ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣಾಭಿವೃದ್ಧಿ ಇಲಾಖೆ ಸರ್ವರ್‌ ದುರ್ಬಳಕೆ: ಅಕ್ರಮ ಇ–ಖಾತೆ!

ಡಾಂಗಲ್‌ ಕಾರ್ಡ್‌ ಬಳಸಿ ಕಂಪ್ಯೂಟರ್ ಆಪರೇಟರ್ ಕೃತ್ಯ: ಶಂಕೆ
Last Updated 8 ಮಾರ್ಚ್ 2022, 18:54 IST
ಅಕ್ಷರ ಗಾತ್ರ

ರಾಮನಗರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ (ಆರ್‌ಡಿಪಿಆರ್‌) ಇಲಾಖೆಯ ಸರ್ವರ್‌ ದುರ್ಬಳಕೆ ಮಾಡಿಕೊಂಡು ಜಿಲ್ಲೆ, ಹೊರ ಜಿಲ್ಲೆ ವ್ಯಾಪ್ತಿಯ ಆಸ್ತಿಗಳಿಗೆ ಅಕ್ರಮವಾಗಿ ಇ–ಖಾತೆ ಮಾಡಿಕೊಡುತ್ತಿದ್ದ ಜಾಲ ಪತ್ತೆಯಾಗಿದೆ. ಈ ಸಂಬಂಧ ಜಿಲ್ಲೆಯ ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಹಾಗೂ ಬೈರಮಂಗಲ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸೈಬರ್ ವಿಭಾಗದ ಪೊಲೀಸರು ಶೋಧ ನಡೆಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಬ್ಬರ ಹೆಸರಿಗೆ 36 ಇ–ಖಾತೆಗಳನ್ನು ಮಾಡಿಕೊಡಲಾಗಿತ್ತು. ತಮ್ಮ ಗಮನಕ್ಕೆ ಬಾರದೆಯೇ ಬೇರೆಯವರು ಈ ಕೃತ್ಯ ಎಸಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಮತ್ತೊಂದು ಜಿಲ್ಲೆಯಲ್ಲಿ ಈ ಕೃತ್ಯ ನಡೆದಿರುವುದು ತನಿಖೆ ವೇಳೆ ಗಮನಕ್ಕೆ ಬಂದಿತ್ತು. ಹಾರೋಹಳ್ಳಿ ಗ್ರಾಮ ಪಂಚಾಯಿತಿಯ (ಈಗ ಪಟ್ಟಣ ಪಂಚಾಯಿತಿ) ಹಿಂದಿನ ಅಧ್ಯಕ್ಷರ ಹೆಸರಿನಲ್ಲಿದ್ದ ಇಂಟರ್‌ನೆಟ್‌ ಡಾಂಗಲ್‌ ಕಾರ್ಡ್‌ ಬಳಸಿ ಲಾಗಿನ್‌ ಆಗಿ ಈ ಕೃತ್ಯ ಎಸಗಲಾಗಿತ್ತು. ತನಿಖೆಯ ವೇಳೆ ಪೊಲೀಸರಿಗೆ ಅಲ್ಲಿಯ ಕಂಪ್ಯೂಟರ್ ಆಪರೇಟರ್‌ ಈ ಅಕ್ರಮ ಎಸಗಿರುವ ಮಾಹಿತಿ ಲಭ್ಯವಾಗಿದೆ.

ಬೈರಮಂಗಲ ಗ್ರಾ.ಪಂ.ವ್ಯಾಪ್ತಿಯಲ್ಲೂ ಇಂತಹದ್ದೇ ಪ್ರಕರಣ ನಡೆದಿದೆ ಎನ್ನಲಾಗಿದ್ದು, ಪೊಲೀಸರು ಅಲ್ಲಿನ ಕಂಪ್ಯೂಟರ್‌ಗಳಲ್ಲಿನ ದತ್ತಾಂಶ ಸಂಗ್ರಹಿಸಿದ್ದಾರೆ. ಇಷ್ಟು ದಿನ ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಇ–ಖಾತೆ ಅಕ್ರಮಗಳು ನಡೆಯುತ್ತಿದ್ದವು. ಇದೀಗ ಹೊರ ಜಿಲ್ಲೆಯಲ್ಲಿ ಇನ್ನೊಂದು ಜಿಲ್ಲೆಯ ಸ್ವತ್ತಿನ ಇ–ಖಾತೆ ನಡೆಸಿರುವುದು ಪತ್ತೆಯಾಗಿದೆ.

ದೇವನಹಳ್ಳಿಯಲ್ಲಿ ಮೂಲ: 2021ರ ಸೆಪ್ಟೆಂಬರ್‌ 17ರಿಂದ 20ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ಅವರ ಇ–ಸ್ವತ್ತು ಲಾಗಿನ್‌ ದುರ್ಬಳಕೆ ಮಾಡಿಕೊಂಡು ತಿರುಪತಿ ರೆಡ್ಡಿ ಹಾಗೂ ಅಜಯ್‌ ನರನೆ ಎಂಬುವರ ಹೆಸರಿಗೆ 36 ಇ–ಸ್ವತ್ತು ಖಾತೆ ಮಾಡಿಕೊಡಲಾಗಿತ್ತು. ಇದಕ್ಕಾಗಿ ಚನ್ನಹಳ್ಳಿ ಗ್ರಾ.ಪಂ. ಪಿಡಿಒ ಹಾಗೂ ದೇವನಹಳ್ಳಿ ತಾ.ಪಂ. ಇಒ ಅವರ ಇ–ಸ್ವತ್ತು ಲಾಗಿನ್‌ ಐ.ಡಿ ದುರ್ಬಳಕೆ ಮಾಡಿಕೊಳ್ಳಲಾಗಿತ್ತು.

‘ಎಚ್‌.ಎನ್.ಗುರುಪ್ರಸಾದ್‌ ಹೆಸರಿನಲ್ಲಿದ್ದ ಡಾಂಗಲ್‌ ಕಾರ್ಡ್‌ ಅಸೈನ್‌ ಮಾಡಿ ತಮ್ಮ ಐ.ಡಿ ಹ್ಯಾಕ್ ಮಾಡಲಾಗಿದೆ. ಇ–ಖಾತೆ ವಿಚಾರವೇ ನಮ್ಮ ಗಮನಕ್ಕೆ ಬಂದಿಲ್ಲ’ ಎಂದು ದೇವನಹಳ್ಳಿತಾ.ಪಂ . ಇಒ ಎಚ್‌.ಡಿ.ವಸಂತ
ಕುಮಾರ್ ದೂರು ದಾಖಲಿಸಿದ್ದರು. ಮಾಹಿತಿ ತಂತ್ರಜ್ಞಾನ ಕಾಯ್ದೆ 2008ರ ಅಡಿ ಬೆಂಗಳೂರು ಈಶಾನ್ಯ ವಿಭಾಗ ಸೈಬರ್ ಠಾಣೆ ಪೊಲೀಸರು2021ರ ಡಿ.4ರಂದು ಪ್ರಕರಣ ದಾಖಲಿಸಿಕೊಂಡಿದ್ದರು.

ಎಚ್‌.ಎನ್‌.ಗುರುಪ್ರಸಾದ್ ಹೆಸರಿನಡಾಂಗಲ್ ಕಾರ್ಡ್‌ನ ಗುರುತು ಹುಡುಕಿಕೊಂಡು ಹೊರಟ ಪೊಲೀಸರಿಗೆ ಅದು ಹಾರೋಹಳ್ಳಿ ಗ್ರಾ.ಪಂ. ಅಧ್ಯಕ್ಷರ ಹೆಸರಿನಲ್ಲಿರುವುದು ಪತ್ತೆಯಾಗಿತ್ತು. ಸೈಬರ್‌ ವಿಭಾಗದ ಪೊಲೀಸರು ಆರೋಪಿಗಳಿಗೆ ನೋಟಿಸ್ ನೀಡಿದ್ದಾರೆ. ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT