ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಗಳಲ್ಲಿ ಇಳಿಯದ ಸೋಂಕು: ತ್ರಿಸೂತ್ರ ಪ್ರಯೋಗ

Last Updated 7 ಜೂನ್ 2021, 21:15 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸರಾಸರಿ ದೃಢ ಪ್ರಮಾಣ ಇಳಿಕೆಯಾದರೂ, ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ನಿರೀಕ್ಷಿತ ಮಟ್ಟದಲ್ಲಿ ಕಡಿಮೆಯಾಗಿಲ್ಲ.

ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ತಲಾ 20 ಸಾವಿರಕ್ಕೂ ಹೆಚ್ಚು ಕೋವಿಡ್‌ ಪ್ರಕರಣಗಳು ಗ್ರಾಮೀಣ ಪ್ರದೇಶಗಳಲ್ಲೇ ಈವರೆಗೆ ದೃಢಪಟ್ಟಿವೆ. ಈ ಜಿಲ್ಲೆಗಳ ಬಹುತೇಕ ಹಳ್ಳಿಗಳಿಗೆ ಸೋಂಕು ವ್ಯಾಪಿಸಿದೆ.

ಇಲಾಖೆಯ ಮಾಹಿತಿ ಪ್ರಕಾರಕೋವಿಡ್‌ ಎರಡನೇ ಅಲೆ ಒಟ್ಟು 29,762 ಕಂದಾಯ ಗ್ರಾಮಗಳ ಪೈಕಿ 20,175 ಗ್ರಾಮಗಳಿಗೆ ಹರಡಿದೆ. 9,587 ಗ್ರಾಮಗಳು ಮಾತ್ರ ಸೋಂಕುಮುಕ್ತವಾಗಿವೆ. ಬಾಗಲಕೋಟೆ, ದಕ್ಷಿಣ ಕನ್ನಡ, ಉಡುಪಿ, ವಿಜಯಪುರ, ಧಾರವಾಡ, ಹಾವೇರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ಬಹುತೇಕ ಹಳ್ಳಿಗಳಿಗೆ ಸೋಂಕು ಹರಡಿದೆ.

ಗ್ರಾಮೀಣ ಪ್ರದೇಶಗಳಲ್ಲಿ 18 ವರ್ಷಕ್ಕಿಂತ ಕೆಳಗಿನ 60,376 ಜನರು ಈವರೆಗೆ ಸೋಂಕಿತರಾಗಿದ್ದಾರೆ. 18 ಮತ್ತು ಅದಕ್ಕಿಂತ ಹೆಚ್ಚು ವಯೋಮಾನದ 5,60,696 ಮಂದಿ ಸೋಂಕಿತರಾಗಿದ್ದಾರೆ. 18 ವರ್ಷಕ್ಕಿಂತ ಕೆಳಗಿನ 19 ಮಂದಿ ಹಾಗೂ 18 ವರ್ಷ ದಾಟಿದ 4,948 ಮಂದಿ ಸಾವಿಗೀಡಾಗಿದ್ದಾರೆ. ಸೋಂಕಿತರಿಗಾಗಿ ಗ್ರಾಮ ಪಂಚಾಯಿತಿಮಟ್ಟದಲ್ಲಿ 14,379 ಕೋವಿಡ್‌ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ.

‘ಸೋಂಕು ನಿಯಂತ್ರಿಸಲು ಆರಂಭದಲ್ಲಿ ಗ್ರಾಮ ಪಂಚಾಯಿತಿ ಮತ್ತು ಗ್ರಾಮಮಟ್ಟದಲ್ಲಿ ಮಾತ್ರ ಎರಡು ಹಂತದಲ್ಲಿ ಕಾರ್ಯಪಡೆ ರಚಿಸಲಾಗಿತ್ತು. ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್‌ ನಿಯಂತ್ರಿಸಲು ಅಲ್ಲಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕುಟುಂಬ ಆರೋಗ್ಯ ಸಂರಕ್ಷಣಾ ಪಡೆ ರಚಿಸಿ ವಿನೂತನ ಪ್ರಯೋಗ ಮಾಡಿ ಯಶಸ್ವಿಯಾಗಿದ್ದರು.

ಸಚಿವ ಈಶ್ವರಪ್ಪ ಅವರ ಸೂಚನೆಯಂತೆ ಅದೇ ಮಾದರಿಯನ್ನು ಎಲ್ಲ ಜಿಲ್ಲೆಗಳಲ್ಲಿ ಅನುಸರಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ. ಪ್ರತಿ 50 ಮನೆಗಳಿಗೆ ಒಬ್ಬರು ಸ್ವಯಂಸೇವಕರನ್ನು ನೇಮಿಸಲಾಗುತ್ತಿದ್ದು, ಅವರು ಮನೆಗಳಿಗೆ ಭೇಟಿ ನೀಡಿ ಸೋಂಕು ಲಕ್ಷಣ ಇರುವವರನ್ನು ಗುರುತಿಸಿ ಔಷಧ ಕಿಟ್‌ ನೀಡುತ್ತಾರೆ. ಮೂರು ದಿನಗಳಲ್ಲಿ ಜ್ವರ, ಕೆಮ್ಮು, ನೆಗಡಿ ಲಕ್ಷಣಗಳು ಕಡಿಮೆ ಆಗದಿದ್ದರೆ ಮೊಬೈಲ್‌ ವೈದ್ಯರ ತಂಡದಿಂದ ಕೋವಿಡ್‌ ತಪಾಸಣೆಗೆ ಒಳಪಡಿಸುತ್ತಾರೆ. ಸೋಕು ದೃಢಪಟ್ಟವರನ್ನು ಕೋವಿಡ್‌ ಆರೈಕೆ ಕೇಂದ್ರಗಳಿಗೆ ದಾಖಲಿಸುತ್ತಾರೆ’ ಎಂದು ಪಂಚಾಯತ್‌ರಾಜ್‌ ಆಯುಕ್ತಾಲಯದ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ವಿವರಿಸಿದರು.

‘ಲಸಿಕೆ ಹಾಕುವ ಸಂದರ್ಭದಲ್ಲಿ ಕೋವಿಡ್‌ ಸೋಂಕಿತರು ಕಂಡುಬಂದರೆ ಅವರನ್ನು ಆರೈಕೆ ಕೇಂದ್ರಗಳಿಗೆ ವರ್ಗಾಯಿಸುವ ಹೊಣೆಯನ್ನೂ ಕುಟುಂಬ ಆರೋಗ್ಯ ಸಂರಕ್ಷಣಾ ತಂಡದ ಸದಸ್ಯರಿಗೆ ನೀಡಲಾಗಿದೆ. ಕನಿಷ್ಠ 50 ಮನೆಗಳಲ್ಲಿ ವೈದ್ಯಕೀಯ ಮೇಲ್ವಿಚಾರಣೆಗೆ ಮೊಬೈಲ್‌ ವೈದ್ಯಕೀಯ ತಂಡ ರಚಿಸಲಾಗಿದೆ’ ಎಂದು ತಿಳಿಸಿದರು.

‘ಎಲ್ಲ ಹಳ್ಳಿಗಳಲ್ಲಿ ಮೂರು ಹಂತದ ಕಾರ್ಯಪಡೆ ಕೋವಿಡ್‌ ನಿಯಂತ್ರಣದಲ್ಲಿ ತೊಡಗಿಸಿಕೊಂಡಿದೆ. ಯಾವುದೇ ವ್ಯಕ್ತಿ ಊರಿಗೆ ಬಂದರೆ ಅವರನ್ನು ಪರಿಶೀಲಿಸಲಾಗುತ್ತಿದೆ. ತಪಾಸಣೆ ಸಂದರ್ಭದಲ್ಲಿ ಸೋಂಕು ದೃಢಪಟ್ಟರೆ, ಆರೈಕೆ ಮಾಡಲಾಗುತ್ತದೆ. ಅಲ್ಲದೆ, ಗ್ರಾಮ ಪಂಚಾಯಿತಿಯ ಸುಮಾರು 92 ಸಾವಿರ ಜನಪ್ರತಿನಿಧಿಗಳೂ ಸೇರಿ ಸ್ಥಳೀಯ ಸಂಸ್ಥೆಗಳ ಎಲ್ಲ ಜನಪ್ರತಿನಿಧಿಗಳಿಗೂ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

ಗ್ರಾ.ಪಂ: ಊಟ ಯಾರಿಗೆ?

ಕೋವಿಡ್‌ ವ್ಯಾಪಕವಾಗಿ ಹರಡುತ್ತಿರುವುದರಿಂದ ಗ್ರಾಮ ಪಂಚಾಯಿತಿಗಳ ಲಭ್ಯ ಅನುದಾನದಲ್ಲಿ ಹಳ್ಳಿಗಳಲ್ಲಿ ಊಟ ವಿತರಿಸುವಂತೆ ಸೂಚಿಸಲಾಗಿದೆ. ಪಡಿತರ ಚೀಟಿ ಹೊಂದಿಲ್ಲದವರು ಮತ್ತು ಕುಟುಂಬಕ್ಕೆ ಆದಾಯ ತರುವ ವ್ಯಕ್ತಿ ಕೋವಿಡ್‌ನಿಂದ ಮೃತಪಟ್ಟಿದ್ದರೆ ಅಂಥ ಕುಟುಂಬಗಳ ಸದಸ್ಯರಿಗೆ ಮಾತ್ರ ಊಟ ವಿತರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೂಚಿಸಿದ್ದಾರೆ.


* ಹಳ್ಳಿಗಳಲ್ಲಿ ಮೂರು ಹಂತದ ಕಾರ್ಯಪಡೆ ಸಕ್ರಿಯವಾಗಿದೆ. ಪ್ರತಿಯೊಬ್ಬರ ಮೇಲೂ ನಿಗಾ ವಹಿಸುವುದರಿಂದ ಶೀಘ್ರದಲ್ಲಿಯೇ ಶೇ 100ರಷ್ಟು ಸೋಂಕು ನಿಯಂತ್ರಣಕ್ಕೆ ಬರುವ ವಿಶ್ವಾಸವಿದೆ.

-ಕೆ.ಎಸ್‌. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ

ಹಳ್ಳಿಗಳಲ್ಲಿ 20 ಸಾವಿರಕ್ಕೂ ಹೆಚ್ಚು ಪ್ರಕರಣ ದೃಢಪಟ್ಟ ಜಿಲ್ಲೆಗಳು

ಜಿಲ್ಲೆ; ಕೋವಿಡ್‌ ಪ್ರಕರಣ

ತುಮಕೂರು; 53,642

ಹಾಸನ; 43,176

ಮಂಡ್ಯ; 38,722

ಮೈಸೂರು; 32,391

ಉಡುಪಿ; 32,076

ಬೆಳಗಾವಿ; 26,247

ದಕ್ಷಿಣ ಕನ್ನಡ; 24,033

ಉತ್ತರಕನ್ನಡ; 20,783

ಬಳ್ಳಾರಿ; 20,753

ಚಿಕ್ಕಮಗಳೂರು; 22,364.

ಬೆಂಗಳೂರು (ಗ್ರಾ); 22,050

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT