ಶುಕ್ರವಾರ, ಮೇ 27, 2022
30 °C
ವರ್ಕ್ ಫ್ರಂ ಹೋಂ ಬಳಿಕ ಸೈಬರ್ ಭದ್ರತೆ ಬಗ್ಗೆ ಹೆಚ್ಚಿದೆ ಸವಾಲು

ಸೈಬರ್ ಭದ್ರತೆ: ಜನ ಜಾಗೃತಿಯೂ ಕಂಪನಿಗಳ ಯಶಸ್ಸಿಗೆ ಪೂರಕ

ಅವಿನಾಶ್ ಬಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಮನೆಯಿಂದಲೇ ಕೆಲಸ ನಿರ್ವಹಿಸುವಂತಾದ ಕೋವಿಡ್ ಕಾಲದಲ್ಲಿ ಸೈಬರ್ ದಾಳಿಗಳೂ ಹೆಚ್ಚಾದವು. ಇದಕ್ಕೆ ಪ್ರಧಾನ ಕಾರಣವೆಂದರೆ, ಕಂಪನಿಯೊಳಗಿನ ನೆಟ್‌ವರ್ಕ್‌ನಲ್ಲಿದ್ದ ವ್ಯವಸ್ಥೆಗಳು ಮುಕ್ತ ಪರಿಸರಕ್ಕೆ ಬಂದವು. ಇಂಥ ಸಂದರ್ಭದಲ್ಲಿ ಸೈಬರ್ ದಾಳಿಗಳ ನಿಯಂತ್ರಣ ಬಲುದೊಡ್ಡ ಸವಾಲು. ಸೈಬರ್ ಸುರಕ್ಷತೆಯ ಬಗ್ಗೆ ಆಂತರಿಕ ಉದ್ಯೋಗಿಗಳನ್ನು ತಜ್ಞರನ್ನಾಗಿ ರೂಪಿಸುವುದಷ್ಟೇ ಅಲ್ಲದೆ, ಅಂತಿಮ ಹಂತದ ಬಳಕೆದಾರರಿಗೂ (ಗ್ರಾಹಕರು) ತರಬೇತಿ ನೀಡಿ ಜಾಗೃತಿಗೊಳಿಸುವುದು ಅತ್ಯಗತ್ಯ.

ಬೆಂಗಳೂರು ಟೆಕ್ ಶೃಂಗದಲ್ಲಿ ಗುರುವಾರ "ಡಿಜಿಟಲ್ ವಿಶ್ವಾಸಾರ್ಹತೆಯ ಖಾತರಿ: ಹೊಸ ಜೀವನ ಪದ್ಧತಿಯಲ್ಲಿ ಸೈಬರ್ ಭದ್ರತೆಯ ಅನಿವಾರ್ಯತೆ" ಕುರಿತ ಸಂವಾದ ಗೋಷ್ಠಿಯಲ್ಲಿ ಈ ಅಂಶ ಪ್ರಧಾನವಾಗಿ ಚರ್ಚೆಗೀಡಾಯಿತು.

ಈಗ ಸೈಬರ್ ಸುರಕ್ಷತೆ ಎಂಬುದು ಕೇವಲ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯವಾಗುಳಿದಿಲ್ಲ. ಉದ್ಯಮದ ಯಶಸ್ಸು ಸೈಬರ್ ಭದ್ರತೆಯನ್ನು ಅವಲಂಬಿಸಿದೆ ಮತ್ತು ಅದರ ವ್ಯಾಪ್ತಿಯು ವಿಸ್ತಾರವಾಗಿರುವುದು ಧನಾತ್ಮಕ ಬೆಳವಣಿಗೆ ಎಂದು ಇಸ್ರೇಲ್‌ನ ಚೆಕ್ ಪಾಯಿಂಟ್ ಸಿಇಒ ಗಿಲ್ ಶ್ವೆಡ್ ಅಭಿಪ್ರಾಯಪಟ್ಟರು.

ಸೈಬರ್ ಭದ್ರತೆ ಎಂಬುದು ವ್ಯವಸ್ಥೆಯ ದತ್ತಾಂಶವು ಕನಿಷ್ಠ ಹದಿನೈದರಷ್ಟು ಬೇರೆ ಅಪ್ಲಿಕೇಶನ್‌ಗಳಿಗೆ ಸಂಪರ್ಕಗಳನ್ನು ಒಳಗೊಂಡಿರುವ ವಿಚಾರ. ಪ್ರತಿಯೊಂದು ಕೊಂಡಿಯ ಬಗ್ಗೆಯೂ ಎಚ್ಚರಿಕೆ ವಹಿಸಬೇಕಿದೆ. ಯಾವುದೇ ಸಡಿಲ ಭಾಗದಲ್ಲಿ ಮಾಹಿತಿಗೆ ಕನ್ನ ಹಾಕಬಹುದಾಗಿದೆ. ಇದು ಕಂಪ್ಯೂಟರ್ ಅಥವಾ ಸಿಸ್ಟಂಗಳನ್ನು ಮಾತ್ರವೇ ಅಲ್ಲ, ಇಡೀ ಸಂಸ್ಥೆಯ ಮೇಲೆ, ಅದರ ವಿಶ್ವಾಸಾರ್ಹತೆಯ ಮೇಲೆ ಮತ್ತು ಅದರ ಯಶಸ್ಸಿನ ಮೇಲೆ ನೇತ್ಯಾತ್ಮಕ ಪರಿಣಾಮಕ್ಕೆ ಕಾರಣವಾಗಬಹುದು ಎಂದು ಸಂವಾದಗೋಷ್ಠಿ ನಿರ್ವಹಿಸಿದ ಇನ್ಫೋಸಿಸ್ ಸೈಬರ್ ಭದ್ರತಾ ವಿಭಾಗದ ಮುಖ್ಯಸ್ಥ ವಿಶಾಲ್ ಸಾಲ್ವಿ ಹೇಳಿದರು. ಸೈಬರ್ ದಾಳಿಗೆ ಮೊದಲೇ ತಡೆಬೇಲಿ ನಿರ್ಮಿಸಿಕೊಳ್ಳುವುದು ಈಗಿನ ಅಗತ್ಯ ಎಂದರು.

ಸೈಬರ್ ಭದ್ರತೆ ಎಂಬುದು ಬ್ರ್ಯಾಂಡ್ ಒಂದರ ಅವಿಭಾಜ್ಯ ಅಂಗವಾಗಿದ್ದು, ದತ್ತಾಂಶ ಸಂರಕ್ಷಣೆಯು ಅದರ ಮೂಲಭೂತ ಹೊಣೆಗಾರಿಕೆ ಎಂದು ಇಂಟರ್ ಬ್ರ್ಯಾಂಡ್ ಇಂಡಿಯಾದ ಎಂಡಿ ಆಶಿಶ್ ಮಿಶ್ರಾ ಹೇಳಿದರು. ದತ್ತಾಂಶ ಹ್ಯಾಕ್ ಆದರೆ ಸಂಸ್ಥೆಯ ವಿಶ್ವಾಸಾರ್ಹತೆಗೆ, ಗ್ರಾಹಕರ ಜೊತೆಗಿನ ಸಂಬಂಧಕ್ಕೆ ದೊಡ್ಡ ಹೊಡೆತ. ಸೈಬರ್ ಭದ್ರತೆ ಎಂಬುದು ಸರಕಾರದ, ಕಂಪನಿಗಳ ಮಟ್ಟದಲ್ಲಷ್ಟೇ ನಡೆಯುತ್ತಿದೆ. ಇದು ಗ್ರಾಹಕರ ಮಟ್ಟಕ್ಕೂ ತಲುಪಬೇಕಿದ್ದು, ಜನಜಾಗೃತಿಯು ಸರಕಾರಗಳು ಮತ್ತು ಕಂಪನಿಗಳ ಸಾಮೂಹಿಕ ಹೊಣೆಗಾರಿಕೆಯಾಗಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಬಿಹೆಚ್‌ಪಿಯ ಸೈಬರ್ ಅಧಿಕಾರಿ ಥಾಮಸ್ ಲೀ ಮಾತನಾಡಿ, ಆಧುನಿಕ ಸೈಬರ್ ದಾಳಿಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿಭೆ ಅತ್ಯಗತ್ಯ. ಕುಶಲಿಗಳ ಕೊರತೆಯಿದೆ. ಸಾಂಪ್ರದಾಯಿಕ ನೇಮಕಾತಿ ಪ್ರಕ್ರಿಯೆಗಳಿಂದ ಇದು ಕಷ್ಟ. ಇರುವ ಉದ್ಯೋಗಿಗಳಿಗೇ ತರಬೇತಿ ನೀಡಿ ಸಜ್ಜುಗೊಳಿಸಬೇಕಿದೆ ಎಂದರು.

ತಮ್ಮ ಕೆಲಸ ಕಾರ್ಯಗಳನ್ನು ಸುರಕ್ಷಿತವಾಗಿ ಮಾಡುವುದು ಹೇಗೆ ಎಂಬ ಬಗ್ಗೆ ಬಳಕೆದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಭದ್ರತಾ ಬೆದರಿಕೆಗಳು, ಸಂಬಂಧಿತ ಅಪಾಯಗಳು, ಅವುಗಳ ಸಮರ್ಪಕ ನಿರ್ವಹಣೆ ಬಗ್ಗೆ ಸೈಬರ್ ತಂಡಕ್ಕಲ್ಲದೆ, ಗ್ರಾಹಕರಿಗೂ ತಿಳಿಹೇಳಬೇಕಾಗಿದೆ ಎಂದು ಥಾಮಸ್ ಲೀ ಹೇಳಿದರು.

ಸಂವಾದಗೋಷ್ಠಿಯ ಆರಂಭದಲ್ಲಿ ಭಾರತದ ಇಸ್ರೇಲ್ ರಾಯಭಾರಿ ಹೆಚ್.ಇ.ನಿಯೊರ್ ಗಿಲೋನ್ ಅವರು, "5ನೇ ಪೀಳಿಗೆಯ ಸೈಬರ್ ದಾಳಿಗಳು ಅತ್ಯಾಧುನಿಕವಾಗಿವೆ. ಇವುಗಳ ತಡೆಗೆ ಗಮನ ಹರಿಸಬೇಕಿದೆ" ಎನ್ನುತ್ತಾ ಚರ್ಚೆಗೆ ಚಾಲನೆ ನೀಡಿದ್ದರು.

ವಿಶ್ವಾಸಾರ್ಹತೆ: ಸ್ಟಾರ್ ಬಕ್ಸ್ ಕಥೆ
ಬದಲಾದ ಯುಗದಲ್ಲಿ ಕಂಪನಿಗಳು ವಿಶ್ವಾಸಾರ್ಹತೆ ವೃದ್ಧಿಗೆ ಯಾವ ರೀತಿ ಮುಂದಾಗುತ್ತಿವೆ ಎಂಬುದರ ಬಗ್ಗೆ ಗೋಷ್ಠಿಯಲ್ಲಿ ಇಂಟರ್ ಬ್ರ್ಯಾಂಡ್ ಇಂಡಿಯಾ ಎಂಡಿ ಆಶಿಶ್ ಮಿಶ್ರಾ ಅವರು ಮೂರು ವರ್ಷಗಳ ಹಿಂದೆ ಅಮೆರಿಕದಲ್ಲಿ ನಡೆದ ಘಟನೆಯನ್ನು ಉದಾಹರಿಸಿದರು.

ಅಮೆರಿಕದ ಅತಿದೊಡ್ಡ ಕಾಫಿ ಹೌಸ್ 'ಸ್ಟಾರ್ ಬಕ್ಸ್'ನ ಫಿಲಡೆಲ್ಫಿಯಾದ ಮಳಿಗೆಗೆ ಬಂದ ಇಬ್ಬರು, ಕೆಫೆಯ ಶೌಚಾಲಯ ಬಳಸಲು ಅವಕಾಶ ಕೇಳಿದರು. ಅವರು ಗ್ರಾಹಕರಲ್ಲದಿರುವುದರಿಂದ ಸಿಬ್ಬಂದಿ ತಡೆದರು. ಮಾತಿಗೆ ಮಾತು ಬೆಳೆದು, ಪೊಲೀಸರನ್ನು ಕರೆಸಿ ಇಬ್ಬರನ್ನು ಬಂಧಿಸಲಾಯಿತು.

ಆದರೆ, ಇದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿ, ಸ್ಟಾರ್ ಬಕ್ಸ್ ವಿರುದ್ಧ ಜನಾಂಗೀಯ ತಾರತಮ್ಯದ ಬಗ್ಗೆ ಜನಾಕ್ರೋಶವೆದ್ದಿತು. ಕೊನೆಗೆ ಸ್ಟಾರ್ ಬಕ್ಸ್ ಸಿಇಒ ಕೆವಿನ್ ಜಾನ್ಸನ್ ಕ್ಷಮೆ ಕೇಳಿದರು. ಅಷ್ಟಕ್ಕೇ ನಿಲ್ಲಲಿಲ್ಲ. ಗ್ರಾಹಕರ ಬಗೆಗಿನ ಧೋರಣೆಯನ್ನು ಬದಲಿಸುವಂತೆ ಹೊಸ ನೀತಿಯನ್ನೇ ಕಂಪನಿಯು ಜಾರಿಗೆ ತಂದಿತು. ಖರೀದಿ ಮಾಡದವರೂ ಗ್ರಾಹಕರೇ ಎಂದು ಸ್ಟಾರ್ ಬಕ್ಸ್ ಪರಿಗಣಿಸಿತು. ಈ ಬಗ್ಗೆ ಸಿಬ್ಬಂದಿಗೆ ತರಬೇತಿಗಾಗಿಯೇ ಎಲ್ಲ ಸ್ಟಾರ್ ಬಕ್ಸ್ ಕೆಫೆಗಳನ್ನು ಮೂರು ದಿನ ಮುಚ್ಚಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು