ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಕಾಯಿಲೆ ತಂದ ಪೋಷಕರ ಮನೆ ಆರೈಕೆ!

ಕೋವಿಡ್ ಎರಡನೇ ಅಲೆಯಲ್ಲಿ 2 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಸೋಂಕು
Last Updated 20 ಜೂನ್ 2021, 16:27 IST
ಅಕ್ಷರ ಗಾತ್ರ

ಬೆಂಗಳೂರು: ಶಾಲಾ– ಕಾಲೇಜುಗಳು ಬಾಗಿಲು ಮುಚ್ಚಿದ್ದರೂ ಕೋವಿಡ್ ಎರಡನೇ ಅಲೆಯಲ್ಲಿ ಈಗಾಗಲೇ 2 ಲಕ್ಷಕ್ಕೂ ಅಧಿಕ ಮಕ್ಕಳು ಕೋವಿಡ್ ಪೀಡಿತರಾಗಿದ್ದಾರೆ. ಮನೆಯ ಮಟ್ಟದಲ್ಲಿ ಕಾಯಿಲೆಯು ವೇಗವಾಗಿ ಹರಡಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ವೈದ್ಯಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

ಕೋವಿಡ್‌ ಕಾಯಿಲೆಯು ಎಲ್ಲ ವಯೋಮಾನದವರನ್ನೂ ಕಾಡಿದೆ. ಮೊದಲ ಅಲೆಯಲ್ಲಿ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಅಸ್ವಸ್ಥರಾಗಿದ್ದರು. ಎರಡನೇ ಅಲೆಯಲ್ಲಿ ಮಧ್ಯ ವಯಸ್ಕರು ಅಧಿಕ ಸಂಖ್ಯೆಯಲ್ಲಿ ಇದರ ತೀವ್ರತೆ ಎದುರಿಸಿದ್ದಾರೆ. ನಿರೀಕ್ಷಿತ ಕೋವಿಡ್ ಮೂರನೇ ಅಲೆಯಲ್ಲಿ ವೈರಾಣು ಮಕ್ಕಳಿಗೆ ಹೆಚ್ಚಿನ ಅಪಾಯವನ್ನು ತಂದೊಡ್ಡಲಿದೆ ಎನ್ನಲಾಗಿದೆ. ಇದಕ್ಕೆ ಪೂರಕ ಎಂಬಂತೆ ಡಾ. ದೇವಿಪ್ರಸಾದ್ ಶೆಟ್ಟಿ ನೇತೃತ್ವದ 18 ಮಂದಿ ತಜ್ಞ ವೈದ್ಯರ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ 3.4 ಲಕ್ಷ ಮಕ್ಕಳು ಸೋಂಕಿತರಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಮೊದಲ ಅಲೆಯಲ್ಲಿ 94 ಸಾವಿರ ಮಕ್ಕಳು ಸೋಂಕಿತರಾಗಿದ್ದರು. ಮರಣ ಪ್ರಮಾಣ ದರವು ಶೇ 0.1 ರಷ್ಟಿತ್ತು. ಎರಡನೇ ಅಲೆಯಲ್ಲಿ ಸೋಂಕಿತರಾದ ಶೇ 80ರಷ್ಟು ಮಂದಿಗೆ ಅಷ್ಟಾಗಿ ಲಕ್ಷಣಗಳು ಗೋಚರಿಸಿರಲಿಲ್ಲ. ಶೇ 15ರಷ್ಟು ಮಂದಿಗೆ ಸೌಮ್ಯ ಮತ್ತು ಮಧ್ಯಮ ಸ್ವರೂಪದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಶೇ 5 ರಷ್ಟು ಮಂದಿಗೆ ತೀವ್ರ ಸ್ವರೂಪದ ಲಕ್ಷಣಗಳಿದ್ದವು. ಹೀಗಾಗಿ, ಸೋಂಕಿತರಲ್ಲಿ ಹೆಚ್ಚಿನವರು ಮನೆ ಆರೈಕೆಗೆ ಒಳಗಾಗಿದ್ದರು. ಇದರಿಂದಾಗಿ ಎರಡನೇ ಅಲೆ ಕಾಣಿಸಿಕೊಂಡ ಮೂರು ತಿಂಗಳೊಳಗೆ (ಮಾ.23 ರಿಂದ ಜೂ.18) 2.03 ಲಕ್ಷ ಮಕ್ಕಳು ಸೋಂಕಿತರಾಗಿದ್ದಾರೆ.

ಬೇಗ ಚೇತರಿಕೆ: ಎರಡನೇ ಅಲೆಯಲ್ಲಿ 10 ವರ್ಷದೊಳಗಿನ 57,392 ಮಕ್ಕಳು ಸೋಂಕಿತರಾಗಿದ್ದಾರೆ. ಅದೇ ರೀತಿ, 10 ರಿಂದ 19ವರ್ಷದ ವಯೋಮಾನದವರಲ್ಲಿ 1.46 ಲಕ್ಷ ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಹೆಚ್ಚಿನ ಮಕ್ಕಳು ಲಕ್ಷಣ ರಹಿತರಾಗಿದ್ದು, ಕೆಲವರು ಸೌಮ್ಯ ಮತ್ತು ಮಧ್ಯಮ ಸ್ವರೂಪದ ಲಕ್ಷಣಗಳನ್ನು ಎದುರಿಸಿದ್ದಾರೆ. ಹೀಗಾಗಿ, ಬಹುತೇಕರು ವಿಶೇಷ ಚಿಕಿತ್ಸೆ ಇಲ್ಲದೆಯೇ 10 ದಿನಗಳ ಒಳಗಡೆಯೇ ಚೇತರಿಸಿಕೊಂಡಿದ್ದಾರೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 34 ರಷ್ಟು ಮಂದಿ 18 ವರ್ಷದೊಳಗಿನವರಾಗಿದ್ದು, ಈವರೆಗೆ ಶೇ 2.2 ಮಕ್ಕಳು ಸೋಂಕಿತರಾಗಿದ್ದಾರೆ.

‘ಕೋವಿಡ್‌ ಪೀಡಿತರಾದ ಬಹುತೇಕ ಮಕ್ಕಳಿಗೆ ಸೌಮ್ಯ ಮತ್ತು ಮಧ್ಯಮ ಸ್ವರೂಪದ ಲಕ್ಷಣಗಳು ಕಾಣಿಸಿಕೊಂಡಿವೆ. ಅವರು ಬೇಗ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ಕೋವಿಡ್‌ ಜಯಿಸಿದ ಕೆಲ ಮಕ್ಕಳಲ್ಲಿ ಬಹು ಅಂಗಾಂಗ ಉರಿಯೂತ ಸಮಸ್ಯೆ (ಮಲ್ಟಿಸಿಸ್ಟಮ್ ಇನ್‌ಫ್ಲಮೇಟರಿ ಸಿಂಡ್ರೋಮ್) ಕಾಣಿಸಿಕೊಳ್ಳುತ್ತಿದೆ. ಕೋವಿಡ್ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಪರೀಕ್ಷೆ ಮಾಡಿಸಿಕೊಂಡು, ಪ್ರತ್ಯೇಕ ಇರಬೇಕು. ಮಕ್ಕಳು ಸಂಪರ್ಕಕ್ಕೆ ಬರದಂತೆ ಎಚ್ಚರವಹಿಸಬೇಕು’ ಎಂದು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ (ಐಜಿಐಸಿಎಚ್) ನಿರ್ದೇಶಕ ಡಾ. ಸಂಜಯ್ ಕೆ.ಎಸ್. ತಿಳಿಸಿದರು.

ಸೋಂಕಿನ ತೀವ್ರತೆ ಕಡಿಮೆ

ಕೋವಿಡ್ ಮೊದಲನೇ ಅಲೆಯ ಅವಧಿಯಲ್ಲಿ 60 ರಿಂದ 99 ವರ್ಷದ ವಯೋಮಾನದವರು ಸೋಂಕಿನ ತೀವ್ರತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮೃತಟ್ಟಿದ್ದರು. 90 ರಿಂದ 99 ವರ್ಷದೊಳಗಿನವರಲ್ಲಿ ಗರಿಷ್ಠ ಮರಣ ಪ್ರಮಾಣ ದರ (ಶೇ 11.1) ವರದಿಯಾಗಿತ್ತು. ಈ ಪ್ರಮಾಣ ಮಕ್ಕಳಲ್ಲಿ ಶೇ 0.01ರಷ್ಟಿತ್ತು. ಅಂದರೇ, 19 ವರ್ಷದೊಳಗಿನ 74 ಮಂದಿ ಸಾವಿಗೀಡಾಗಿದ್ದರು. ಎರಡನೇ ಅಲೆಯಲ್ಲಿ 10 ವರ್ಷದೊಳಗಿನ 33 ಮಕ್ಕಳು ಹಾಗೂ 10ರಿಂದ 20 ವರ್ಷದೊಳಗಿನ 39 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೋವಿಡ್ ಕಾಣಿಸಿಕೊಂಡ ಬಳಿಕ ಈವರೆಗೆ 146 ಮಕ್ಕಳು ಮರಣ ಹೊಂದಿದ್ದಾರೆ. ಎರಡನೇ ಅಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸೋಂಕಿತರಾಗಿದ್ದರೂ ಮರಣ ಪ್ರಮಾಣ ದರ ಶೇ 0.1ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT