ್ಮ ಸರ್ಕಾರಕ್ಕೆ ಕೊರೊನಾ ಅಂಕಿಅಂಶಗಳನ್ನು ಮುಚ್ಚಿಡುವ ಉದ್ದೇಶ ಇಲ್ಲ. ಅದು ಸಾಧ್ಯವೂ ಇಲ್ಲ. ದಾಖಲೆಯ ಮೂಲ ಮತ್ತು ಅದರ ಸತ್ಯಾಸತ್ಯತೆ ನನಗೆ ತಿಳಿದಿಲ್ಲ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಪ್ರತಿಕ್ರಿಯಿಸಿದ್ದಾರೆ.

‘ಸುಮಾರು ನಾಲ್ಕೈದು ತಿಂಗಳ ಹಿಂದೆ ವಿರೋಧ ಪಕ್ಷದ ಕೆಲ ನಾಯಕರು ಇದೇ ರೀತಿಯ ಆರೋಪ ಮಾಡಿದ್ದರು. ಆ ಸಂದರ್ಭದಲ್ಲಿ ಅಂಕಿಅಂಶಗಳು ಇ-ಜನ್ಮ ತಂತ್ರಾಂಶದಲ್ಲಿ ತಾತ್ಕಾಲಿಕವಾಗಿ ದಾಖಲಿಸಲಾಗಿದ್ದ ದತ್ತಾಂಶವಾಗಿತ್ತು. ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಹೊರಡಿಸಿರುವ ಮಾರ್ಗಸೂಚಿಗಳ ಅನುಸಾರ ಪರಿಷ್ಕರಣೆ ನಡೆದು ಅಂತಿಮ ಅಂಕಿಅಂಶಗಳ ಪ್ರಕಟಣೆ ಇನ್ನೂ ಬಾಕಿಯಿರುವಾಗಲೇ ವೃಥಾ ಆರೋಪ ಮಾಡಿದ್ದರು’ ಎಂದರು.

‘ಸಾವಿನ ಸಂಖ್ಯೆ ಮುಚ್ಚಿಟ್ಟಿದೆ’

ರಾಜ್ಯ ಸರ್ಕಾರ ಸಾವಿನ ಸಂಖ್ಯೆ ಮುಚ್ಚಿಟ್ಟಿದೆ ಎಂಬುದನ್ನು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇವೆ. ಸತ್ಯವನ್ನು ಮುಚ್ಚಿಡುವುದರಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ. ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸಭೆಗಳಲ್ಲೂ ಇದೇ ವಿಚಾರವಾಗಿ ಸರ್ಕಾರಕ್ಕೆ ಮಾಹಿತಿ ಕೇಳಿದ್ದೆವು. ಸರಿಯಾದ ಮಾಹಿತಿಗಳನ್ನು ಅಧಿಕಾರಿಗಳು ನೀಡುತ್ತಿರಲಿಲ್ಲ. ಈಗಲಾದರೂ ಕೋವಿಡ್‌ನಿಂದ ಮೃತಪಟ್ಟವರ ನಿಖರ ಸಂಖ್ಯೆಯನ್ನು ಹೇಳಬೇಕು. ಗುಜರಾತ್‌ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೋವಿಡ್‌ ಸಾವಿನ ಸಂಖ್ಯೆಯನ್ನು ಮುಚ್ಚಿಡಲಾಗಿತ್ತು. ರಾಜ್ಯದಲ್ಲೂ ಅದೇ ರೀತಿ ಆಗಿದೆ ಎಂಬುದನ್ನು ಅಂಕಿಅಂಶಗಳೇ ಸಾರುತ್ತವೆ. ಎರಡು ವರ್ಷಗಳಲ್ಲಿ 11,25,922 ಸಾವು ಕಡಿಮೆ ಸಂಖ್ಯೆಯೇನಲ್ಲ.

ರಾಮಲಿಂಗಾರೆಡ್ಡಿ, ಅಧ್ಯಕ್ಷ, ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT