ಶನಿವಾರ, ನವೆಂಬರ್ 28, 2020
22 °C

Karnataka Covid-19 Updates: ರಾಜ್ಯದಲ್ಲಿ 2,360 ಮಂದಿ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಭಾನುವಾರ 2,740 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿಗೀಡಾದವರ ಒಟ್ಟು ಸಂಖ್ಯೆ 8.46 ಲಕ್ಷಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 1,165 ಮಂದಿ ಸೇರಿದಂತೆ ರಾಜ್ಯದಲ್ಲಿ 2,360 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದರಿಂದಾಗಿ ಗುಣಮುಖರ ಸಂಖ್ಯೆ 8 ಲಕ್ಷದ ಗಡಿ ದಾಟಿದೆ.

ಕೋವಿಡ್ ಪೀಡಿತರಲ್ಲಿ ಬೆಂಗಳೂರಿನಲ್ಲಿ 11 ಮಂದಿ ಸೇರಿದಂತೆ ರಾಜ್ಯದಲ್ಲಿ 22 ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದು, ಕೋವಿಡ್‌ಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 11,391ಕ್ಕೆ ತಲುಪಿದೆ.

ಉಳಿದಂತೆ, 33,678 ಸೋಂಕಿತರು ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇವರಲ್ಲಿ 884 ಮಂದಿ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದಾರೆ. ಒಂದೇ ದಿನ 1.17 ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಈವರೆಗೆ 87.38 ಲಕ್ಷ ಮಂದಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ.

ಬೆಂಗಳೂರಿನಲ್ಲಿ 1,579 ಮಂದಿ ಕೋವಿಡ್ ಪೀಡಿತರಾಗಿದ್ದು, ಸೋಂಕಿತರ ಸಂಖ್ಯೆ 3.49 ಲಕ್ಷ ದಾಟಿದೆ. ಮೈಸೂರಿನಲ್ಲಿ ಹೊಸದಾಗಿ 135 ಪ್ರಕರಣಗಳು ಪತ್ತೆಯಾಗಿವೆ.

ವರದಿ ಬಿಡುಗಡೆ ವಿಳಂಬ: ಕೋವಿಡ್‌ಗೆ ಸಂಬಂಧಿಸಿದ ದೈನಂದಿನ ಮಾಧ್ಯಮ ವರದಿಯನ್ನು ಆರೋಗ್ಯ ಇಲಾಖೆಯು ಭಾನುವಾರ ತಡರಾತ್ರಿ ಬಿಡುಗಡೆ ಮಾಡಿದೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯು 10 ಸಾವಿರದ ಗಡಿ ದಾಟಿದಾಗಲೂ ನಿಗದಿತ ಸಮಯದೊಳಗೆ ಇಲಾಖೆಯು ಪ್ರಕಟಣೆಯನ್ನು ಬಿಡುಗಡೆ ಮಾಡಿತ್ತು. ಪ್ರಕರಣಗಳ ಸಂಖ್ಯೆ ಇಳಿಕೆ ಕಂಡರೂ ಶನಿವಾರ ರಾತ್ರಿ 9.20ಕ್ಕೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದ ಇಲಾಖೆ, ಇದೇ ಮೊದಲ ಬಾರಿ ಕೋವಿಡ್‌ಗೆ ಸಂಬಂಧಿಸಿದ ದೈನಂದಿನ ಮಾಹಿತಿಯನ್ನು ರಾತ್ರಿ 12 ಗಂಟೆಗೆ ನೀಡಿದೆ. 

‘ತಾಂತ್ರಿಕ ಕಾರಣದಿಂದ ಮಿಡಿಯಾ ಬುಲೆಟಿನ್ ಬಿಡುಗಡೆ ವಿಳಂಬವಾಯಿತು’ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು