ಮಂಗಳವಾರ, ಜೂನ್ 22, 2021
24 °C
ನಾವೆಷ್ಟು ಸುರಕ್ಷಿತ?

ಗಾಳಿಯಲ್ಲಿ ವೈರಾಣು: ಸೋಂಕಿತರು ಹಾಡಿದರೂ, ಮಾತನಾಡಿದರೂ ಹರಡುತ್ತದೆ ಸೋಂಕು!

ಎಸ್ ರವಿಪ್ರಕಾಶ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ವೈರಾಣುಗಾಳಿಯಲ್ಲೂ ತೇಲುತ್ತವೆ ಎಂದು ಇತ್ತೀಚಿನ ವೈಜ್ಞಾನಿಕ ಸಂಶೋಧನೆಯೊಂದು ಪ್ರತಿಪಾದಿಸಿದೆ. ಇದರಿಂದಾಗಿ ಮನೆ, ಕಟ್ಟಡ, ಕೋವಿಡ್‌ ಆಸ್ಪತ್ರೆಗಳು, ಕೋವಿಡ್‌ ಆರೈಕೆ ಕೇಂದ್ರಗಳ ಸುರಕ್ಷತೆಯ ಬಗ್ಗೆಯೇ ಈಗ ಸಂದೇಹ ಮೂಡಲಾರಂಭಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಪ್ರಾಯೋಜಿತ ‘ಸಾರ್ಸ್‌ ಕೋವಿಡ್‌–2’ ವೈರಾಣು ಕುರಿತು ವೈಜ್ಞಾನಿಕ ಅಧ್ಯಯನ ನಡೆದಿದೆ. ಅಮೆರಿಕಾ, ಯುಕೆ, ಕೆನಡಾದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳು ಈ ಅಧ್ಯಯನದಲ್ಲಿ ಭಾಗಿಯಾಗಿದ್ದು, ದ ಲಾನ್ಸೆಟ್‌ ಸೇರಿ ವಿಶ್ವದ ಪ್ರತಿಷ್ಠಿತ ಮೆಡಿಕಲ್ ಜರ್ನಲ್‌ಗಳಲ್ಲಿ ಇದರ ವರದಿ ಪ್ರಕಟವಾಗಿದೆ.

ಅಧ್ಯಯನದ ಪ್ರಕಾರ, ‘ಆಸ್ಪತ್ರೆ, ಪ್ರಯೋಗಾಲಯಗಳು, ಸ್ಕ್ಯಾನಿಂಗ್‌ ಕೇಂದ್ರಗಳೂ ತೇಲುವ ವೈರಾಣು ಸೋಂಕಿನಿಂದ ಹೊರತಾಗಿಲ್ಲ. ಸಾರ್ವಜನಿಕ ಸ್ಥಳಗಳು, ಮನೆಗಳು, ಅಪಾರ್ಟ್‌ಮೆಂಟ್‌ಗಳಲ್ಲಿರುವ ಜನರೂ ಈ ವೈರಸ್‌ನಿಂದ ಬಚಾವಾಗುವುದು ಕಷ್ಟವಾಗಿದೆ’.

ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಹೊರಬೀಳುವ ಹನಿಗಳಲ್ಲಿ ಈ ವೈರಾಣುಗಳು ಇರುತ್ತವೆ. ಅವು ಗಾಳಿಯಲ್ಲಿ ತೇಲುವುದಿಲ್ಲ ಎಂದೇ ಭಾವಿಸಲಾಗಿತ್ತು. ಆದರೆ, ಹೊಸ ಅಧ್ಯಯನ ಪ್ರಕಾರ, ಈ ವೈರಾಣುಗಳು ಗಾಳಿಯಲ್ಲೂ ತೇಲುತ್ತವೆ. ಸಕ್ರಿಯ ವೈರಾಣುಗಳ ಜೀವಿತಾವಧಿ 3 ಗಂಟೆಗಳು. ಸೋಂಕಿತ ವ್ಯಕ್ತಿ ಕೆಮ್ಮಿದರೆ, ಸೀನಿದರೆ ಮಾತ್ರವಲ್ಲ, ಮಾತನಾಡಿದರೆ, ಯಾರ ಮುಂದಾದರೂ ಕೂಗಾಡಿದರೆ ಅಥವಾ ಹಾಡಿದರೂ ವೈರಾಣುಗಳು ಹೊಮ್ಮುತ್ತವೆ ಎನ್ನುವುದು ಅಧ್ಯಯನದ ಸಾರಾಂಶ.

ವೈರಾಣುಗಳು ಈ ಮೊದಲು ಭಾವಿಸಿದ್ದಕ್ಕಿಂತಲೂ ಅತ್ಯಂತ ಸೂಕ್ಷ್ಮವಾಗಿದ್ದು, ಮಾಸ್ಕ್‌ ಧರಿಸಿದ್ದರೂ ಅದರ ಸಂದಿ ಮೂಲೆಯಿಂದಲೂ ಪ್ರವೇಶಿಸುವ ಚಾಕಚಕ್ಯತೆ ಹೊಂದಿವೆ. ಇವುಬಾಯಿ, ಮೂಗು, ಕಣ್ಣುಗಳ ಮೂಲಕದೇಹದೊಳಗೆ ಪ್ರವೇಶಿಸಬಲ್ಲವು. ಆದ್ದರಿಂದ, ಹೊರಗೆ ಹೋಗುವಾಗ ಮಾತ್ರವಲ್ಲ ಮನೆಯ ಒಳಗೆ ಇದ್ದಾಗಲೂ ಮಾಸ್ಕ್‌ ಧರಿಸಬೇಕು. ಹೊರಗೆ ಹೋಗುವಾಗ ಡಬ್ಬಲ್‌ ಮಾಸ್ಕ್‌ ಹಾಕಿಕೊಳ್ಳುವುದು ಸೂಕ್ತ ಎನ್ನುತ್ತಾರೆ ವಿಜ್ಞಾನಿಗಳಾದ ಹೆನಗನ್ ಸಿ ಮತ್ತು ಸ್ಪೆನ್ಸರ್‌.

ಮನೆ, ಕಚೇರಿಗಳು ಅಥವಾ ಇತರ ಕಟ್ಟಡಗಳ ಒಳಗೆ ಸೋಂಕಿತ ವ್ಯಕ್ತಿಯಿಂದ ಹರಡುವ (ಗಾಳಿಯಲ್ಲಿ ತೇಲುವ) ವೈರಾಣುಗಳಿಂದ ರಕ್ಷಣೆ ಪಡೆಯಲು ಕಟ್ಟುನಿಟ್ಟಾದ ವ್ಯವಸ್ಥೆ ಮಾಡಿಕೊಳ್ಳಬೇಕು. ಮಾಸ್ಕ್‌ ಹಾಕಿಕೊಳ್ಳಬೇಕು, ಸ್ವಚ್ಛ ಗಾಳಿ ಸರಾಗವಾಗಿ ಹರಿದಾಡಬೇಕು (ಹವಾ ನಿಯಂತ್ರಿತವಲ್ಲ), ಏರ್‌ ಫಿಲ್ಟರ್‌ ಇಟ್ಟುಕೊಳ್ಳಬೇಕು. ವಿಶೇಷವಾಗಿ ಮುಂಚೂಣಿಯಲ್ಲಿರುವ ಆರೋಗ್ಯಕ್ಕೆ ಸಂಬಂಧಿಸಿದ ಕೋವಿಡ್‌ ವಾರಿಯರ್ಸ್‌ಗಳು ಉನ್ನತ ಗುಣಮಟ್ಟದ ಮಾಸ್ಕ್‌ಗಳನ್ನೇ ಧರಿಸಿಕೊಳ್ಳಬೇಕು.

ಸಾಮಾನ್ಯವಾಗಿ ದೊಡ್ಡ ಸಮಾವೇಶಗಳು, ಮದುವೆಗಳು, ಸಭೆಗಳು ಮಾತ್ರ ಅತಿಹೆಚ್ಚು ಸೋಂಕು ಹರಡುವ ಸ್ಥಳಗಳೆಂದು ಎಂದು ಭಾವಿಸಲಾಗಿತ್ತು. ಆದರೆ, ಕೊಠಡಿಗಳಲ್ಲಿ ಸಂಭಾಷಣೆ ನಡೆಸಿದಾಗ, ಸಂಗೀತ ಕಚೇರಿಗಳು, ಕ್ರೂಸ್‌ ಶಿಪ್‌, ಪ್ರಾಣಿ ವಧಾಗಾರ, ಹೋಂ ಕೇರ್‌ ಸೆಂಟರ್‌, ಕಚೇರಿಗಳಲ್ಲೂ ಸೂಪರ್‌ ಸ್ಪ್ರೆಡ್‌ ಆಗುತ್ತವೆ. ಆರು ಅಡಿಗಿಂತ ಹಲವುಪಟ್ಟು ದೂರ ಇದ್ದವರಿಗೂ ಸೋಂಕು ತಗುಲಿದೆ ಎನ್ನುತ್ತಾರೆ ಹೆನಗನ್.

ಈ ಹೊಸ ಮಾಹಿತಿಯಿಂದ ಕೋವಿಡ್‌ ಆಸ್ಪತ್ರೆಗಳು, ಕೋವಿಡ್‌ ಕೇರ್‌ ಸೆಂಟರ್‌ಗಳು, ಪ್ರಯೋಗಾಲಯಗಳನ್ನು ಹೇಗೆ ಇನ್ನಷ್ಟು ಸುರಕ್ಷಿತಗೊಳಿಸಬೇಕು ಎಂಬ ಬಗ್ಗೆ ಕೋವಿಡ್‌ ತಜ್ಞರು ಚಿಂತನೆ ನಡೆಸಿದ್ದಾರೆ. ಏಕೆಂದರೆ ಈ ಅಧ್ಯಯನದ ಪ್ರಕಾರ, ಆಸ್ಪತ್ರೆಗಳ ಏರ್‌ಫಿಲ್ಟರ್‌ಗಳಲ್ಲಿ ಮತ್ತು ಕಟ್ಟಡಗಳ ಗಾಳಿ ಹೊರ ಹೋಗುವ ಕೊಳವೆಗಳಲ್ಲಿ ವೈರಸ್‌ಗಳು ಪತ್ತೆಯಾಗಿದ್ದವು.

ಇದನ್ನು (ಗಾಳಿಯಲ್ಲಿ ವೈರಸ್‌ ತೇಲುವಿಕೆ) ದೃಢಪಡಿಸಲು ಇನ್ನಷ್ಟು ಅಧ್ಯಯನಗಳು ನಡೆಯಬೇಕು ಎಂದೂ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಸಿ.ಟಿ ಸ್ಕ್ಯಾನ್‌ ಕೇಂದ್ರಗಳೂ ‘ಹಂಚುತ್ತವೆ’
ಕೋವಿಡ್‌ ಪರೀಕ್ಷೆಗೆ ಆರ್‌ಟಿಪಿಸಿಆರ್‌ ಪರೀಕ್ಷೆಯ ಬಳಿಕವೂ ಹೆಚ್ಚಿನ ದೃಢೀಕರಣಕ್ಕೆ ಸಿ.ಟಿ ಸ್ಕ್ಯಾನ್‌ ಮತ್ತು ಕೋವಿಡ್‌ ಪ್ಯಾನಲ್‌ ಪರೀಕ್ಷೆ ಮಾಡಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಸಿ.ಟಿ ಸ್ಕ್ಯಾನ್ ಕೊಠಡಿ ಮತ್ತು ಯಂತ್ರಗಳನ್ನು ಸ್ಯಾನಿಟೈಸ್‌ ಮಾಡದಿದ್ದರೆ ಕೊರೊನಾ ಸೋಂಕು ಹರಡುತ್ತದೆ.

ಪರೀಕ್ಷೆಗೆ ಜನ ಮುಗಿ ಬೀಳುತ್ತಿರುವುದರಿಂದ ಒಬ್ಬ ವ್ಯಕ್ತಿಯ ಪರೀಕ್ಷೆಯ ಬಳಿಕ ಸ್ಯಾನಿಟೈಸ್‌ ಮತ್ತಿತರ ಸುರಕ್ಷಾ ಕ್ರಮಗಳನ್ನು ಕೈಗೊಂಡು ಮತ್ತೊಬ್ಬ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸುತ್ತಿಲ್ಲ. ಇದರಿಂದಾಗಿ ಸೋಂಕು ಹರಡುತ್ತಿದೆ ಎನ್ನುತ್ತಾರೆ ವೈದ್ಯರು.

ಕೋವಿಡ್‌ ಪರೀಕ್ಷೆಗೆ ಪ್ರತ್ಯೇಕ ಸಿ.ಟಿ.ಸ್ಕ್ಯಾನ್‌ ಯಂತ್ರ ಇಡುವುದು ಸೂಕ್ತ. ಇತರ ರೋಗ ಲಕ್ಷಣ ಇದ್ದವರಿಗೂ ಒಂದೇ ಯಂತ್ರದಲ್ಲಿ ಪರೀಕ್ಷೆ ನಡೆಸಿದರೆ, ಕೋವಿಡ್‌ ಇಲ್ಲದವರಿಗೂ ಸೋಂಕು ತಗಲುತ್ತದೆ ಎನ್ನುತ್ತಾರೆ ಹಿರಿಯ ಲ್ಯಾಬ್‌ ಟೆಕ್ನಿಷಿಯನ್‌ ಸದಾನಂದ ಪೈ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು